ಬೆಂಗಳೂರು/ ಕಲಬುರಗಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವಂತೆ ದಲಿತ ಸಚಿವರು, ಕೆಲವು ಶಾಸಕರು ಒತ್ತಡ ಹೇರುತ್ತಿರುವ ಬೆನ್ನಲ್ಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳ (ಪಿಸಿಸಿ) ಅಧ್ಯಕ್ಷರನ್ನು ಸದ್ಯವೇ ಬದಲಾಯಿಸಲಾಗುವುದು’ ಎಂದು ಹೇಳಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಖರ್ಗೆ ಅವರು, ‘ರಾಜ್ಯಕ್ಕೆ (ಕರ್ನಾಟಕಕ್ಕೆ) ಸೀಮಿತವಾಗಿ ಯಾವುದನ್ನೂ ಹೇಳಲಾಗದು. ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹಿಂದುಳಿದ ವರ್ಗದವರನ್ನು ಅಧ್ಯಕ್ಷರನ್ನಾಗಿ ಈಗಾಗಲೇ ನೇಮಿಸಿದ್ದೇವೆ. ಎರಡ್ಮೂರು ರಾಜ್ಯಗಳ ಅಧ್ಯಕ್ಷರನ್ನು ಶೀಘ್ರವೇ ಬದಲಾವಣೆ ಮಾಡಲಾಗುವುದು. ಜೊತೆಗೆ, ಕೆಲವೆಡೆ ಪದಾಧಿಕಾರಿಗಳನ್ನೂ ನೇಮಿಸಲಾಗುವುದು’ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳದ ಖರ್ಗೆ, ಪಕ್ಷ ಸಂಘಟನೆಯಲ್ಲಿ ಶೀಘ್ರದಲ್ಲೇ ಬದಲಾವಣೆ ಆಗಲಿದೆ ಎಂಬ ಸುಳಿವನ್ನು ಪರೋಕ್ಷವಾಗಿ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರದಲ್ಲಿರುವ ನಿವಾಸದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಭಾನುವಾರ (ಫೆ.9) ಭೇಟಿ ಮಾಡಿ ಸುಮಾರು 45 ನಿಮಿಷ ಚರ್ಚೆ ನಡೆಸಿದ್ದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಪರಿಶಿಷ್ಟರ ಸಮಾವೇಶದ ಬಗ್ಗೆ ರಾಷ್ಟ್ರೀಯ ನಾಯಕರಲ್ಲಿ ಪ್ರಸ್ತಾಪಿಸಿದ್ದರು. ಆ ಬೆನ್ನಲ್ಲೆ ಖರ್ಗೆ ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಚಟುವಟಿಕೆ ಮತ್ತೆ ಗರಿಗೆದರುವಂತೆ ಮಾಡಿದೆ.
ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಮರಳಿರುವ ಸತೀಶ ಜಾರಕಿಹೊಳಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿ, ‘ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ ನಾವೇನು ಹೇಳುವುದು? ನಮ್ಮ ಪಾತ್ರ ಏನೂ ಇಲ್ಲ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರನ್ನು ಕರೆಸಿ ಮಾತನಾಡುತ್ತಾರೆ. ನಮಗೆ ಯಾವ ಅಧಿಕಾರವಿದೆ ಹೇಳಿ. ಅಧ್ಯಕ್ಷರ ಆಯ್ಕೆ ಹೇಗೆ ಆಗುತ್ತದೆ ಎನ್ನುವುದೂ ಗೊತ್ತಿಲ್ಲ’ ಎಂದರು.
‘ನಮ್ಮ ಇಲಾಖೆಯ ಕೆಲಸಕ್ಕಾಗಿ ನವದೆಹಲಿಗೆ ತೆರಳಿದ್ದೆ. ಇದೇ ವೇಳೆ ಎಐಸಿಸಿ ಅಧ್ಯಕ್ಷರು, ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನೂ ಭೇಟಿ ಮಾಡಿದ್ದೆ. ಅವರು ಏನು ಕೇಳಬೇಕೊ ಅದನ್ನು ಕೇಳುತ್ತಾರೆ. ಸರ್ಕಾರದ ಬಗ್ಗೆ ಸ್ವಾಭಾವಿಕವಾಗಿ ಅವರು ಯೋಚನೆ ಮಾಡುತ್ತಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆ ಮಾಡುತ್ತಾರೆ’ ಎಂದೂ ಹೇಳಿದರು.
‘ಅಹಿಂದ’ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಾರಕಿಹೊಳಿ, ‘ಚರ್ಚೆ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪ ಮಾಡುತ್ತೇವೆ. ನಾನೊಬ್ಬನೇ ತೀರ್ಮಾನ ಮಾಡಲು ಆಗುವುದಿಲ್ಲ. ಎಲ್ಲರೂ ಸೇರಿ ಚರ್ಚೆ ಮಾಡಬೇಕಾಗುತ್ತದೆ’ ಎಂದೂ ಹೇಳಿದರು.
ಸಚಿವರ ಪ್ರವಾಸ ರದ್ದು: ಜಿ.ಪರಮೇಶ್ವರ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಅವರು ನವದೆಹಲಿಗೆ ಬುಧವಾರ ಸಂಜೆ ಹೋಗಬೇಕಿತ್ತು. ಪಕ್ಷದ ನಾಯಕರು ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಬೇಕಿತ್ತು. ಹೈಕಮಾಂಡ್ ಸೂಚನೆ ಮೇರೆಗೆ ಸಚಿವರಿಬ್ಬರು ಪ್ರವಾಸ ಮುಂದೂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.