ADVERTISEMENT

ಲಂಗರು ಕಟ್ಟೆಗೆ ಡಿಕ್ಕಿಯಾದ ಹಡಗು: ತೈಲ ಸೋರಿಕೆಯ ಭೀತಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 17:50 IST
Last Updated 3 ನವೆಂಬರ್ 2018, 17:50 IST
   

ಮಂಗಳೂರು:ಪೆಟ್ರೋಲಿಯಂ ಉತ್ಪನ್ನ ತುಂಬಿಸಿಕೊಂಡು ಸಿಂಗಪುರಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗೊಂದು ಇಲ್ಲಿನ ನವ ಮಂಗಳೂರು ಬಂದರು ಮಂಡಳಿಯಲ್ಲಿ (ಎನ್‌ಎಂಪಿಟಿ) ಲಂಗರು ಕಟ್ಟೆಗೆ ಶನಿವಾರ ಡಿಕ್ಕಿ ಹೊಡೆದಿದ್ದು, ತೈಲ ಸೋರಿಕೆಯ ಭೀತಿ ಎದುರಾಗಿದೆ.

'ಎಕ್ಸ್‌–ಪ್ರೆಸ್ ಬ್ರಹ್ಮಪುತ್ರ ಸಿಂಗಪುರ’ ಹಡಗು ಶನಿವಾರ ಬೆಳಿಗ್ಗೆ ಲಂಗರು ಕಟ್ಟೆಯ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಹಡಗಿನ ಒಂದು ಭಾಗ ಜಖಂಗೊಂಡಿದೆ. ಅಪಘಾತ ನಡೆದ ಕ್ಷಣದಿಂದಲೇ ಹಡಗಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರುತ್ತಿದೆ ಎಂದು ಎನ್‌ಎಂಪಿಟಿ ಮೂಲಗಳು ತಿಳಿಸಿವೆ.

ಅವಘಡದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಎನ್‌ಎಂಪಿಟಿ ಹಿರಿಯ ಅಧಿಕಾರಿಗಳು, ತೈಲ ಸೋರಿಕೆ ಕುರಿತು ಚರ್ಚಿಸಿದ್ದಾರೆ. ತೈಲ ತುಂಬಿದ ಹಡಗಿನ ಸುತ್ತ ತೇಲುವ ಟ್ಯೂಬ್‌ಗಳನ್ನು ಇರಿಸಿ ಹೆಚ್ಚಿನ ಅಪಾಯ ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಗೊತ್ತಾಗಿದೆ.

ADVERTISEMENT

1998ರಲ್ಲಿ ನಿರ್ಮಿಸಲಾದ ಈ ಹಡಗು 162.86 ಮೀಟರ್‌ ಉದ್ದ ಮತ್ತು 22.3 ಮೀಟರ್‌ ಅಗಲವಿದೆ. 10,752 ಟನ್‌ ತೈಲ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅಕ್ಟೋಬರ್‌ 31ರಂದು ಈ ಹಡಗು ಎನ್‌ಎಂಪಿಟಿಗೆ ಬಂದಿತ್ತು. ಶನಿವಾರ ತೈಲ ತುಂಬಿಕೊಂಡು ಸಿಂಗಪುರದತ್ತ ತೆರಳಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.