ADVERTISEMENT

ಮರುಸಿಂಚನ ಯೋಜನೆ: ರಾಜ್ಯದ 27 ಜಿಲ್ಲೆಗಳಿಗೆ ವಿಸ್ತರಣೆ

ಎ.ಎಂ.ಸುರೇಶ
Published 11 ಸೆಪ್ಟೆಂಬರ್ 2025, 1:20 IST
Last Updated 11 ಸೆಪ್ಟೆಂಬರ್ 2025, 1:20 IST
   

ಬೆಂಗಳೂರು: ಕಲಿಕೆಯಲ್ಲಿ ಹಿಂದುಳಿ ದಿರುವ ಮಕ್ಕಳಿಗಾಗಿ ರೂಪಿಸಿರುವ ಮರುಸಿಂಚನ ಯೋಜನೆಯನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾರಿ ಗೊಳಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿನ ಸುಮಾರು 18 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯುವ ಸಾಧ್ಯತೆ ಇದೆ.

‘ಎರಡು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಈ ಯೋಜನೆಯನ್ನು 2025–26ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದರ ಅನುಷ್ಠಾನಕ್ಕೆ ಬೇಕಾದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ದಸರಾ ರಜೆಯ ಬಳಿಕ ಕಾರ್ಯರೂಪಕ್ಕೆ ಬರಲಿದೆ’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ಕೆ.ವಿದ್ಯಾಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳನ್ನು ಗುರುತಿಸಿ, ಶಾಲಾ ಅವಧಿಯಲ್ಲೇ ಪರಿಹಾರ ಬೋಧನೆ ಮೂಲಕ ಅವರ ಕಲಿಕಾ ಮಟ್ಟವನ್ನು ಸುಧಾರಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ, ಶಿಕ್ಷಕರಿಗೆ ಮಾಡ್ಯೂಲ್‌ಗಳ ಕೈಪಿಡಿ ನೀಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಮಕ್ಕಳಿಗೆ ಕಲಿಸಲಾಗುತ್ತದೆ.

ADVERTISEMENT

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ ಹಾಗೂ ಇಂಗ್ಲಿಷ್‌ ವಿಷಯಗಳಲ್ಲಿ ಅಭ್ಯಾಸ ಪುಸ್ತಕಗಳನ್ನು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (ಡಿಎಸ್‌ಇಆರ್‌ಟಿ) ಸಿದ್ಧಪಡಿಸಲಿದೆ. ಸ್ವಯಂ ಸೇವಾ ಸಂಸ್ಥೆಗಳಾದ ಪೀಪಲ್‌ ಫಾರ್‌ ಆಕ್ಷನ್‌ ಸಂಸ್ಥೆ ಮತ್ತು ಜೆ–ಪಾಲ್‌ ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗಿದ್ದು, ಕಾಲಕಾಲಕ್ಕೆ ಅಗತ್ಯ ಸಲಹೆಗಳನ್ನು ನೀಡಲಿವೆ.

ಕಲಿಕೆಯಲ್ಲಿ ಶೇ 40ಕ್ಕಿಂತ ಕಡಿಮೆ ಇರುವ ಅಥವಾ ಶೇ 60ಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಮರುಸಿಂಚನ ಯೋಜನೆಯಡಿ ಪರಿಹಾರ ಬೋಧನೆ
ತರಗತಿಗಳನ್ನು ನಡೆಸಬೇಕೇ ಎಂಬುದು ಇನ್ನೂ ಅಂತಿಮವಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಭಿನ್ನ ಸಲಹೆಗಳು ಬಂದಿವೆ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆ ಬಳಿಕ ಮಕ್ಕಳ ಸಂಖ್ಯೆ ನಿಖರವಾಗಿ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

ಗುಣಮಟ್ಟ ಸುಧಾರಣೆ: 10ನೇ ತರಗತಿಯಲ್ಲಿ ಕಡಿಮೆ ಫಲಿತಾಂಶ, ಉತ್ತೀರ್ಣರಾಗದೆ ಇರುವುದು ಕಂಡುಬಂದಿದೆ. ಅಲ್ಲದೆ ಮಕ್ಕಳು ಯಾವ ಹಂತದಲ್ಲಿ ಎಷ್ಟು ಕಲಿತಿರಬೇಕೊ, ಅಷ್ಟು ಕಲಿತಿರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು  ಆಯಾ ತರಗತಿಯಿಂದಲೇ ಗುಣಮಟ್ಟದಲ್ಲಿ ಸುಧಾರಣೆ ತರಲು ಮರುಸಿಂಚನ ಕಾರ್ಯಕ್ರಮ ರೂಪಿಸಲಾಗಿದೆ. 

ಅಭ್ಯಾಸ ಪುಸ್ತಕ 80ರಿಂದ 100 ಪುಟ ಇರಲಿದ್ದು, ಮಕ್ಕಳ ಸಾಮರ್ಥ್ಯವನ್ನು ಅರಿತು ಪೂರಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಸಲಾಗುತ್ತದೆ. ಸಾಮಾನ್ಯ ತರಗತಿ ಹೊರತುಪಡಿಸಿ, ಹೆಚ್ಚುವರಿಯಾಗಿ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕಲಿಸುವುದರಿಂದ ಮಕ್ಕಳ ಕಲಿಕಾ ಮಟ್ಟದಲ್ಲಿ ಸುಧಾರಣೆಯಾಗಿರುವುದು
ಮೌಲ್ಯಾಂಕನದಿಂದ ದೃಢಪಟ್ಟಿದೆ. ಇದನ್ನು ಆಧರಿಸಿ ಈ ವರ್ಷ ಎಲ್ಲ ಸರ್ಕಾರಿ ಶಾಲೆಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ.

ಪ್ರಾಯೋಗಿಕ ಯೋಜನೆ ಯಶಸ್ವಿ

17 ಜಿಲ್ಲೆಗಳ 93 ತಾಲ್ಲೂಕುಗಳಲ್ಲಿ 9ನೇ ತರಗತಿ ಮಕ್ಕಳಿಗೆ 2023–24ರಲ್ಲಿ ಪ್ರಾಯೋಗಿಕವಾಗಿ ಮರುಸಿಂಚನ ಯೋಜನೆ ಜಾರಿಗೊಳಿಸಲಾಗಿತ್ತು. ಕಳೆದ ವರ್ಷ 6ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿಸ್ತರಿಸಲಾಗಿತ್ತು. ಇದು ಯಶಸ್ವಿಯಾಗಿರುವುದನ್ನು ಗಮನಿಸಿ 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.

‘ರಾಜ್ಯದಲ್ಲಿ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳಿವೆ. ಈ ಪೈಕಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿರಸಿ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಒಟ್ಟಾರೆ ಶೈಕ್ಷಣಿಕ ಗುಣಮಟ್ಟ ಚೆನ್ನಾಗಿದೆ. ಆ ಜಿಲ್ಲೆಗಳಲ್ಲೂ ಕೆಲವು ಶಾಲೆಗಳಲ್ಲಿನ ಮಕ್ಕಳ ಕಲಿಕಾ ಮಟ್ಟ ಕಡಿಮೆ ಇರಬಹುದು. ಆದರೆ, ಆ ಜಿಲ್ಲೆಗಳಲ್ಲಿ ಮರುಸಿಂಚನ ಜಾರಿ ಮಾಡುವ ಬಗ್ಗೆ ಸದ್ಯಕ್ಕೆ ನಿರ್ಧರಿಸಿಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.