ADVERTISEMENT

ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಪ್ರಧಾನಿಗೆ ಅಷ್ಟೊಂದು ಭಯವೇ: ಕಾಂಗ್ರೆಸ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2022, 13:28 IST
Last Updated 4 ಆಗಸ್ಟ್ 2022, 13:28 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯವು(ಇ.ಡಿ) ಸಮನ್ಸ್ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಖರ್ಗೆ ಅವರನ್ನು ಕಂಡರೆ ಪ್ರಧಾನಿ ನರೇಂದ್ರ ಮೋದಿಗೆ ಅಷ್ಟೊಂದು ಭಯವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ಬಿಜೆಪಿಯ ಧಮನಕಾರಿ ನೀತಿಗಳಿಂದ ಕಾಂಗ್ರೆಸ್‌ನ ಧ್ವನಿಯನ್ನು ಅಡಗಿಸಲಾಗದು. ರಾಜ್ಯಸಭೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ ಅಧಿವೇಶನದಲ್ಲಿ ಇರುವಾಗಲೇ ಸರ್ಕಾರ ಇಡಿಯಿಂದ ಸಮನ್ಸ್ ಜಾರಿ ಮಾಡಿಸಿ ಸಂಸತ್ತಿನಲ್ಲಿ ಖರ್ಗೆಯವರ ಪ್ರಶ್ನೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ’ ಎಂದು ಹರಿಹಾಯ್ದಿದೆ.

ADVERTISEMENT

‘ರಾಜ್ಯಸಭೆಯ ವಿಪಕ್ಷ ನಾಯಕ ಖರ್ಗೆ ಅವರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಕಂಡರೆ ಪ್ರಧಾನಿಗೆ ಅಷ್ಟೊಂದು ಭಯವೇ? ಅವರ ಪ್ರಶ್ನೆಗಳನ್ನು ಎದುರಿಸಲು ಅಷ್ಟೊಂದು ಹಿಂಜರಿಕೆಯೇ?’ ಎಂದು ಕೇಳಿದೆ.

‘ಇ.ಡಿ ಸಂಸ್ಥೆಯನ್ನು ಮುಂದಿಟ್ಟು ಪ್ರಶ್ನೆಗಳಿಂದ ಪಲಾಯನ ಮಾಡುವ ಬಿಜೆಪಿ ತಂತ್ರಗಳು ನಡೆಯದು. ಉತ್ತರ ಕೊಡಬೇಕಾದವರು ಉತ್ತರಕುಮಾರನಂತೆ ವರ್ತಿಸುತ್ತಿದ್ದಾರೆ. ಇದು ಹೇಡಿಗಳ ಲಕ್ಷಣವೇ ಹೊರತು ಪ್ರಜಾಪ್ರಭುತ್ವವಾದಿಗಳದ್ದಲ್ಲ’ ಎಂದು ಟೀಕಿಸಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಒಡೆತನದ ಯಂಗ್ ಇಂಡಿಯಾ ಕಂಪನಿಯಲ್ಲಿ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಹೆರಾಲ್ಡ್ ಹೌಸ್ ಕಟ್ಟಡದಲ್ಲಿರುವ ಕಚೇರಿಯಲ್ಲಿ ಈ ಶೋಧ ನಡೆಯುತ್ತಿದ್ದು, ಸಂಸ್ಥೆಯ ಪರವಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.