ADVERTISEMENT

ಮಂಗಳೂರು | ₹75 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಬ್ಬರು ವಿದೇಶಿ ಮಹಿಳೆಯರ ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 6:34 IST
Last Updated 16 ಮಾರ್ಚ್ 2025, 6:34 IST
   

ಮಂಗಳೂರು: ನಿಷೇಧಿತ ಮಾದಕ ಪದಾರ್ಥ ಎಂಡಿಎಂಎ ಮಾರಾಟ ಜಾಲವನ್ನು ಭೇದಿಸಿದ ನಗರ ಸಿಸಿಬಿ ಪೊಲೀಸರು, ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳಾ ಪ್ರಜೆಗಳನ್ನು ಬಂಧಿಸಿ ಅವರಿಂದ 37.87 ಕೆ.ಜಿ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಅದರ ಮೌಲ್ಯ ₹75 ಕೋಟಿ ಎಂದು ಅಂದಾಜಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗ್ರವಾಲ್‌, ‘ರಾಜ್ಯದಲ್ಲಿ ಪೊಲೀಸರು ಇಷ್ಟೊಂದು ಪ್ರಮಾಣದಲ್ಲಿ ಎಂಡಿಎಂಎ ವಶಪಡಿಸಿಕೊಂಡಿದ್ದು ಇದೇ ಮೊದಲು’ ಎಂದರು. 

‘ದಕ್ಷಿಣ ಆಫ್ರಿಕಾದ ಬಾಂಬಾ ಫಾಂಟಾ ಅಲಿಯಾಸ್‌ ಅಡ್ನೋಯಿಸ್‌ ಜಾಬುಲಿಲೆ (31) ಹಾಗೂ ಅಬಿಗೇಲ್‌ ಅಡ್ನೋಯಿಸ್‌ ಅಲಿಯಾಸ್‌ ಒಲಿಜೊ ಇಯಾನ್ಸ್‌ (30)ಬಂಧಿತರು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಅವರನ್ನು ಮಾ.14ರಂದು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ವಶಕ್ಕೆ ಪಡೆದಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ನಗರದ ಪೂರ್ವ ಠಾಣೆಯ ವ್ಯಾಪ್ತಿಯ ಪಂಪ್‌ವೆಲ್ ಬಳಿ ವಸತಿಗೃಹವೊಂದರಲ್ಲಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪಿ ಹೈದರ್ ಆಲಿಯನ್ನು ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ 15 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಆತ ನೀಡಿದ ಮಾಹಿತಿ ಆಧಾರದಲ್ಲಿ ನೈಜೀರಿಯಾ ಪ್ರಜೆ ಪೀಟರ್ ಐಕೆಡಿ  ಬೆಲೊನೊವು  ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿ ಆತನಿಂದ 6.248 ಕೆ.ಜಿ ಎಂಡಿಎಂಎ ವಶಪಡಿಸಿಕೊಂಡಿದ್ದೆವು. ಆತನ ವಿಚಾರಣೆ ನಡೆಸಿದಾಗ ಬೆಂಗಳೂರು ನಗರಕ್ಕೆ ದೆಹಲಿಯಿಂದ ಹಾಗೂ ವಿದೇಶಿ ಮೂಲಗಳಿಂದ ಭಾರಿ ಪ್ರಮಾಣದಲ್ಲಿ ಮಾದಕ ಪದಾರ್ಥ ಪೂರೈಕೆಯಾಗುತ್ತಿರುವುದು ಗೊತ್ತಾಗಿತ್ತು’ ಎಂದರು.

‘ಪೀಟರ್ ಐಕೆಡಿ ಬೆಲೊನೊವುಗೆ ಬಾಂಬಾ ಫಾಂಟಾ ಹಾಗೂ ಒಲಿಜೊ ಇಯಾನ್ಸ್‌ ಇವರು ಮಾದಕ ಪದಾರ್ಥ ‍ಪೂರೈಸುತ್ತಿದ್ದುದು ಗೊತ್ತಾಯಿತು. ಈ ಮಹಿಳೆಯರು ಆರು ತಿಂಗಳಲ್ಲಿ 59 ಸಲ ದೆಹಲಿ ಹಾಗೂ ಬೆಂಗಳೂರು ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದರು’ ಎಂದರು.

ಮಾರ್ಚ್ 14ರಂದು ಅವರು ಬೆಂಗಳೂರಿಗೆ ಬರುತ್ತಿರುವುದು ಗೊತ್ತಾಯಿತು. ವಿಮಾನ ನಿಲ್ದಾಣದಿಂದ ಹೊರಬಂದ ಅವರನ್ನು ಹಿಂಬಾಲಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ವಶಕ್ಕೆ ಪಡೆದೆವು. ಅವರು ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್‌ನಲ್ಲಿ ಸಾಗಿಸಿದ್ದ 37.878 ಕೆ.ಜಿ  ಎಂಡಿಎಂಎ, ನಾಲ್ಕು ಮೊಬೈಲ್ ಫೋನುಗಳು, ಎರಡು ಪಾಸ್ ಪೋರ್ಟ್, ₹18,460 ನಗದು ಮತ್ತಿತರ ಸೊತ್ತು ವಶಪಡಿಸಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

ವಶಪಡಿಸಿಕೊಂಡ ಎಂಡಿಎಂಎ ಜೊತೆ ಪೊಲೀಸರು

‘ಆರೋಪಿಗಳು ರಾತ್ರಿ ವೇಳೆ ವಿಮಾನದಲ್ಲಿ ಬಂದು ಬಾಡಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸಿ ಬೆಂಗಳೂರು ನಗರದ ಕೆ.ಆರ್‌.ಪುರ, ಹೊಸಕೋಟೆ ಮೊದಲಾದ ಕಡೆ, ಪೆಡ್ಲರ್‌ಗಳಾದ ನೈಜೀರಿಯನ್ ಪ್ರಜೆಗಳಿಗೆ ಎಂಡಿಎಂಎ ಪೂರೈಸುತ್ತಿದ್ದರು. 24 ಗಂಟೆಯ ಒಳಗೆ ಅವರು ದೆಹಲಿಗೆ ಮರಳುತ್ತಿದ್ದರು. ಅವರಿಬ್ಬರೂ ಬಳಸುತ್ತಿದ್ದ ಪಾಸ್‌ಪೋರ್ಟ್‌ ನಕಲಿ. ಅವರು ಯಾವೆಲ್ಲ ಸ್ಥಳೀಯ ಪೆಡ್ಲರ್‌ಗಳಿಗೆ ಮಾದಕ ಪದಾರ್ಥ ಪೂರೈಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಯತ್ನಿಸಿದ್ದೆವು. ಆದರೆ ಫಲ ಸಿಕ್ಕಿಲ್ಲ’ ಎಂದರು.

‘ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ಸಿಕ್ಕಿ ಬೀಳದೆ ಹೇಗೆ ತಪ್ಪಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ  ಹಾಗೂ ಪ್ರತಿ ಬಾರಿ ಬೆಂಗಳೂರಿಗೆ ಬಂದಾಗ ಎಷ್ಟು ಮಾದಕ ಪದಾರ್ಥ ತಂದಿದ್ದರು. ಅದನ್ನು ಯಾರಿಗೆ ಮಾರಾಟ ಮಾಡಿದ್ದರು ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ’ ಎಂದರು.

ಸಿಸಿಬಿ ಎಸಿಪಿ ಮನೋಜ್ ನಾಯ್ಕ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ರಫೀಕ್‌ ಕೆ.ಎಂ., ಪಿಎಸ್‌ಐ ಸುದೀಪ್‌ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್‌ಐ ಮೋಹನ್‌ ಕೆ.ವಿ., ರಾಮಪೂಜಾರಿ, ಶೀನಪ್ಪ, ಸುಜನ್‌ ಶೆಟ್ಟಿ ಮತ್ತು ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಕಮಿಷನರ್‌ ಮೆಚ್ಚುಗೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ಧಾರ್ಥ ಗೋಯಲ್‌, ಡಿಸಿಪಿ (ಅಪರಾಧ) ಕೆ.ರವಿಶಂಕರ್‌, ಸಿಸಿಬಿ ಎಸಿಪಿ ಮನೋಜ್ ನಾಯ್ಕ್‌ ಭಾಗವಹಿಸಿದ್ದರು.

ಪಾಸ್‌ಪೋರ್ಟ್‌ ನಕಲಿ
‘ಬಾಂಬಾ ಫಾಂಟಾ ಎಂಬಾಕೆ ಅಡ್ನೊಯಿಸ್‌ ಜಾಬುಲಿಲೆ ಎಂಬ ನಕಲಿ ಹೆಸರಿನಲ್ಲಿ ಪಾಸ್‌ಪೋರ್ಟ್‌ ಪಡೆದು, ಬಿಜಿನೆಸ್ ವೀಸಾದಲ್ಲಿ 2020ರಲ್ಲಿ ಭಾರತಕ್ಕೆ ಬಂದಿದ್ದಳು. ಇಲ್ಲಿ ಫುಡ್ ಕಾರ್ಟ್‌ ವ್ಯವಹಾರ ನಡೆಸುತ್ತಿದ್ದಳು. ನವದೆಹಲಿಯ ನಾವ್ಡಾದ ಲಕ್ಷ್ಮೀವಿಹಾರ್‌ನಲ್ಲಿ ವಾಸವಿದ್ದಳು. ಒಲಿಜೊ ಇಯಾನ್ಸ್‌ ನವದೆಹಲಿಯ ಮಾಳವೀಯ ನಗರದಲ್ಲಿ ವಾಸವಿದ್ದಳು. ಈಕೆ ಮೆಡಿಕಲ್‌ ವೀಸಾದಲ್ಲಿ ಭಾರತಕ್ಕೆ 2016ರಲ್ಲಿ ಬಂದಿದ್ದು, ಬಳಿಕ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಇವರಿಬ್ಬರೂ ಮಾದಕ ವಸ್ತು ದಂಧೆಯ ಹಣದಿಂದ ಐಷಾರಾಮಿ ಜೀವನ ಸಾಗಿಸುತ್ತಿದ್ದರು’ ಎಂದು ಕಮಿಷನರ್‌ ತಿಳಿಸಿದರು.

ಏನೇನು ವಶ?

  • ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿ ನೀಲಾದ್ರಿ ನಗರದಲ್ಲಿ ವಶಕ್ಕೆ

  • 4 ಮೊಬೈಲ್, 2 ಪಾಸ್‌ಪೋರ್ಟ್, ₹18,460 ನಗದು ವಶ

  • ನವದೆಹಲಿ– ಬೆಂಗಳೂರು ನಡುವೆ 6 ತಿಂಗಳಲ್ಲಿ 59 ಸಲ ಪ್ರಯಾಣ

ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ. ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೊಗೆಯುವುದು ಸರ್ಕಾರದ ಗುರಿ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಡ್ರಗ್ಸ್‌ ಮಾಫಿಯಾ ಬಗ್ಗೆ ಕನಿಕರದ ಪ್ರಶ್ನೆಯೇ ಇಲ್ಲ. ಮಾದಕ ವಸ್ತು ಮುಕ್ತ ಭಾರತ ನಿರ್ಮಾಣದ ಸಂಕಲ್ಪವನ್ನು ಮೋದಿ ನೇತೃತ್ವದ ಸರ್ಕಾರ ಹೊಂದಿದೆ
ಅಮಿತ್‌ ಶಾ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.