ADVERTISEMENT

ವೈದ್ಯಕೀಯ ಸಿಬ್ಬಂದಿಗೆ ಅವಧಿ ವಿಮೆ ಕಡ್ಡಾಯ: ಡಾ‌. ಶರಣಪ್ರಕಾಶ್ ಪಾಟೀಲ

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 16:20 IST
Last Updated 4 ಜನವರಿ 2026, 16:20 IST
ಶರಣಪ್ರಕಾಶ್ ಪಾಟೀಲ
ಶರಣಪ್ರಕಾಶ್ ಪಾಟೀಲ   

ಬೆಂಗಳೂರು: ‘ಎಲ್ಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಪ್ರಸ್ತುತ ಸಂಬಳ ಮತ್ತು ಹುದ್ದೆಗೆ ಅನುಗುಣವಾಗಿ ಅವಧಿ ವಿಮೆ (ಟರ್ಮ್ ಇನ್‌ಶ್ಯೂರೆನ್ಸ್‌) ಕಡ್ಡಾಯವಾಗಿ ಪಡೆಯಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ‌. ಶರಣಪ್ರಕಾಶ್ ಪಾಟೀಲ ತಿಳಿಸಿದ್ದಾರೆ.

ಈ ಕುರಿತಂತೆ ತಕ್ಷಣ ಆದೇಶ ಹೊರಡಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರಿಗೆ ಸಚಿವರು ಸೂಚಿಸಿದ್ದಾರೆ.

ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ವಿಮಾ ಹಣ ಪಡೆಯಲು ಅವರ ಕುಟುಂಬದ ಸದಸ್ಯರು ತಾಂತ್ರಿಕ ಸಮಸ್ಯೆಗಳು ಎದುರಿಸಿದ ಕಾರಣ, ತಮ್ಮ ಇಲಾಖೆಯ ಅಡಿಯಲ್ಲಿರುವ ಎಲ್ಲ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮಾಜಿಕ ಭದ್ರತಾ ಕ್ರಮವಾಗಿ ಕಡ್ಡಾಯವಾಗಿ ಅವಧಿ ವಿಮೆ ಪಡೆಯುವಂತೆ ಸಚಿವರು ಸೂಚನೆ ನೀಡಿದ್ದಾರೆ.

ADVERTISEMENT

ಶನಿವಾರ ನಡೆದ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ವಿಮಾ ಹಣ ಪಡೆಯಲು ಬೀಳಗಿ ಅವರ ಕುಟುಂಬಕ್ಕೆ ಎದುರಾದ ಸಮಸ್ಯೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಐಎಎಸ್‌ಗೆ ಬಡ್ತಿ ಪಡೆದ ನಂತರ ಅವಧಿ ವಿಮಾ ವ್ಯವಸ್ಥೆಯಲ್ಲಿ ತಮ್ಮ ಸೇವಾ ವಿವರವನ್ನು ಬೀಳಗಿಯವರು ದಾಖಲಿಸಿರಲಿಲ್ಲ. ಇದರಿಂದಾಗಿ ಅವರ ಕುಟುಂಬ ವರ್ಗದವರಿಗೆ ಸುಮಾರು ₹ 50 ಲಕ್ಷ ಕಡಿಮೆ ವಿಮೆ ಮೊತ್ತ ಸಿಕ್ಕಿದೆ’ ಎಂದಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಅವಧಿ ವಿಮೆ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ, ಎಲ್ಲ ಸಿಬ್ಬಂದಿಗೂ ವಿಶೇಷವಾಗಿ ಕಡಿಮೆ ವೇತನ ಶ್ರೇಣಿಯಲ್ಲಿರುವವರಿಗೆ ವಿಮೆ ಆಯ್ಕೆ ಕುರಿತು ಅರಿವು ಮೂಡಿಸಬೇಕು’ ಎಂದು ಸಚಿವರು ಹೇಳಿದ್ದಾರೆ.

ಗುತ್ತಿಗೆ ನೇಮಕ: ‘ಇಲಾಖೆಯಲ್ಲಿರುವ ಅರ್ಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಹುದ್ದೆ ವ್ಯಾಪ್ತಿಗೆ ತರುವ ಕುರಿತು, ಸೂಕ್ತ ಮೀಸಲಾತಿ ರೋಸ್ಟರ್ ಪಾಲಿಸಬೇಕು. ಉದ್ಯೋಗದಲ್ಲಿ ನ್ಯಾಯ ಒದಗಿಸಲು ಈ ರೀತಿಯ ಕ್ರಮ ಅಗತ್ಯವಾಗಿದೆ’ ಎಂದೂ ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.