ADVERTISEMENT

ಮಂಡ್ಯ ಸ್ವಾಭಿಮಾನಿಗಳ ವಿಜಯೋತ್ಸವ: ಹತಾಶರಾಗಿ ಕೆಣಕದಿರಿ, ಜತೆಗೆ ಬನ್ನಿ-ಸುಮಲತಾ

ಜಿಲ್ಲೆಯ ಜೆಡಿಎಸ್‌ ಶಾಸಕರಿಗೆ ಸುಮಲತಾ ಆಹ್ವಾನ

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:45 IST
Last Updated 29 ಮೇ 2019, 19:45 IST
ಮಂಡ್ಯದ ಸಿಲ್ವರ್‌ ಜ್ಯುಬಿಲಿ ಉದ್ಯಾನದಲ್ಲಿ ಬುಧವಾರ ನಡೆದ ಅಂಬರೀಷ್‌ ಜನ್ಮದಿನ, ಸ್ವಾಭಿಮಾನಿಗಳ ವಿಜಯೋತ್ಸವದಲ್ಲಿ ಸುಮಲತಾ ಅವರು ಅಂಬರೀಷ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಮಂಡ್ಯದ ಸಿಲ್ವರ್‌ ಜ್ಯುಬಿಲಿ ಉದ್ಯಾನದಲ್ಲಿ ಬುಧವಾರ ನಡೆದ ಅಂಬರೀಷ್‌ ಜನ್ಮದಿನ, ಸ್ವಾಭಿಮಾನಿಗಳ ವಿಜಯೋತ್ಸವದಲ್ಲಿ ಸುಮಲತಾ ಅವರು ಅಂಬರೀಷ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ಮಂಡ್ಯ: ‘ಕಾವೇರಿ ನೀರಿನ ಸಮಸ್ಯೆ ಮಾತುಗಳಿಂದ ಬಗೆಹರಿಯುವುದಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲಾ ಎಂಟು ಜೆಡಿಎಸ್‌ ಶಾಸಕರು ಹತಾಶೆಯಿಂದ ಕೆಣಕಬೇಡಿ. ನನ್ನ ಜೊತೆಗೆ ಬನ್ನಿ; ಒಗ್ಗಟ್ಟಿನಿಂದ ಜನರಿಗೆ ನೀರು ಕೊಡುವ ಕೆಲಸ ಮಾಡೋಣ’ ಎಂದು ನೂತನ ಸಂಸದೆ ಎ.ಸುಮಲತಾ ಬುಧವಾರ ಆಹ್ವಾನ ನೀಡಿದರು.

ನಗರದ ಸಿಲ್ವರ್‌ ಜ್ಯುಬಿಲಿ ಉದ್ಯಾನದಲ್ಲಿ ನಡೆದ ದಿವಂಗತ ಅಂಬರೀಷ್‌ ಜನ್ಮದಿನ ಹಾಗೂ ಸ್ವಾಭಿಮಾನಿಗಳ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾವೇರಿ ನೀರಿನ ವಿಚಾರವಾಗಿಯೇ ಅಂಬರೀಷ್‌ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಾನೂ ಅವರ ದಾರಿಯಲ್ಲೇ ಸಾಗುತ್ತೇನೆ. ಅವರ ಹೆಸರು ಉಳಿಸುತ್ತೇನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಎಲ್ಲಾ ಜಿಲ್ಲೆಗಳ ಜನರಿಗೆ ನೀರು ಕೊಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಈ ವಿಚಾರದಲ್ಲಿ ಜೆಡಿಎಸ್‌ ಶಾಸಕರು ಪ್ರತಿಷ್ಠೆ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಹೇಳಿದರು.

ADVERTISEMENT

‘ಚುನಾವಣೆ ಒಂದು ರೀತಿ ಯುದ್ಧದಂತೆ ನಡೆಯಿತು. ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ. ಭಾವನಾತ್ಮಕವಾಗಿ ಮತ ಯಾಚಿಸಿದೆ. ಆರೋಪಗಳಿಗೆ ಶಾಂತಿ, ಸಂಯಮ, ತಾಳ್ಮೆಯಿಂದ ವರ್ತಿಸಿದೆ. ಚುನಾವಣೆ ನಡೆದ ರೀತಿಯೇ ಸಮಾಜಕ್ಕೆ ಹಾಗೂ ರಾಜಕಾರಣಕ್ಕೆ ಹೊಸ ಸಂದೇಶ ನೀಡಿತು. ಆರೋಪಗಳಿಗೆ ಜನ ಉತ್ತರ ಕೊಟ್ಟಿದ್ದಾರೆ. ಆದರೆ ಈಗಲೂ ಜೆಡಿಎಸ್‌ ಮುಖಂಡರು ತಮ್ಮ ಸ್ವಭಾವ ಬದಲಿಸಿಕೊಂಡಂತೆ ಕಾಣುತ್ತಿಲ್ಲ. ಹತಾಶೆಯಿಂದ ಮಾತನಾಡುತ್ತಿದ್ದಾರೆ’ ಎಂದ ಸುಮಲತಾ, ಈಗಲಾದರೂ ಅವರು ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಬೆಂಬಲವೂ ಇತ್ತು:‘ಕಾಂಗ್ರೆಸ್‌, ಬಿಜೆಪಿ, ರೈತಸಂಘ ಸೇರಿ ಸರ್ವಪಕ್ಷಗಳ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ. ನನಗೆ ಸ್ವಾಭಿಮಾನಿ ಜೆಡಿಎಸ್‌ ಮುಖಂಡರ ಬೆಂಬಲವೂ ಇತ್ತು. ದೇಶದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ 222 ಅಭ್ಯರ್ಥಿಗಳಲ್ಲಿ ಜಯ ಗಳಿಸಿದ್ದು ನಾನೊಬ್ಬಳು ಮಾತ್ರ. ಆ ಇತಿಹಾಸ ಮಂಡ್ಯ ಜಿಲ್ಲೆಯ ಪಾಲಿಗೆ ಸೇರುತ್ತದೆ. ಇದು ನನ್ನ ಗೆಲುವಲ್ಲ. ಸರ್ವಪಕ್ಷ ಮುಖಂಡರ ಗೆಲುವು. ಜಿಲ್ಲೆಯ ಸೊಸೆಗೆ ಆರತಿ ಎತ್ತಿ ಸ್ವಾಗತ ಕೋರಿದ ಮಹಿಳೆಯರ ಗೆಲುವು’ ಎಂದು ಬಣ್ಣಿಸಿದರು.

‘ಅಂಬರೀಷ್‌ ಜನ್ಮದಿನವಾದ ಇಂದು, ಜನರ ಪರ ನಿಲ್ಲುವುದಾಗಿ ಮೊದಲು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದೇನೆ. ಸಂಸತ್‌ನಲ್ಲಿ ಎರಡನೇ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ. ಇನ್ನು ಮುಂದೆ ನಾನು ಅಂಬರೀಷ್‌ ಜನ್ಮದಿನವನ್ನು ಮಂಡ್ಯದಲ್ಲೇ ಆಚರಿಸುತ್ತೇನೆ’ ಎಂದರು.

ಅಂಬರೀಷ್‌ ಪುತ್ರ ಅಭಿಷೇಕ್‌ ಗೌಡ ಮಾತನಾಡಿ, ‘ಮೇ 29ರಂದು ಅಪ್ಪನಿಗೆ ಏನು ಉಡುಗೊರೆ ಕೊಡಬೇಕು ಎಂದು ಪ್ರತೀ ವರ್ಷ ಚಿಂತಿಸುತ್ತಿದ್ದೆ. ಆದರೆ ಈಗ ಅಪ್ಪನಿಗೆ ಮಂಡ್ಯ ಜಿಲ್ಲೆಯ ಜನರು ಅಮ್ಮನ ಗೆಲುವಿನ ಉಡುಗೊರೆ ಕೊಟ್ಟಿದ್ದಾರೆ. ಮೇ 28ರ ಮಧ್ಯರಾತ್ರಿ ಅಪ್ಪನ ಜನ್ಮದಿನ ಆಚರಿಸಲು ನಮ್ಮ ಮನೆಯ ಮುಂದೆ ಜನ ಇರಲಿಲ್ಲ. ಮನಸ್ಸಿಗೆ ನೋವಾಯಿತು. ಆದರೆ ಮಂಡ್ಯಕ್ಕೆ ಬಂದ ನಂತರ ಎಲ್ಲಾ ನೋವು ಮರೆತು ಹೋಯಿತು’ ಎಂದರು.

ವಿರೋಧಿಗಳಿಂದ ಜಯ: ಯಶ್‌

ನಟ ಯಶ್‌ ಮಾತನಾಡಿ, ‘ಜೋಡೆತ್ತು (ಯಶ್‌–ದರ್ಶನ್‌)ಗಳಿಂದ ಸುಮಲತಾ ಗೆಲುವು ಸಾಧಿಸಿದ್ದಾರೆ ಎಂದು ಕೆಲವರು ಮಾತನಾಡುತ್ತಾರೆ. ಆದರೆ ನಮ್ಮಿಂದ ಸುಮಲತಾ ಗೆದ್ದಿಲ್ಲ. ನಮ್ಮ ಪ್ರತಿಸ್ಪರ್ಧಿಗಳು ಆಡಿದ ಮಾತುಗಳಿಂದಲೇ ಜಯ
ಸಿಕ್ಕಿದೆ. ಯಾವುದೇ ಒಂದು ಹೆಣ್ಣಿನ ವಿರುದ್ಧವಾಗಿ ಮಾತನಾಡಬಾರದು, ಆಕೆಯನ್ನು ಜರಿಯಬಾರದು ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಮುಂದೆಯಾದರೂ ಮುಖಂಡರು ತಪ್ಪುಗಳನ್ನು ತಿದ್ದಿಕೊಂಡು ನಡೆಯಬೇಕು’ ಎಂದರು.

ಮಂಡ್ಯಕ್ಕೆ ಜನ್ಮದಿನ’

‘ಇನ್ನುಮುಂದೆ ನಾನು ಮೇ 29ರಂದು ಅಂಬರೀಷ್‌ ಅವರಿಗೆ ಶುಭಾಶಯ ಹೇಳುವುದಿಲ್ಲ. ಇದು ಮಂಡ್ಯ ಜನ್ಮದಿನ, ಜನರಿಗೆ ಶುಭಾಶಯ ಹೇಳುತ್ತೇನೆ. ಸುಮಲತಾ ಅವರ ಗೆಲುವಿನ ಮೂಲಕ ಮಂಡ್ಯ ಜಿಲ್ಲೆಗೆ ಹೊಸ ಕಾಲ ಆರಂಭವಾಗಿದೆ. ನಾವೂ ಪುನರ್ಜನ್ಮ ಪಡೆದಿದ್ದೇವೆ’ ಎಂದು ನಟ ದರ್ಶನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.