ADVERTISEMENT

ಲಾಕ್‌ಡೌನ್‌ ನಡುವೆಯೂ ನಡೆದ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:21 IST
Last Updated 5 ಏಪ್ರಿಲ್ 2020, 16:21 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು.   

ಚಿತ್ರದುರ್ಗ: ಲಾಕ್‌ಡೌನ್‌ ನಡುವೆಯೂ ಮುರುಘಾ ಮಠದಲ್ಲಿ ಭಾನುವಾರ ಸಾಮೂಹಿಕ ವಿವಾಹ ನಡೆಯಿತು. ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು–ವರರು ಮತ್ತು ಅವರ ತಂದೆ–ತಾಯಿಗಳು ಮಾತ್ರ ಪಾಲ್ಗೊಂಡಿದ್ದರು.

ವಧು–ವರರು ಹಾಗೂ ಅವರ ಪೋಷಕರ ಕೋರಿಕೆಯ ಮೇರೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಾಮೂಹಿಕ ವಿವಾಹ ನಡೆಸಲಾಯಿತು ಎಂದು ಮುರುಘಾ ಮಠ ಪ್ರಕಟಣೆ ಹೊರಡಿಸಿದೆ. ಶಿವಮೂರ್ತಿ ಮುರುಘಾ ಶರಣರು ನವ ದಂಪತಿಗಳನ್ನು ಹರಸಿದ್ದಾರೆ.

‘ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಮುರುಘಾ ಮಠದಲ್ಲಿ ಏ.5ರಂದು ನಿಗದಿಯಾಗಿದ್ದ ಸಾಮೂಹಿಕ ವಿವಾಹನವನ್ನು ರದ್ದುಪಡಿಸಲಾಗಿತ್ತು. ದಾಂಪತ್ಯ ಜೀವನಕ್ಕೆ ಅಡಿ ಇಡಲು ಸಜ್ಜಾಗಿದ್ದ 18 ಜೋಡಿಗಳ ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಮೂವರು ವಧು–ವರರು ಹಾಗೂ ಅವರ ಪೋಷಕರು ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಕೇಳಿದರು. ಹೀಗಾಗಿ, ವಿವಾಹ ಕಾರ್ಯ ನಡೆಯಿತು’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

30ನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ತರಾತುರಿಯಲ್ಲಿ ನಿಗದಿಯಾಯಿತು. ಮೂರು ಜೋಡಿಗಳಿಂದ 17 ಜನರು ಮಾತ್ರ ಪಾಲ್ಗೊಂಡಿದ್ದರು. ಅನುಭವ ಮಂಟಪದ ವಿಶಾಲ ಸಭಾಂಗಣದಲ್ಲಿ ಸಾಮಾಜಿಕ ಅಂತರದ ಪ್ರಕಾರ ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಯಿತು. ಸ್ಯಾನಿಟೈಸರ್‌, ಮಾಸ್ಕ್‌ ನೀಡಿ ವಿವಾಹ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು.

ಶಿವಮೂರ್ತಿ ಮುರುಘಾ ಶರಣರು ವಧು-ವರರಿಗೆ ತಾಳಿ, ಬಟ್ಟೆ ನೀಡಿ ಪುಷ್ಪಾರ್ಚನೆ ಮಾಡಿದರು. ಸಾಮೂಹಿಕ ವಿವಾಹದ ಸಂದರ್ಭದಲ್ಲಿ ತುಂಬಿರುತ್ತಿದ್ದ ಸಭಾಂಗಣದಲ್ಲಿ ಯಾವುದೇ ಅತಿಥಿಗಳಿರಲಿಲ್ಲ. ಭಾಷಣ ಸೇರಿದಂತೆ ವೇದಿಕೆ ಕಾರ್ಯಕ್ರಮ ಇರಲಿಲ್ಲ. ಐದು ನಿಮಿಷದಲ್ಲಿ ಎಲ್ಲ ಕೈಂಕರ್ಯಗಳು ಮುಕ್ತಾಯವಾದವು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಆರ್.ಲಿಂಗರಾಜು ಇದ್ದರು. ಜಮುರಾ ಕಲಾವಿದರು ವಚನ ಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.