ADVERTISEMENT

ಕಳೆದ 4 ವರ್ಷಗಳ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಯತ್ನಾಳಗೆ ಎಂ.ಬಿ ಪಾಟೀಲ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2023, 15:27 IST
Last Updated 6 ಜೂನ್ 2023, 15:27 IST
   

ಬೆಂಗಳೂರು: ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು ಉದುರಿಸುವಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಎಂದು ಸಚಿವ ಎಂ.ಬಿ. ಪಾಟೀಲ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಸಚಿವ ಎಂ.ಬಿ ಪಾಟೀಲ ಅವರು ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಿಡಿಕಾರಿದ್ದರು. ‘ಸಂಘ ಪರಿವಾರದವರು ಕಳೆದ ನಾಲ್ಕು ವರ್ಷ ಹಿಜಾಬ್‌, ಹಲಾಲ್‌, ಆಜಾನ್‌ ಸೇರಿದಂತೆ ಪಠ್ಯಪುಸ್ತಕದಲ್ಲಿ ಮಾಡಿರುವ ಅನಾಹುತವನ್ನು ಸರಿಪಡಿಸುವ ಕೆಲಸ ಕಾಂಗ್ರೆಸ್‌ ಮಾಡಲಿದೆ. ರಾಜ್ಯದಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಮುಂದುವರಿಸಿದರೆ ಸೂಲಿಬೆಲೆಗೆ ಜೈಲು ಕಂಬಿ ಎಣಿಸುವಂತೆ ಮಾಡುತ್ತೇವೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದ್ದರು.

ಪಾಟೀಲರ ಈ ಹೇಳಿಕೆಯನ್ನು ಟೀಕಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ, ‘ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಎಂ.ಬಿ ಪಾಟೀಲ ಅವರು ಮರೆಯಬಾರದು. ಎಫ್‌ಐಆರ್‌ ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಎಂದು ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಂತ್ರಿಗಳು ಅಸಹಿಷ್ಣುಗಳಾಗಬಾರದು. ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದ ಅಡಿ ನಡೆಯುವುದು, ಪರಿಚ್ಛೇದ 19ರ ಬಗ್ಗೆ ತಿಳಿದುಕೊಳ್ಳಬೇಕಾಗಿ ಎಂ.ಬಿ ಪಾಟೀಲರಿಗೆ ತಾಕೀತು ಮಾಡುತ್ತೇನೆ’ ಎಂದು ಟ್ವೀಟ್‌ ಮಾಡಿದ್ದರು.

ADVERTISEMENT

ಇದಕ್ಕೆ ತಿರುಗೇಟು ನೀಡಿರುವ ಎಂ.ಬಿ ಪಾಟೀಲ, ‘ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್ ಎಂದೆಲ್ಲಾ ನೀವು ಅಣಿಮುತ್ತು ಉದುರಿಸುವಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಸತತವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮಿಂದ ಪಾಠ ಕಲಿಯಬೇಕಿಲ್ಲ’ ಎಂದು ಯತ್ನಾಳಗೆ ಟ್ವೀಟ್‌ ಮೂಲಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.