ರಾಯಚೂರು/ಬೀದರ್: ಮಸ್ಕಿ ವಿಧಾನ ಸಭಾ ಕ್ಷೇತ್ರದ ಉಪ ಚನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನವೇ ಪ್ರತಾಪಗೌಡ ಪಾಟೀಲ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಸಹ ಉಮೇದುವಾರಿಕೆ ಸಲ್ಲಿಸಿದರು.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮಾಲಾ (ಮಲ್ಲಮ್ಮ) ನಾರಾಯಣರಾವ್, ಹಿಂದೂಸ್ತಾನ್ ಜನತಾ ಪಾರ್ಟಿಯ ವೆಂಕಟೇಶ ಸ್ವಾಮೀಜಿ ಹಾಗೂ ಆಲ್ ಇಂಡಿಯಾ ಮುಸ್ಲಿಮ್ ಲೀಗ್ (ಸೆಕ್ಯುಲರ್)ನಿಂದ ಫರ್ಜನಾ ಬೇಗಂ ನಾಮಪತ್ರ ಸಲ್ಲಿಸಿದರು.
ಈವರೆಗೆ ಮಸ್ಕಿಗೆ ಇಬ್ಬರು ಹಾಗೂ ಬಸವಕಲ್ಯಾಣಕ್ಕೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.
ಮಾಲಾ ಬಳಿ 1 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ
ಬೀದರ್: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಲಾ (ಮಲ್ಲಮ್ಮ) ನಾರಾಯಣರಾವ್ ಅವರು ಒಂದು ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ ಹೊಂದಿದ್ದಾರೆ. ಚಿನ್ನ–ಬೆಳ್ಳಿಯ ಮೌಲ್ಯ ₹75 ಲಕ್ಷ ಎಂದು ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇವರು ಹಾಗೂ ಇಬ್ಬರು ಪುತ್ರರ ಹೆಸರಿನಲ್ಲಿ ಒಟ್ಟಾರೆ 10 ಎಕರೆ ಕೃಷಿ ಜಮೀನು, ಬೀದರ್‌ನ ಕೆಎಚ್‌ಬಿ ಕಾಲೊನಿ, ಯಾದಗಿರಿಯಲ್ಲಿ ನಿವೇಶನ ಹಾಗೂ ಬೆಂಗಳೂರಿನಲ್ಲಿ ಮನೆ ಇದೆ. ಇವರ ಕುಟುಂಬದ ಒಟ್ಟಾರೆ ಸ್ಥಿರ ಮತ್ತು ಚರ ಆಸ್ತಿಯ ಮೌಲ್ಯ ₹7.02 ಕೋಟಿ.
ಪ್ರತಾಪಗೌಡ ಆಸ್ತಿ ಹೆಚ್ಚಳ
ರಾಯಚೂರು: ಮಸ್ಕಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಪ್ರತಾಪಗೌಡ ಪಾಟೀಲ ಅವರು, ಶಾಸಕರಾಗಿ ಮೊದಲ ಬಾರಿ ಆಯ್ಕೆಯಾದ ಅವಧಿಯಿಂದ ಈವರೆಗೆ ಆಸ್ತಿ ಒಟ್ಟು ₹5 ಕೋಟಿಯಷ್ಟು ಹೆಚ್ಚಳವಾಗಿದೆ.
ಸ್ಥಿರಾಸ್ತಿ ಮತ್ತು ಚರಾಸ್ತಿ ಒಟ್ಟು ₹5.92 ಕೋಟಿ ಇದೆ ಎಂದು ಅವರು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. 2008 ರಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುವಾಗ ಅವರ ಒಟ್ಟು ಆಸ್ತಿ ₹98 ಲಕ್ಷ ಇತ್ತು.
ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ₹1.62 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.