ನವದೆಹಲಿ: ಹಲವು ಲೋಕಸಭಾ, ರಾಜ್ಯಸಭಾ ಸಂಸದರು ವಾಸವಿರುವ, ನವದೆಹಲಿಯ ಬ್ರಹ್ಮಪುತ್ರ ವಸತಿ ಸಮುಚ್ಚಯದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಬೆಂಕಿ ಅವಘಡ ಸಂಭವಿಸಿದೆ.
‘ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ದುರಂತದಲ್ಲಿ ಯಾರೂ ಮೃತಪಟ್ಟಿಲ್ಲ’ ಎಂದು ದೆಹಲಿಯ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಕೆಲವು ಮಕ್ಕಳು ಗಾಯಗೊಂಡಿದ್ದು, ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
‘ಬಾಬಾ ಖರಗ್ ಸಿಂಗ್ ಮಾರ್ಗದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಧ್ಯಾಹ್ನ 1.22ಕ್ಕೆ ಕರೆಬಂದಿತ್ತು. ತಕ್ಷಣವೇ 14 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ, ಮಧ್ಯಾಹ್ನ 2.10ಕ್ಕೆ ಬೆಂಕಿ ನಂದಿಸಿದವು’ ಎಂದು ಹೇಳಿದ್ದಾರೆ.
2020ರಲ್ಲಿ ಈ ಅಪಾರ್ಟ್‌ಮೆಂಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
‘ಕೆಲವರು ಪಟಾಕಿ ಸಿಡಿಸಿದ್ದರಿಂದ ಕೆಳಭಾಗದಲ್ಲಿ ಸೋಫಾಕ್ಕೆ ಬೆಂಕಿ ಹತ್ತಿಕೊಂಡಿತ್ತು. ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತು’ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಟ್ಟಡದಲ್ಲಿ ಹೊಗೆ ದಟ್ಟೈಸಿರುವ ವಿಡಿಯೊಗಳು ಹರಿದಾಡಿವೆ.
‘ಕಟ್ಟಡದ ನೆಲಮಹಡಿಯಲ್ಲಿದ್ದ (ಸೆಲ್ಲಾರ್) ಸೋಫಾಕ್ಕೆ ಬೆಂಕಿ ಹತ್ತಿಕೊಂಡಿತ್ತು. ಹೊಗೆ ಮೇಲ್ಬಾಗಕ್ಕೆ ಆವರಿಸಿದ್ದರಿಂದ, ಮೇಲಿನ ಮಹಡಿಗಳಲ್ಲಿಯೂ ಹಾನಿ ಸಂಭವಿಸಿತು’ ಎಂದು ದೆಹಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಭೂಪೇಂದ್ರ ಪ್ರಕಾಶ್ ತಿಳಿಸಿದ್ದಾರೆ.
‘ಬೆಂಕಿ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ,
‘ನಾನು ಕೆಲಸ ಮಾಡುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿತು. ಆಭರಣ, ಬಟ್ಟೆ, ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಬೆಂಕಿಗೆ ಆಹುತಿಯಾದವು’ ಎಂದು ಉತ್ತರಾಖಂಡ ಸಂಸದರೊಬ್ಬರ ಆಪ್ತ ಸಹಾಯಕ ಕಮಲ್ ತಿಳಿಸಿದ್ದಾರೆ.
‘ಕೆಳಹಂತದ ಮೂರು ಮಹಡಿಗಳಲ್ಲಿ ಸಂಸದರ ಆಪ್ತ ಸಹಾಯಕರು, ಸಿಬ್ಬಂದಿಗೆ ಮನೆಗಳನ್ನು ನೀಡಲಾಗಿತ್ತು. ನಾಲ್ಕನೇ ಮಹಡಿಯಿಂದ ಮೇಲ್ಭಾಗದಲ್ಲಿ ಸಂಸದರಿಗೆ ವಸತಿ ನೀಡಲಾಗಿತ್ತು. ಈಗ ಕೆಳಹಂತದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನೌಕರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅವರಿಗೆ ನೆರವಾಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.