ADVERTISEMENT

ಗಲಭೆಗೆ ಸಾಕ್ಷ್ಯ ಕೇಳಿದ ಆಯುಕ್ತರಿಗೆ ಪೊಲೀಸರ ದಾಳಿಯ ಸಾಕ್ಷ್ಯ ಕೊಟ್ಟ ಟ್ವಿಟರಿಗರು!

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 15:20 IST
Last Updated 23 ಡಿಸೆಂಬರ್ 2019, 15:20 IST
   

ಬೆಂಗಳೂರು: ಮಂಗಳೂರಿನಲ್ಲಿ ಗಲಭೆ ಸೃಷ್ಟಿಸಿದವರ ಫೊಟೊ, ವಿಡಿಯೊಗಳಿದ್ದರೆ ಪೊಲೀಸ್‌ ಇಲಾಖೆಗೆ ಕಳುಹಿಸಿಕೊಡಿ ಎಂದು ಟ್ವೀಟ್‌ ಮಾಡಿದ್ದ ಮಂಗಳೂರು ನಗರ ಪೊಲೀಸ್‌ ಆಯುಕ್ತ ಹರ್ಷ ಅವರಿಗೆ ಟ್ವಿಟರಿಗರು ಪೊಲೀಸರ ದಾಳಿಯ ವಿಡಿಯೋಗಳನ್ನು ಟ್ಯಾಗ್‌ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಈಗಾಗಲೇ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಮಧ್ಯೆ, ತನಿಖೆಗೆ ಪೂರಕ ಸಾಕ್ಷ್ಯ ಬಯಸಿಸೋಮವಾರ ಟ್ವೀಟ್‌ ಮಾಡಿದ್ದ ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ಅವರು, ‘ಡಿ.19ರಂದು ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಫೊಟೊಗಳು, ವಿಡಿಯೊಗಳು ನಿಮ್ಮ ಬಳಿ ಇದ್ದರೆ ನಮಗೆ ಕಳುಹಿಸಿಕೊಡಿ. ಪೊಲೀಸರ ತನಿಖೆಗೆ ಅದು ಸಹಕಾರಿಯಾಗಲಿದೆ,’ ಎಂದು ಹೇಳಿ, ಇ–ಮೇಲ್‌, ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನು ನೀಡಿದ್ದರು.

ADVERTISEMENT

ಹರ್ಷ ಅವರ ಈ ಟ್ವೀಟ್‌ಗೆ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬಹುತೇಕರು ಡಿ. 19ರಂದು ಮಂಗಳೂರಿನಲ್ಲಿ ಪೊಲೀಸರು ನಡೆಸಿದ್ದರು ಎನ್ನಲಾದ ಹಲ್ಲೆ, ದಾಳಿಗಳ ವಿಡಿಯೊಗಳನ್ನು ಟ್ಯಾಗ್‌ ಮಾಡಿದ್ದಾರೆ. ಇದರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಮತ್ತು ಕೆಲವರು, ಕಲ್ಲು ತೂರಾಟ ಮಾಡುತ್ತಿದ್ದ ಗಲಭೆಕೋರರ ವಿಡಿಯೊಗಳನ್ನು ಟ್ಯಾಗ್‌ ಮಾಡಿದ್ದಾರೆ.

ಸಾರ್ವಜನಿಕರಿಗೆ ಸಾಕ್ಷ್ಯ ಕೊಡಿ

7000 ಪ್ರತಿಭಟನಾಕಾರರು ಮಂಗಳೂರಿನಲ್ಲಿ ಸೇರಿದ್ದರು. ಅವರೆಲ್ಲರೂ ಪೊಲೀಸ್‌ ಠಾಣೆಗೆ ಬೆಂಕಿಹಚ್ಚಲು ಪ್ರಯತ್ನಿಸಿದ್ದರು. ಪೊಲೀಸರನ್ನು ಕೊಲ್ಲಲು ಪ್ರಯತ್ನಿಸಿದರು. ಈ ವೇಳೆ 37 ಪೊಲೀಸರಿಗೆ ಗಾಯಗಳಾಗಿವೆ ಎಂಬ ನಿಮ್ಮ ಹೇಳಿಕೆಗೆ ಸಂಬಂಧಿಸಿಂತೆ ಫೊಟೊ, ವಿಡಿಯೊಗಳಿದ್ದರೆ ನಮಗೆ ಶೇರ್‌ ಮಾಡಿ ಎಂದು @rammi.bk ಎಂಬ ಟ್ವಿಟರ್‌ ಬಳಕೆದಾರರು ಗೇಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.