ADVERTISEMENT

ನೀರಿಗೆ ಹಾಹಾಕಾರ: ಹಬ್ಬ, ಜಾತ್ರೆ ಇಲ್ಲ

ಸಂಸದರ ತವರಿನಲ್ಲೇ ಕೊರತೆ

ಎಂ.ಎನ್.ಯೋಗೇಶ್‌
Published 14 ಮೇ 2019, 20:33 IST
Last Updated 14 ಮೇ 2019, 20:33 IST
   

ಮಂಡ್ಯ: ನಾಗಮಂಗಲ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸುಮಾರು 80 ಹಳ್ಳಿಗಳಿಗೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಜೀವಜಲಕ್ಕೆ ಕೊರತೆ ಇರುವ ಕಾರಣ ಹಳ್ಳಿಗಳ ಜನರು ಪ್ರತಿವರ್ಷ ಆಚರಿಸುತ್ತಿದ್ದ ಹಬ್ಬ, ಜಾತ್ರೆಗಳನ್ನೇಸ್ಥಗಿತಗೊಳಿಸಿದ್ದಾರೆ.

ಸಂಸದ ಎಲ್‌.ಆರ್‌.ಶಿವರಾಮೇಗೌಡ ತವರು ಲಾಳನಕೆರೆ ಮತ್ತು ಹತ್ತೂರು ಗ್ರಾಮಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ಅಚ್ಚಳಮ್ಮನ (ಅಚಲ ಪರಮೇಶ್ವರಿ) ಹಬ್ಬವನ್ನು ನೀರಿನ ಸಮಸ್ಯೆಯ ಕಾರಣ ಈ ಬಾರಿ ಸ್ಥಗಿತಗೊಳಿಸಲಾಗಿದೆ. ಗ್ರಾಮಸ್ಥರು 12 ದಿನ ಈ ಜಾತ್ರೆಯನ್ನು ಒಟ್ಟಾಗಿ ಆಚರಿಸುತ್ತಿದ್ದರು. ಅಚ್ಚಳ್ಳಮ್ಮನ ಹಬ್ಬ ಕಠಿಣ ನಿಯಮಗಳಿಗೆ ಹೆಸರುವಾಸಿ. ಗೋಪುರಕ್ಕೆ ಕಳಶ ಕಟ್ಟಿದರೆ ಪ್ರತಿದಿನ ಎರಡು ಬಾರಿ ಸ್ನಾನ ಮಾಡಿ ಮಡಿಯಿಂದ ಇರಬೇಕು. ಊರ ಹೊರಗೆ ಹೋದರೆ ಸ್ನಾನ ಮಾಡಿಯೇ ಒಳಗೆ ಬರಬೇಕು. ಆದರೆ, ಈ ವರ್ಷ ಕುಡಿಯುವುದಕ್ಕೇ ನೀರು ಇಲ್ಲ. ಇನ್ನು ಮಡಿಯಾಗಲು ಅವರು ನೀರನ್ನು ಎಲ್ಲಿಂದ ತರುವುದು?

‘ಆಚಾರ ತಪ್ಪಿ ನಡೆದರೆ ಅಚ್ಚಳ್ಳಮ್ಮ ಬೆಂಕಿ ಉಗುಳುತ್ತಾಳೆ. ನಿಯಮ ಪಾಲನೆ ಮಾಡುವುದು ಹೇಗೆ ಎಂಬ ಭಯ ನಮ್ಮನ್ನು ಕಾಡಿತು. ಚರ್ಚಿಸಿ, ಹಬ್ಬ ಸ್ಥಗಿತಗೊಳಿಸುವ ನಿರ್ಧಾರವನ್ನು ಗ್ರಾಮಸ್ಥರು ಕೈಗೊಂಡರು' ಎಂದು ಗ್ರಾಮದ ನಿವಾಸಿ ಎಲ್.ಬಿ.ನಾಗೇಶ್ ಹೇಳಿದರು.

ADVERTISEMENT

ಮನೆಯ ಮುಂದೆ ಡ್ರಮ್: ಇದೇ ಮೊದಲ ಬಾರಿಗೆ ನಾಗಮಂಗಲ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸ್ಥಿತಿ ಬಂದಿದೆ. ಅದು ಕೂಡ ಖಾಸಗಿ ಕೊಳವೆಬಾವಿಗಳಿಂದ ಪಡೆದು. ಬಿಂಡಿಗನವಿಲೆ, ಬೆಳ್ಳೂರು, ದೇವಲಾಪುರ ಹೋಬಳಿಯ ಬಹುತೇಕ ಹಳ್ಳಿಗಳ ಮನೆಯ ಮುಂದೆ ನೀಲಿ ಬಣ್ಣದ ಡ್ರಮ್ ಇಟ್ಟಿದ್ದಾರೆ. ನಾಲ್ಕು ದಿನಕ್ಕೊಮ್ಮೆ ಬರುವ ಟ್ಯಾಂಕರ್, ಆ ಡ್ರಮ್‌ಗಳನ್ನು ತುಂಬಿಸಿ ಹೋಗುತ್ತದೆ. ವಿದ್ಯುತ್‌ ಪೂರೈಕೆ ಇದ್ದರೆ ನೀರು ಸರಬರಾಜು ಆಗುತ್ತದೆ. ಇಲ್ಲದಿದ್ದರೆ ಕೆಲವು ಗ್ರಾಮಗಳಿಗೆ ವಾರ ಕಳೆದರೂ ನೀರು ಸಿಗುವುದಿಲ್ಲ.

ನೀರಿನ ಭಿಕ್ಷೆ: ಬಟ್ಟೆ ತೊಳೆಯುವುದಂತೂ ಮಹಿಳೆಯರಿಗೆ ಸಾಹಸವೇ ಆಗಿದೆ. ಕೊಳವೆಬಾವಿಗಳ ಮಾಲೀಕರ ಬಳಿ ನೀರಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಮಾಲೀಕರಿಗೂ ಸಂಕಟ. ವಿದ್ಯುತ್‌ ಕಣ್ಣಾಮುಚ್ಚಾಲೆಯಲ್ಲಿ ಬೆಳೆಗಳಿಗೆ ನೀರು ಹಾಯಿಸುವುದು ಕಷ್ಟವಾಗಿದೆ. ‘ವೈರಿಗಳಾದರೂ ಸರಿ, ದಮ್ಮಯ್ಯ ನೀರು ಕೊಡಿ ಎಂದು ಭಿಕ್ಷೆ ಬೇಡುತ್ತಿದ್ದೇವೆ. ಯಾರೂ ನೀರಿಗೆ ಇಲ್ಲಾ ಎನ್ನುವುದಿಲ್ಲ’ ಎಂದು ಬಲ್ಲಾವಳ್ಳಿ ಗ್ರಾಮದ ತಾಯಮ್ಮ ದಯನೀಯ ಸ್ಥಿತಿಯನ್ನು ಬಿಚ್ಚಿಟ್ಟರು.

‘ಹಳ್ಳಿಗಳಲ್ಲಿ ನೀರಿನ ತೊಟ್ಟಿ ಕಟ್ಟಿಸಲಾಗಿದೆ. ತೊಟ್ಟಿಗಳಿಗೂ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜಾನುವಾರುಗಳಿಗೆ ನೀರಿನ ಕೊರತೆ ಇಲ್ಲ’ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಎಂ.ಸಿ.ಪದ್ಮನಾಭ ಹೇಳಿದರು.

ತಾಲ್ಲೂಕಿಗೆ ಕೆಆರ್‌ಎಸ್‌ ಹಾಗೂ ಹೇಮಾವತಿ ಜಲಾಶಯದ ನೀರಿನ ಸಂಪರ್ಕವಿದೆ. ಆದರೆ ಇದು ಜಲಾಶಯಗಳ ಕೊನೆಯ ಭಾಗ (ಟೈಲೆಂಡ್) ಆದ ಕಾರಣ ಇಲ್ಲಿಯವರೆಗೂ ನೀರು ಹರಿಯುತ್ತಿಲ್ಲ. ಮಾರ್ಕೋನಹಳ್ಳಿ ಜಲಾಶಯದಿಂದ 128 ಹಳ್ಳಿಗಳಿಗೆ ನೀರು ಪೂರೈಸುವ ಬಹುಗ್ರಾಮ ನೀರಾವರಿ ಯೋಜನೆ ಹಳ್ಳ ಹಿಡಿದಿದೆ. ಬಿಂಡಿಗನವಿಲೆ ಹೋಬಳಿಯ 48 ಹಳ್ಳಿಗಳಿಗೆ ನೀರು ಪೂರೈಸುವ ಏತ ನೀರಾವರಿ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ.

‘ಗ್ರಾ. ಪಂ ಪಿಡಿಒಗಳು, ತಾಲ್ಲೂಕು ಪಂಚಾಯಿತಿ ಇಒ, ತಹಶೀಲ್ದಾರ್‌ಗಳು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಭಾನುವಾರವೂ ಕೆಲಸ ಮಾಡುತ್ತಿದ್ದೇವೆ. ಕಂಟ್ರೋಲ್ ರೂಂ, ಸಹಾಯವಾಣಿ ಸ್ಥಾಪಿಸಲಾಗಿದೆ. ಪ್ರತಿದಿನ ವರದಿ ಪಡೆಯುತ್ತಿದ್ದೇನೆ' ಎಂದು ಪಿ.ಸಿ.ಜಾಫರ್ ಹೇಳಿದರು.

ನೀರಿನ ಬಾಕಿ ಕೊಡದ ಅಧಿಕಾರಿಗಳು

ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಸರಬರಾಜು ಮಾಡಲು ಸರ್ಕಾರ ಪ್ರತಿ ಟ್ರಿಪ್ ಟ್ಯಾಂಕರ್ ನೀರಿಗೆ ₹500 ಕೊಡುತ್ತದೆ. ಅದರಲ್ಲಿ₹300 ಕೊಳವೆಬಾವಿ ಮಾಲೀಕರಿಗೆ, ₹200 ಟ್ಯಾಂಕರ್ ಮಾಲೀಕರಿಗೆ ಹಂಚಿಕೆಯಾಗುತ್ತದೆ.

‘ಕೊಳವೆಬಾವಿಯು ನಾಲ್ಕೈದು ಕಿ.ಮೀ ದೂರವಿದ್ದಾಗ ಟ್ಯಾಂಕರ್ ಮಾಲೀಕರಿಗೆ ನಷ್ಟವಾಗುತ್ತದೆ. ಪ್ರತಿ ಟ್ಯಾಂಕರ್ ನೀರಿಗೆ ಕನಿಷ್ಠ ₹ 800 ಕೊಡಬೇಕು. ಜೊತೆಗೆ ಈಗಾಗಲೇ ನೀರು ಸರಬರಾಜು ಮಾಡಿದವರಿಗೆ ಹಳೆಯ ಬಾಕಿ ಪಾವತಿಸಿಲ್ಲ. ₹4-5 ಲಕ್ಷ ಬಾಕಿ ಉಳಿದಿದೆ. ಹೀಗಾಗಿ ನೀರು ಕೊಡಲು ಕೊಳವೆಬಾವಿ ಮಾಲೀಕರು, ಸರಬರಾಜು ಮಾಡಲು ಟ್ಯಾಂಕರ್ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಬಾಕಿ ಹಣ ಬಿಡುಗಡೆ ಮಾಡದಿದ್ದರೆ ನೀರು ಸರಬರಾಜು ಕಷ್ಟವಾಗುತ್ತದೆ’ ಎಂದು ಲಾಳನಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್.ಮಂಜಣ್ಣ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.