ADVERTISEMENT

ಭೋರ್ಗರೆವ ಪ್ರವಾಹದ ನಡುವೆ ಸ್ತಬ್ಧವಾದ ಜೋಡುಪಾಲ

ಕ್ಷಣಾರ್ಧದಲ್ಲಿ ಸಾವಿರಾರು ಮರಗಳನ್ನು ಕೊಚ್ಚಿಕೊಂಡು ಬಂದು ಹಳ್ಳಿಗೆ ಅಪ್ಪಳಿಸಿದ ತೊರೆ

ವಿ.ಎಸ್.ಸುಬ್ರಹ್ಮಣ್ಯ
Published 18 ಆಗಸ್ಟ್ 2018, 15:23 IST
Last Updated 18 ಆಗಸ್ಟ್ 2018, 15:23 IST
ಜೋಡುಪಾಲ ತಿರುವಿನಲ್ಲಿ ಮನೆಗಳು, ಅಂಗಡಿ, ಸೇತುವೆ ಕೊಚ್ಚಿಕೊಂಡು ಹೋಗಿರುವ ಸ್ಥಳದಲ್ಲಿ ಶನಿವಾರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು –ಚಿತ್ರ ಗೋವಿಂದರಾಜ್ ಜವಳಿ
ಜೋಡುಪಾಲ ತಿರುವಿನಲ್ಲಿ ಮನೆಗಳು, ಅಂಗಡಿ, ಸೇತುವೆ ಕೊಚ್ಚಿಕೊಂಡು ಹೋಗಿರುವ ಸ್ಥಳದಲ್ಲಿ ಶನಿವಾರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು –ಚಿತ್ರ ಗೋವಿಂದರಾಜ್ ಜವಳಿ   

ಜೋಡುಪಾಲ (ಕೊಡಗು): ಮಡಿಕೇರಿ ನಗರಕ್ಕೆ 14 ಕಿಲೋಮೀಟರ್ ದೂರದಲ್ಲಿರುವ ಜೋಡುಪಾಲ ವರುಣನ ರುದ್ರನರ್ತನಕ್ಕೆ ಅಕ್ಷರಶಃ ತತ್ತರಿಸಿಹೋಗಿದೆ. ಪ್ರವಾಹದ ಜಲಧಾರೆಯ ಭೋರ್ಗರೆತ ಮತ್ತು ಭೂಕುಸಿತದ ಭೀಕರತೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳು ಸ್ತಬ್ಧವಾಗಿವೆ.

ಮಂಗಳೂರು- ಮಡಿಕೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಇರುವ ಜೋಡುಪಾಲದಲ್ಲಿ ಈಗ ಪರಿಹಾರ ಕಾರ್ಯಾಚರಣೆಯ ಗದ್ದಲ ಮಾತ್ರ ಕಾಣಿಸುತ್ತದೆ. ಹೆದ್ದಾರಿಯ ಮೇಲ್ಭಾಗದ ಈಶ್ವರ ಕಲ್ಲು ಪರ್ವತ ಶ್ರೇಣಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೂಕುಸಿತ ಮತ್ತು ನಂತರ ಉಂಟಾದ ಪ್ರವಾಹ ಇಡೀ ಊರಿನ ಚಹರೆಯನ್ನೇ ಬದಲಾಯಿಸಿವೆ. ಮೂರು ಮನೆ ಮತ್ತು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಇದ್ದ ಒಂದು ಅಂಗಡಿ ಕೊಚ್ಚಿಕೊಂಡು ಹೋಗಿದೆ. ಒಂದೇ ಕುಟುಂಬದ ಇಬ್ಬರ ಮೃತದೇಹಗಳ ಪತ್ತೆಯಾಗಿದೆ. ಇನ್ನಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೊಚ್ಚಿಹೋದ ಅಂಗಡಿ ಮಾಲೀಕ ಕೂಡ ಪತ್ತೆಯಾಗಿಲ್ಲ.

ಕೊಚ್ಚಿಕೊಂಡು ಹೋಗಿರುವ ಅಂಗಡಿಯ ಅವಶೇಷಗಳಲ್ಲಿ ಪತ್ತೆಯಾದ ದ್ವಿಚಕ್ರ ವಾಹ‌ನ. – ಚಿತ್ರ: ಗೋವಿಂದರಾಜ್ ಜವಳಿ


ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ಬಾಂಬ್ ಸ್ಫೋಟಿಸಿದಂತೆ ಶಬ್ಧವಾಗಿದೆ.ಆಗ ಮನೆಯಿಂದ ಹೊರಬಂದ ಜನರಿಗೆ ಭೂಕುಸಿತ ಆಗಿರುವುದು ಗೊತ್ತಾಗಿದೆ. ಕೆಲವೇ ಕ್ಷಣಗಳಲ್ಲಿ ಸಣ್ಣ ತೊರೆಯೊಂದು ನದಿಯ ಸ್ವರೂಪದಲ್ಲಿ ಹರಿಯಲಾರಂಭಿಸಿದೆ. ಸಾವಿರಾರು ಮರಗಳು ನೀರಿನಲ್ಲಿ ಕೊಚ್ಚಿಕೊಂಡು ಬಂದು ಮನೆಗಳಿಗೆ ಅಪ್ಪಳಿಸಿವೆ. ಜೋಡುಪಾಲ ತಿರುವಿ‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಸೇತುವೆಗೂ ಅಪ್ಪಳಿಸಿವೆ. ಸೇತುವೆಯೂ ಕೊಚ್ಚಿಕೊಂಡು ನೀರು ಪಾಲಾಗಿದೆ.

ಸರಣಿ ಭೂಕುಸಿತ

ಜೋಡುಪಾಲದಿಂದ ಮಡಿಕೇರಿವರೆಗಿನ ಮಾರ್ಗದಲ್ಲಿ ಜೋಡುಪಾಲ, ಒಂದನೇ ಮಣ್ಣಂಗೇರಿ, ಎರಡನೇ ಮಣ್ಣಂಗೇರಿ, ಮದೆನಾಡು ಸೇರಿದಂತೆ ಹತ್ತು ಕಿಲೋಮೀಟರ್ ಉದ್ದಕ್ಕೆ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದೆ. ಈ ಭಾಗದ ನೂರಾರು ಕುಟುಂಬಗಳು ತೊಂದರೆಗೆ ಸಿಲುಕಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ನಡೆಸಿದ ಕಾರ್ಯಾಚರಣೆಯಲ್ಲಿ ಈವರೆಗೆ 350ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.



ಅಲ್ಲಲ್ಲಿ ಇನ್ನೂ ಭೂಕುಸಿತ ಸಂಭವಿಸುತ್ತಲೇ ಇದೆ. ಇದರಿಂದ ಬೆದರಿದ ಜನರು ಜಾನುವಾರು, ಸಾಕುಪ್ರಾಣಿಗಳನ್ನು ಅಲ್ಲಿಯೇ ಬಿಟ್ಟು ಓಡಿ ಬಂದಿದ್ದಾರೆ. ಹೆದ್ದಾರಿಯುದ್ದಕ್ಕೂ ಒಂಟಿ ಮನೆಗಳಲ್ಲಿ ಉಳಿದಿರುವ ನಾಯಿಗಳು ಹಸಿವು ತಾಳಲಾರದೇ ದಾರಿ ನೋಡುತ್ತಾ ಕೂಗುತ್ತಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿ ಒದಗಿಸುತ್ತದೆ.

ADVERTISEMENT

350 ಮಂದಿ ರಕ್ಷಣೆ:

ಶುಕ್ರವಾರ ಸಂಜೆಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಜೋಡುಪಾಲದಿಂದ ಮದೆನಾಡುವರೆಗಿನ ಮಾರ್ಗದಲ್ಲಿ ಘಟ್ಟ ಸಾಲಿನ ಮನೆಗಳಲ್ಲಿದ್ದ 350 ಮಂದಿಯನ್ನು ಶನಿವಾರ ಸಂಜೆಯವರೆಗೂ ರಕ್ಷಣೆ ಮಾಡಲಾಗಿದೆ. ಬೆಲೆಬಾಳುವ ವಸ್ತುಗಳು ಮತ್ತು ಬಟ್ಟೆಗಳನ್ನಷ್ಟೇ ಹೊರತರಲು ಅವರಿಗೆ ಸಾಧ್ಯವಾಗಿದೆ. ಕೆಲವು ಮನೆಗಳು ಬಾಗಿಲು ತೆರೆದ ಸ್ಥಿತಿಯಲ್ಲೇ ಇವೆ.

ರಕ್ಷಣೆ ಮಾಡಿರುವವರಲ್ಲಿ ಒಬ್ಬ ಗರ್ಭಿಣಿ, ಒಂದು ತಿಂಗಳಿನ ಮಗುವಿರುವ ಒಬ್ಬ ಬಾಣಂತಿ, ಐದರಿಂದ ಆರು ತಿಂಗಳಿನ ಮಗುವಿರುವ ಮೂವರು ಬಾಣಂತಿಯರು ಸೇರಿದ್ದಾರೆ. ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಕೆಲವು ವೃದ್ಧರನ್ನು ಭೂಕುಸಿತದಿಂದ ಹಾನಿಯಾಗಿರುವ ಮಾರ್ಗದಲ್ಲೇ ಹೊತ್ತು ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.