ADVERTISEMENT

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ: ನಂಜೇಗೌಡರೇ ವಿನ್ನರ್ ಎಂದ ಸುಪ್ರೀಂ

ನಂಜೇಗೌಡ ಆಯ್ಕೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 10:29 IST
Last Updated 5 ಫೆಬ್ರುವರಿ 2026, 10:29 IST
<div class="paragraphs"><p>ಕರ್ನಾಟಕ ಹೈಕೋರ್ಟ್, ಕೆ.ವೈ. ನಂಜೇಗೌಡ, ಸುಪ್ರೀಂ ಕೋರ್ಟ್</p></div>

ಕರ್ನಾಟಕ ಹೈಕೋರ್ಟ್, ಕೆ.ವೈ. ನಂಜೇಗೌಡ, ಸುಪ್ರೀಂ ಕೋರ್ಟ್

   

ನವದೆಹಲಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್‌ನ  ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ನಂಜೇಗೌಡರು ತಮ್ಮ ಎದುರಾಳಿ ಬಿಜೆಪಿಯ ಕೆ.ಎಸ್. ಮಂಜುನಾಥ್ ಗೌಡ ಅವರಿಗಿಂತ 250 ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬುದನ್ನು ಗಮನಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ  ಬಾಗ್ಚಿ ಅವರಿದ್ದ ಪೀಠವು ಕರ್ನಾಟಕ ಹೈಕೋರ್ಟ್‌ನ ಸೆಪ್ಟೆಂಬರ್ 2025ರ ತೀರ್ಪನ್ನು ರದ್ದುಗೊಳಿಸಿತು.

ADVERTISEMENT

ಚುನಾವಣಾ ಆಯೋಗವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ಮರು ಮತ ಎಣಿಕೆಯ ಫಲಿತಾಂಶವನ್ನು ಅರ್ಜಿದಾರರು–ಪ್ರತಿವಾದಿಗಳ ಸಮ್ಮುಖದಲ್ಲಿ ತೆರೆದ ನ್ಯಾಯಪೀಠವು, ಮತಗಳ ಮರುಎಣಿಕೆಯ ನಂತರವೂ ನಂಜೇಗೌಡ ಅಧಿಕ ಮತಗಳನ್ನು ಗಳಿಸಿದ್ದಾರೆ ಎಂದು ಗಮನಿಸಿತು. ಮರು ಮತ ಎಣಿಕೆಯಲ್ಲಿ ನಂಜೇಗೌಡ 50,957 ಮತಗಳನ್ನು ಮತ್ತು ಮಂಜುನಾಥ ಗೌಡ 50,707 ಮತಗಳನ್ನು ಪಡೆದಿದ್ದಾರೆ. 

ಎಣಿಕೆ ಪ್ರಕ್ರಿಯೆಯ ವಿಡಿಯೋ ರೆಕಾರ್ಡಿಂಗ್ ಕಡ್ಡಾಯವೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಮತ ಎಣಿಕೆ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿಲ್ಲ. ಸಾಕಷ್ಟು ಅಕ್ರಮ ಎಸಗಲಾಗಿದೆ’ ಎಂದು ಆರೋಪಿಸಿ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. 

‘ಈ ಕ್ಷೇತ್ರದ ಮತಗಳನ್ನು ನಾಲ್ಕು ವಾರಗಳಲ್ಲಿ ಪುನಃ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು. ಅದರಲ್ಲಿ ಯಾರು ಹೆಚ್ಚು ಮತಗಳಿಸಿದವರು ಎಂದು ಕಂಡುಬರುತ್ತದೆಯೋ ಅಂಥವರನ್ನು ಆಯ್ಕೆಯಾದ ಅಭ್ಯರ್ಥಿ ಎಂದು ಘೋಷಿಸಬೇಕು’ ಎಂದು ನ್ಯಾಯಪೀಠವು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. 

‘ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ 15 ಸ್ಪರ್ಧಿಗಳ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಮತಗಳ ಎಣಿಕೆ ಒಂದೇ ಕೊಠಡಿಯಲ್ಲಿ ನಡೆಯಬೇಕಿತ್ತು. ಆದರೆ, ಎರಡು ಪ್ರತ್ಯೇಕ ಕೊಠಡಿಗಳಲ್ಲಿ ನಡೆದಿದೆ. ಈ ಮೂಲಕ ಜನಪ್ರತಿನಿಧಿಗಳ ಕಾಯ್ದೆ-1951 ಮತ್ತು ಚುನಾವಣಾ ಆಯೋಗ ಪ್ರಕಟಿಸಿದ್ದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ನಂಜೇಗೌಡ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಚುನಾವಣಾ ಆಯೋಗದ ಕ್ರಮವನ್ನು ರದ್ದುಪಡಿಸಬೇಕು. ಮತಗಳ ಮರು ಎಣಿಕೆಗೆ ನಿರ್ದೇಶಿಸಬೇಕು‘ ಎಂದು ಮಂಜುನಾಥ್‌ ಗೌಡ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.