ADVERTISEMENT

ಮಂಡ್ಯದ ಸಕ್ಕರೆ ಕಾರ್ಖಾನೆ ಖಾಸಗಿಗೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:27 IST
Last Updated 27 ಫೆಬ್ರುವರಿ 2020, 19:27 IST
ಮೈಷುಗರ್‌ ಕಾರ್ಖಾನೆಯ ಹೊರನೋಟ
ಮೈಷುಗರ್‌ ಕಾರ್ಖಾನೆಯ ಹೊರನೋಟ   

ಬೆಂಗಳೂರು: ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಸರ್ಕಾರಿ ಸ್ವಾಮ್ಯದ ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಷ್ಟಕ್ಕೆ ಸಿಲುಕಿರುವ ಕಾರ್ಖಾನೆಗಳ ಪುನಶ್ಚೇತನಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಕ್ಕರೆ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಗುರುವಾರ ಹೇಳಿದರು.

ಜೂನ್ ಒಳಗೆ ಖಾಸಗಿಯವರಿಗೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದರೆ ರೈತರು ಕಬ್ಬು ಸರಬರಾಜು ಮಾಡಲು ಸಹಕಾರಿಯಾಗಲಿದೆ. ಅದಕ್ಕೂ ಮೊದಲು ಕಾರ್ಖಾನೆ ಕಾರ್ಮಿಕರು, ರೈತರು, ಜನಪ್ರತಿನಿಧಿಗಳ ಜತೆಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಮೈಷುಗರ್‌:ರೋಗಗ್ರಸ್ತಗೊಂಡ ಮೈಷುಗರ್ ಪುನಶ್ಚೇತನಕ್ಕೆ ಈವರೆಗೆಬಿಜೆಪಿ, ಜೆಡಿಎಸ್‌ಸರ್ಕಾರಗಳು
₹ 700 ಕೋಟಿಗೂ ಅಧಿಕ ಹಣ ನೀಡಿವೆ. ಆದರೂ ಕಾರ್ಖಾನೆಗೆ ಕಾಯಕಲ್ಪ ಸಾಧ್ಯವಾಗಿಲ್ಲ. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಹೊಸ ಕಾರ್ಖಾನೆ ಸ್ಥಾಪಿಸಲು ಬಜೆಟ್‌ನಲ್ಲಿ ₹ 200 ಕೋಟಿ ಮೀಸಲಿಟ್ಟಿದ್ದರು. ಆದರೆ ಅದೂ ನನೆಗುದಿಗೆ ಬಿದ್ದಿದೆ.

ಅಪಾರ ಸಂಖ್ಯೆಯ ಕಾರ್ಮಿಕರನ್ನು ಸಾಕುತ್ತಿದ್ದ ಮೈಷುಗರ್‌ ಬಳಿ ಈಗ 154 ಮಂದಿ ಇದ್ದಾರೆ.ಅವರಲ್ಲಿ 37 ಕಾಯಂ, 81 ಹಂಗಾಮಿ, 36 ಗುತ್ತಿಗೆ ನೌಕರರು.2017 ಜುಲೈನಿಂದ ವೇತನ ಬಾಕಿ ಉಳಿದುಕೊಂಡಿದೆ. ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ ಘೋಷಿಸಲಾಗಿದೆ.

ಪಿಎಸ್‌ಎಸ್‌ಕೆ ಹಾದಿ:1959ರಲ್ಲಿ ಆರಂಭವಾದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ರೈತರ ಜೀವನಾಡಿಯಾಗಿತ್ತು. ದಶಕದಿಂದೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿದ್ದು, ಸದ್ದು ನಿಲ್ಲಿಸಿದೆ. ವಿದ್ಯುತ್‌ ಬಿಲ್‌ ನೀಡಲೂ ಸಾಧ್ಯವಾಗದೇ ಕಾರ್ಖಾನೆ ಆವರಣದಲ್ಲಿ ಕಗ್ಗತ್ತಲು ಕವಿದಿದೆ. ಸದ್ಯ ಕಾರ್ಖಾನೆ ಮೇಲೆ ₹ 275 ಕೋಟಿ ಸಾಲವಿದೆ. 100 ಕಾರ್ಮಿಕರು ಸಂಬಳವಿಲ್ಲದೆ ಹತಾಶರಾಗಿದ್ದಾರೆ.

ಮುಂದಿನ ಮುಂಗಾರು ಹಂಗಾಮಿನಲ್ಲಿ ಮೈಷುಗರ್‌, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಚಕ್ರಗಳು ತಿರುಗಲಿವೆ ಎಂದು ನಂಬಿದ್ದ ಜಿಲ್ಲೆಯ ರೈತರ ಜಂಘಾಬಲವೇ ಕುಸಿದು ಬಿದ್ದಿದೆ. ಈ ಹಂಗಾಮಿನಲ್ಲಿ ಬೆಳೆದಿದ್ದ 50 ಲಕ್ಷ ಟನ್‌ಗಳಿಗೂ ಅಧಿಕ ಕಬ್ಬನ್ನು ಹೊರರಾಜ್ಯ, ಹೊರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಿದ್ದಾರೆ. ಸಾಗಣೆ ವೆಚ್ಚ ಭರಿಸಲಾಗದೆ ರೈತರು ನಷ್ಟ ಅನುಭವಿಸಿದ್ದಾರೆ. ಸರ್ಕಾರವೇ ಸಾಗಣೆ ವೆಚ್ಚ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

****

ರೈತರ ಹಿತರಕ್ಷಣೆಗಾಗಿ ಸರ್ಕಾರ ಕ್ರಮ ಕೈಗೊಂಡಿದೆ. 40 ವರ್ಷಗಳವರೆಗೆ ಪಿಎಸ್ಎಸ್‌ಕೆಯನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಲು ಟೆಂಡರ್ ಆಹ್ವಾನಿಸಲಾಗಿದೆ
-ಕೆ.ಎಸ್. ನಂಜುಂಡೇಗೌಡ ರೈತ ಹೋರಾಟಗಾರ

ಎಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದಿದ್ದರೆ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹೊಸ ರೂಪ ಪಡೆಯುತ್ತಿದ್ದವು. ಬಿಜೆಪಿ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ
ಎಂ.ಶ್ರೀನಿವಾಸ್, ಮಂಡ್ಯ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.