ADVERTISEMENT

ಚಿತ್ರದುರ್ಗದ ಹಿರಿಯೂರು ಬಳಿ ಹೊತ್ತಿ ಉರಿದ ಸ್ಲೀಪರ್‌ ಬಸ್: 6 ಮಂದಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:44 IST
Last Updated 25 ಡಿಸೆಂಬರ್ 2025, 6:44 IST
<div class="paragraphs"><p>ಅಪಘಾತದಲ್ಲಿ ಹಾನಿಯಾಗಿರುವ ಕಂಟೈನರ್</p></div>

ಅಪಘಾತದಲ್ಲಿ ಹಾನಿಯಾಗಿರುವ ಕಂಟೈನರ್

   

– ‍ಪ್ರಜಾವಾಣಿ ಚಿತ್ರ

ಚಿತ್ರದುರ್ಗ: ಕಂಟೇನರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸೀಬರ್ಡ್‌ ಸ್ಲೀಪರ್‌ (ಎಸಿ ರಹಿತ) ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಐವರು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲಾದ ದಾರುಣ ಘಟನೆ ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್‌ ಬಳಿ ಗುರುವಾರ ನಸುಕಿನ 2 ಗಂಟೆ ವೇಳೆಗೆ ಸಂಭವಿಸಿದೆ. ಕಂಟೇನರ್‌ ಕೂಡ ಅಪ್ಪಚ್ಚಿಯಾಗಿದ್ದರಿಂದ ಚಾಲಕ ಕುಳಿತಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಆಂಧ್ರಪ್ರದೇಶದ ಕರ್ನೂಲ್‌ ಬಳಿ ನಡೆದಿದ್ದ ವೋಲ್ವೊ ಬಸ್‌ ದುರಂತದ ಕಹಿ ನೆನಪು ಮಾಸುವ ಮುನ್ನವೇ ಸಂಭವಿಸಿದ ಈ ಅಪಘಾತ ಸಾರ್ವಜನಿಕರಲ್ಲಿ ತಲ್ಲಣ ಉಂಟುಮಾಡಿತು.

ಕ್ರಿಸ್‌ಮಸ್‌ ರಜೆ ಕಳೆಯಲು ಗೋಕರ್ಣ ಕಡಲ ಕಿನಾರೆಗೆ ತೆರಳುತ್ತಿದ್ದ ತಾಯಿ– ಮಗಳು ಹಾಗೂ ಮೂವರು ಯುವತಿಯರು ಪ್ರಯಾಣದ ಅರ್ಧದಲ್ಲೇ ತಮ್ಮ ಬದುಕಿನ ಯಾತ್ರೆ ಮುಗಿಸಿದರು. ಸಡಗರ ಸಂಭ್ರಮದ ನಡುವೆ ಬಸ್‌ ಹತ್ತಿದ್ದ ಅವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾದರು.

ಬೆಂಗಳೂರಿನ ಬಿಂದು (28), ಅವರ ಮಗಳು ಗ್ರೇಯಾ (5), ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಎಚ್‌.ಸಿ.ಮಾನಸ (26), ಎ.ಎಂ.ನವ್ಯಾ (27), ಭಟ್ಕಳದ ರಶ್ಮಿ ಆರ್‌. ಮಹಾಲೆ (25) ಸಜೀವ ದಹನಗೊಂಡವರು. ಕಂಟೇನರ್‌ ಚಾಲಕ  ಕುಲದೀಪ್ ಯಾದವ್ (29) ಕೂಡ ಮೃತಪಟ್ಟರು. ‘ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಕಂಟೇನರ್‌ ಚಾಲಕನ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದರು.

ಕಂಟೇನರ್‌ ನೇರವಾಗಿ ಬಸ್‌ನ ಡೀಸೆಲ್‌ ಟ್ಯಾಂಕ್‌ಗೆ ಗುದ್ದಿದ ಕಾರಣ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಧಗಧಗನೆ ಹೊತ್ತಿ ಉರಿದ ಬಸ್‌ ಕೆಲವೇ ನಿಮಿಷಗಳಲ್ಲಿ ಕರಕಲಾಯಿತು. ಬಸ್‌ನ ಮುಂಭಾಗದಲ್ಲಿದ್ದ ಯುವತಿಯರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಜೀವತೆತ್ತರು. ಚಾಲಕ, ನಿರ್ವಾಹಕ ಹಾಗೂ ಹಿಂಬದಿಯಲ್ಲಿದ್ದ 24 ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಜಿಗಿದು ತಪ್ಪಿಸಿಕೊಂಡರು.

ಗೆಳತಿಯರಿಲ್ಲದ ಗೋಳು:

ಒಂದೇ ಕಾಲೇಜಿನಲ್ಲಿ ಎಂ.ಟೆಕ್‌ ಪದವಿ ಪೂರೈಸಿದ ಮಾನಸ, ನವ್ಯಾ ಹಾಗೂ ಮಿಲನಾ ಅವರು ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್‌ನ ವಿವಿಧ ಕಂಪನಿಗಳಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ 9 ಗಂಟೆಗೆ ಬಸ್‌ ಹತ್ತಿದ್ದರು. ಇಬ್ಬರೂ ಗೆಳತಿಯರನ್ನು ಕಳೆದುಕೊಂಡ ಮಿಲನಾ ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮೌನಕ್ಕೆ ಶರಣಾಗಿದ್ದರು.

ಭಟ್ಕಳದ ರಶ್ಮಿ ಅವರು ತಮ್ಮಿಬ್ಬರು ಟೆಕ್ಕಿ ಗೆಳತಿಯರಾದ ಗಗನಾ, ರಕ್ಷಿತಾ ಅವರಿಗೆ ಗೋಕರ್ಣ, ಸಿಗಂದೂರು ಪ್ರವಾಸ ಮಾಡಿಸಿ ತಮ್ಮೂರಿಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡಿದ್ದರು. ಗುರುವಾರ ರಾತ್ರಿ ತಾಯಿಗೆ ಕರೆ ಮಾಡಿ ತನ್ನ ಗೆಳತಿಯರೊಂದಿಗೆ ಊರಿಗೆ ಬರುವುದಾಗಿ ತಿಳಿಸಿದ್ದರು. ಬೆಂಗಳೂರಿನ ಗಾಂಧಿನಗರದಲ್ಲಿ ಪ್ರಯಾಣ ಆರಂಭಿಸುವ ಮುನ್ನ ಬಸ್‌ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಶ್ಮಿ ಇನ್ನಿಲ್ಲ ಎಂಬ ಸುದ್ದಿ ತಿಳಿದ ಗಗನಾ, ರಕ್ಷಿತಾ ಆಸ್ಪತ್ರೆಯ ಹಾಸಿಗೆಯಲ್ಲಿ ಕಣ್ಣೀರು ಸುರಿಸುತ್ತಿದ್ದರು. 

ಪತ್ನಿ ಬಿಂದು, ಪುತ್ರಿ ಗ್ರೇಯಾ ಅವರನ್ನು ಸಂಭ್ರಮ, ಸಡಗರದಿಂದ ಬಸ್‌ ಹತ್ತಿಸಿದ್ದ ಬೆಂಗಳೂರಿನ ದರ್ಶನ್‌ ಅವರು ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಗಡಗಡನೆ ನಡುಗುತ್ತಿದ್ದರು. ಮೃತದೇಹಗಳನ್ನು ಗುರುತಿಸಲು ಕಾರಿಳಿದು ಬರುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾಗ ಅವರ ಕೈಕಾಲುಗಳು ಚಲನೆಯನ್ನೇ ಕಳೆದುಕೊಂಡಿದ್ದವು. ಪತ್ನಿ, ಮಗಳು ಬದುಕಿದ್ದಾರೆ ಎಂಬ ಭರವಸೆಯಲ್ಲೇ ಅವರಿದ್ದರು. ಆದರೆ ಕಪ್ಪು ಉಂಡೆಯಾಗಿದ್ದ ಮೃತದೇಹಗಳನ್ನು ಕಂಡು ದರ್ಶನ್‌ ನೆಲಕ್ಕುರುಳಿದರು.

ಜಿಗಿದು ಪ್ರಾಣ ಉಳಿಸಿಕೊಂಡರು

ಬಸ್‌ನಲ್ಲಿ 30 ಪ್ರಯಾಣಿಕರಿದ್ದರು. 28 ಮಂದಿ ಸೀಟುಗಳನ್ನು ಮುಂಗಡ ಕಾಯ್ದಿರಿಸಿದ್ದರು ಇಬ್ಬರು ಮಧ್ಯದಲ್ಲಿ ಬಸ್‌ ಹತ್ತಿದ್ದರು. ಘಟನೆಯ ನಂತರ ಬಹುತೇಕ ಮಂದಿ ಬಸ್‌ನಿಂದ ಜಿಗಿದು ಸಿಕ್ಕ ವಾಹನ ಹತ್ತಿ ಆಸ್ಪತ್ರೆ ಸೇರಿದರು. 20 ನಿಮಿಷದ ನಂತರ ಸ್ಥಳಕ್ಕೆ ಬಂದ ಪೊಲೀಸರು ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲು ಮಾಡಿದರು. ಬಸ್‌ ಚಾಲಕ ರಫೀಕ್‌ ನಿರ್ವಾಹಕ ಮೊಹಮ್ಮದ್‌ ಸೈಯದ್‌ ಸೇರಿ 24 ಜನರು ಚಿತ್ರದುರ್ಗ ಶಿರಾ ಹಿರಿಯೂರು ಬೆಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ಸ್ವತಃ ಆಸ್ಪತ್ರೆಗೆ ದಾಖಲಾದ ಕಾರಣ ಸತ್ತವರ ಸಂಖ್ಯೆ ಎಣಿಕೆಗೆ ಸಿಗದಂತಾಯಿತು. ಗುರುವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಗಾಯಾಳುಗಳು ಸಂಪರ್ಕಕ್ಕೆ ಬಂದ ನಂತರವಷ್ಟೇ ಸಾವಿನ ಸಂಖ್ಯೆ ಖಾತರಿಯಾಯಿತು. ಬಸ್‌ನಲ್ಲಿ ಸುಟ್ಟು ಕರಕಲಾಗಿದ್ದ ಐವರ ಮೃತದೇಹಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸಂಗ್ರಹಿಸಿದರು. ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆಯ ಮೊರೆ ಹೋಗಬೇಕಾಯಿತು. ‘ಮೃತಪಟ್ಟ ಎಲ್ಲರ ಗುರುತು ಪತ್ತೆಯಾಗಿದೆ. ಡಿಎನ್‌ಎ ವರದಿ ಬಂದ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದರು.

ಪುತ್ರಿಯರ ವಿವಾಹ ಇನ್ನೆಲ್ಲಿ?

ಚನ್ನರಾಯಪಟ್ಟಣದ ಹೋಟೆಲ್‌ನಲ್ಲಿ ಕ್ಯಾಷಿಯರ್‌ ಆಗಿರುವ ಚಂದ್ರೇಗೌಡ ತಮ್ಮ ಪುತ್ರಿ ಮಾನಸಾ ಅವರ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಎ.ಎನ್‌. ಮಂಜಪ್ಪ ಕೂಡ ತಮ್ಮ ಪುತ್ರಿ ನವ್ಯಾ ವಿವಾಹಕ್ಕೆ ದಿನಾಂಕ ನಿಗದಿಪಡಿಸುವ ತವಕದಲ್ಲಿದ್ದರು. ನಗರದ ಜಿಲ್ಲಾ ಆಸ್ಪತ್ರೆ ಎದುರು ನಿಂತಿದ್ದ ಚಂದ್ರೇಗೌಡ ಹಾಗೂ ಮಂಜಪ್ಪ ‘ಪುತ್ರಿಯರ ವಿವಾಹದ ಕನಸು ನನಸಾಗಲಿಲ್ಲ’ ಎಂದು ಗದ್ಗದಿತರಾದರು. ಮಾನಸಾ ಅವರಿಗೆ ಗೊತ್ತು ಮಾಡಿದ್ದ ಹುಡುಗ ಕೂಡ ಕಣ್ಣೀರು ಸುರಿಸಿದರು.

10 ಗಂಟೆ ಟ್ರಾಫಿಕ್‌ ಜಾಮ್‌

ಅಪಘಾತ ಸಂಭವಿಸಿದ ನಂತರ 10 ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಗುರುವಾರ ಮಧ್ಯಾಹ್ನ 12 ಗಂಟೆಯಾದರೂ ದಾವಣಗೆರೆ ಧಾರವಾಡ ಕಡೆ ತೆರಳುವ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಟ್ರಾಫಿಕ್‌ ನಿರ್ವಹಣೆ ಮಾಡಲು ಪರದಾಡಿದರು.

‘ಬಸ್‌ಗಳಿಗೆ ಸುರಕ್ಷತಾ ಮಾರ್ಗಸೂಚಿ ಅಗತ್ಯ’

ದಾವಣಗೆರೆ: ಸ್ಲೀಪರ್‌ ಕೋಚ್‌ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು. ‘ರಾತ್ರಿ ಸಂದರ್ಭದ ಪ್ರಯಾಣ ಅಸುರಕ್ಷಿತ ಎಂಬ ಭಾವನೆ ಮೂಡಿದೆ. ಹೆಚ್ಚು ಅಪಘಾತಗಳು ಸಂಭವಿಸುತ್ತಿದೆ. ಸ್ಲೀಪರ್‌ ಕೋಚ್‌ ಬಸ್‌ಗಳಲ್ಲಿ ಅವಘಡ ಸಂಭವಿಸಿದಾಗ ತುರ್ತಾಗಿ ಪಾರಾಗುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಬಸ್‌ ಮಾಲೀಕರೊಂದಿಗೆ ಚರ್ಚಿಸಿ ಮಾರ್ಗಸೂಚಿ ರೂಪಿಸಬೇಕು’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ‘ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನಲ್ಲಿ ಸಂಭವಿಸಿದ ಬಸ್‌ ದುರಂತ ಅತ್ಯಂತ ದುಃಖದ ಸಂಗತಿ. ಸಾವಿನಲ್ಲಿರುವ ಕುಟುಂಬಗಳ ನೋವು ಅರ್ಥವಾಗಿದೆ. ನೋವಿನಿಂದ ಹೊರಬರುವ ಶಕ್ತಿಯನ್ನು ಸಂತ್ರಸ್ತ ಕುಟುಂಬಗಳಿಗೆ ದೇವರು ಕರುಣಿಸಲಿ’ ಎಂದರು.

ಚಾಲಕನ ಸಮಯಪ್ರಜ್ಞೆ; 43 ವಿದ್ಯಾರ್ಥಿಗಳು ಪಾರು

ಅಪಘಾತದಲ್ಲಿ 43 ವಿದ್ಯಾರ್ಥಿಗಳು ಮೂವರು ಶಿಕ್ಷಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಬೆಂಗಳೂರಿನ ಟಿ.ದಾಸರಹಳ್ಳಿಯ ಶಾಲೆಯೊಂದರ ವಿದ್ಯಾರ್ಥಿಗಳು ದಾಂಡೇಲಿಗೆ ಪ್ರವಾಸ ಹೊರಟಿದ್ದರು. ಸೀಬರ್ಡ್ ಬಸ್ ಹಿಂದೆಯೇ ಈ ಶಾಲಾ ಬಸ್ ಚಲಿಸುತ್ತಿತ್ತು.   ‘ಕಂಟೇನರ್‌ ಡಿವೈಡರ್‌ ಹತ್ತಿ ಬರುತ್ತಿದ್ದುದನ್ನು ಗಮನಿಸಿ ನಾನು ಎಡಕ್ಕೆ ಸ್ಟೇರಿಂಗ್‌ ತಿರುಗಿಸಿದೆ. ಹೀಗಾಗಿ ರಸ್ತೆ ಬದಿಯ ಕಂದಕ ದಾಟಿ ಬಸ್‌ ನೇರವಾಗಿ ಸರ್ವೀಸ್‌ ರಸ್ತೆಗೆ ಬಂತು. ವಿದ್ಯಾರ್ಥಿಗಳು ಶಿಕ್ಷಕರು ಸಣ್ಣಪುಟ್ಟ ಗಾಯಗಳೂ ಇಲ್ಲದಂತೆ ಪಾರಾದರು. ನಂತರ ಸೀಬರ್ಡ್‌ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ನೆರವಾದೆ. ನಮ್ಮ ಟ್ರಾವೆಲ್ಸ್‌ನಿಂದ ಬೇರೆ ಬಸ್‌ ವ್ಯವಸ್ಥೆ ಮಾಡಿ ಎಲ್ಲರನ್ನೂ ಪ್ರವಾಸಕ್ಕೆ ಕಳುಹಿಸಲಾಯಿತು’ ಎಂದು ಚಾಲಕ ಸಚಿನ್‌ ತಿಳಿಸಿದರು.

‘₹5 ಲಕ್ಷ ಪರಿಹಾರ’

ಬೆಂಗಳೂರು: ಚಿತ್ರದುರ್ಗದ ಬಳಿ ಲಾರಿ–ಬಸ್‌ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹5 ಲಕ್ಷ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಗಾಯಾಳುಗಳಿಗೆ ₹50000 ನೆರವು ಒದಗಿಸಲಾಗುವುದು. ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸೂಚಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ ಅಪಘಾತಕ್ಕೆ ಕಾರಣ ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.