
ಬೆಂಗಳೂರು: ‘ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ನೌಕರರು, ಸರ್ಕಾರಿ ನೌಕರರಾಗಿದ್ದರೂ ಪಿಂಚಣಿ ಪಡೆಯಲು ಅರ್ಹರಲ್ಲ’ ಎಂದು ಹೈಕೋರ್ಟ್ ತೀರ್ಪು ನೀಡಿದೆ.
‘ಅರ್ಜಿದಾರರಿಗೆ ಪಿಂಚಣಿ ಮತ್ತು ಭತ್ಯೆ ಬಿಡುಗಡೆ ಮಾಡಬೇಕು’ ಎಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕನ್ನಡ ಸಂಸ್ಕೃತಿ ಹಾಗೂ ಮಾಹಿತಿ ಇಲಾಖೆ ಸಲ್ಲಿಸಿದ್ದ ರಿಟ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಅಕಾಡೆಮಿ ಮತ್ತು ಮಂಡಳಿಯ ಸಿಬ್ಬಂದಿ ಸರ್ಕಾರಿ ಸಿಬ್ಬಂದಿ ಏನಿದ್ದರೂ ಸಂಬಂಧಿತ ನಿಯಮಗಳ ಅಡಿಯಲ್ಲಿ ಅವರ ಸೇವೆಯನ್ನು ಪಿಂಚಣಿಗೆ ಅರ್ಹಗೊಳಿಸುವ ಯಾವುದೇ ನಿಬಂಧನೆಗಳಿಲ್ಲ. ಆದಾಗ್ಯೂ, ಅರ್ಜಿದಾರರ ಉದ್ಯೋಗವನ್ನು ಪಿಂಚಣಿಗೆ ಅರ್ಹ ಎಂದು ಪರಿಗಣಿಸಬೇಕೊ ಅಥವಾ ಹೇಗೆ ಎಂಬ ನಿರ್ಧಾರ ಕೈಗೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
‘ಈ ಸಂಬಂಧ ನಾಲ್ಕು ತಿಂಗಳ ಒಳಗಾಗಿ ಮಾಧ್ಯಮ ಅಕಾಡೆಮಿ ಮತ್ತು ಮದ್ಯಪಾನ ಸಂಯಮ ಮಂಡಳಿಯ ವಾದವನ್ನು ಆಲಿಸಿದ ನಂತರ ಮಾಹಿತಿಯುಕ್ತ ಆದೇಶವನ್ನು ಹೊರಡಿಸಬಹುದು’ ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ಸರ್ಕಾರದ ವಾದ: ‘ಮಾಧ್ಯಮ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನೌಕರರು ಸರ್ಕಾರದ ಸೇವೆಯಲ್ಲಿ ಇಲ್ಲ ಹಾಗೂ ಇವರೆಲ್ಲಾ, ಕರ್ನಾಟಕ ನಾಗರಿಕ ಸೇವೆಗಳ ಅಧಿನಿಯಮ–1957ರ (ಕೆಸಿಎಸ್‌ಆರ್) ಅಡಿಯಲ್ಲಿನ ವ್ಯಾಖ್ಯಾನದ ಪ್ರಕಾರ ಸರ್ಕಾರಿ ನೌಕರರಲ್ಲ’ ಎಂದು ಸರ್ಕಾರ ವಾದ ಮಂಡಿಸಿತ್ತು.
ಈ ವಾದವನ್ನು ಆಕ್ಷೇಪಿಸಿದ್ದ ಅರ್ಜಿದಾರರು, ‘ಅಕಾಡೆಮಿ ಮತ್ತು ಮಂಡಳಿ ನೌಕರರ ನೇಮಕಾತಿಯು ಸರ್ಕಾರಿ ಸಂಸ್ಥೆಯಲ್ಲಿ ಮತ್ತು ಸರ್ಕಾರವು ಅನುಮೋದಿಸಿದ ಹುದ್ದೆಯಾಗಿರುತ್ತದೆ. ಅರ್ಜಿದಾರ ಉದ್ಯೋಗಿಗಳಿಗೆ ಕೆಸಿಎಸ್‌ಆರ್ ನಿಬಂಧನೆಗಳನ್ನು ಅನ್ವಯಿಸಿದ ನಂತರ, ಪಿಂಚಣಿಗೆ ಸಂಬಂಧಿಸಿದ ನಿಬಂಧನೆಗಳು ಅನ್ವಯಿಸುವುದಿಲ್ಲ ಎಂದು ಹೇಳುವುದು ತರವಲ್ಲ’ ಎಂದು ಆಕ್ಷೇಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.