ADVERTISEMENT

ಮಂಗಳೂರು ಪೌರತ್ವ ವಿರೋಧಿ ಪ್ರತಿಭಟನೆ : ಮೃತರ ವಿರುದ್ಧ ಎಫ್‌ಐಆರ್‌

‘ಪೌರತ್ವ’ ಪ್ರತಿಭಟನೆ: ಮಂಗಳೂರು ಗೋಲಿಬಾರ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 21:04 IST
Last Updated 22 ಡಿಸೆಂಬರ್ 2019, 21:04 IST

ಮಂಗಳೂರು: ನಗರದಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಮೃತಪಟ್ಟ ಜಲೀಲ್‌, ನೌಶೀನ್‌ ಅವರನ್ನೂ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ನಡೆಸಿ, ಪೊಲೀಸರ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳು ಎಂದು ಹೆಸರಿಸಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ, ಮಾರಕಾಸ್ತ್ರಗಳೊಂದಿಗೆ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯ ಮೇಲೆ ದಾಳಿ ಮಾಡಿ, ಠಾಣೆಗೆ ಬೆಂಕಿಹಚ್ಚಿ ಪೊಲೀಸರ ಕೊಲೆಗೆ ಯತ್ನಿಸಿದ ಆರೋಪದಡಿ ಅದೇ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ
ದಲ್ಲಿ ಇಬ್ಬರನ್ನೂ ಆರೋಪಿಗಳು ಎಂದು ಗುರುತಿಸಲಾಗಿದೆ. ಜಲೀಲ್‌ ಮೂರನೇ ಆರೋಪಿಯಾದರೆ, ನೌಶೀನ್‌ ಎಂಟನೇ ಆರೋಪಿ ಎಂದು ಗುರುವಾರ ರಾತ್ರಿ ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಯಲ್ಲಿಉಲ್ಲೇಖಿಸಲಾಗಿದೆ.

‘1,500ರಿಂದ 2,000 ಮುಸ್ಲಿಂ ಯುವಕರಿದ್ದ ಗುಂಪು ಪ್ರತಿಭಟನೆ ನಿರತವಾಗಿತ್ತು. ಜಲ್ಲಿಕಲ್ಲು, ದೊಣ್ಣೆ, ಸೋಡಾ ಬಾಟಲಿ, ಗಾಜಿನ ತುಂಡುಗಳೊಂದಿಗೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಗೆ ಬೆಂಕಿಹಚ್ಚಿ, ಪೊಲೀಸರನ್ನು ಕೊಲ್ಲಲು ಯತ್ನಿಸಿತು. ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿ, ಟಯರ್‌ ಬೆಂಕಿ ಹಚ್ಚಿ ಎಸೆಯುತ್ತಿದ್ದರು. ಮೆಗಾ ಫೋನ್‌ ಮೂಲಕ ಸೂಚನೆ ನೀಡಿದರೂ ಚದುರಲಿಲ್ಲ. ಲಾಠಿ ಪ್ರಹಾರ ಮಾಡಿದಾಗ ಚದುರಿ ಹೋದ ಗುಂಪು ಮತ್ತೆ ಸೇರಿಕೊಂಡು ಗಲಭೆ ಮುಂದುವರಿಸಿತ್ತು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಗಲಭೆಯನ್ನು ಹತ್ತಿಕ್ಕಲು ಗಾಳಿಯಲ್ಲಿ ಗುಂಡು ಹಾರಿಸಿದಾಗ ಗಲಭೆ ನಿರತರ ಪೈಕಿ ಇಬ್ಬರು ಗಾಯಗೊಂಡರು. ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ಐವರು ಗಾಯಗೊಂಡಿದ್ದರು’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಅವರು ನೀಡಿರುವ ದೂರನ್ನು ಆಧರಿಸಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಪೌರತ್ವ(ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿರುವುದು ಸೇರಿದಂತೆ ವಿವಿಧ ಆರೋಪದಡಿ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಮೂರು ಹಾಗೂ ಮಂಗಳೂರು ದಕ್ಷಿಣ (ಪಾಂಡೇಶ್ವರ)ಠಾಣೆಯಲ್ಲೂ ಮೂರು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.