ADVERTISEMENT

ವೈದ್ಯಕೀಯ ವಿದ್ಯಾರ್ಥಿಗಳ ಸಾಲ ₹ 5 ಲಕ್ಷಕ್ಕೆ ಏರಿಕೆ: ಜಮೀರ್‌

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 16:44 IST
Last Updated 22 ಆಗಸ್ಟ್ 2023, 16:44 IST
ಜಮೀರ್ ಅಹಮದ್ ಖಾನ್ 
ಜಮೀರ್ ಅಹಮದ್ ಖಾನ್    

ಬೆಂಗಳೂರು: ‘ವೈದ್ಯಕೀಯ ಕೋರ್ಸ್‌ ಕಲಿಯುವ ಅಲ್ಪಸಂಖ್ಯಾತ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುವ ಸಾಲವನ್ನು ₹5 ಲಕ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ’ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್‌. ಜಮೀರ್ ಅಹಮದ್ ಖಾನ್ ತಿಳಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ಕೆಎಂಡಿಸಿ) 2023-24ನೇ ಸಾಲಿನ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಸರ್ಕಾರಿ ಕೋಟಾದಡಿ ವೈದ್ಯಕೀಯ ಕೋರ್ಸ್‌ಗೆ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ನಿಗಮದ ವತಿಯಿಂದ ಸದ್ಯ ₹3 ಲಕ್ಷ ಸಾಲ ನೀಡಲಾಗುತ್ತಿದೆ’ ಎಂದರು.

‘ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಓದಲು ಬಯಸಿದರೆ ಸದ್ಯ ₹20 ಲಕ್ಷ ಸಾಲ ನೀಡಲಾಗುತ್ತಿದೆ. ಅದನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿಯ (ಎನ್ಎಂಡಿಸಿ) ನೆರವಿನೊಂದಿಗೆ ₹10 ಲಕ್ಷ ಹೆಚ್ಚಿಸಿ, ₹30 ಲಕ್ಷ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ’ ಎಂದರು.

ADVERTISEMENT

‘ಮೂರು ವರ್ಷಗಳಿಂದ ಎನ್‌ಎಂಡಿಸಿ ಯೋಜನೆಗಳು ರಾಜ್ಯಕ್ಕೆ ಸಿಗುತ್ತಿರಲಿಲ್ಲ. ಇತ್ತೀಚೆಗೆ ‌‌ಪತ್ರ ವ್ಯವಹಾರ ನಡೆಸಿದ್ದರಿಂದ ವಾರ್ಷಿಕ ₹50 ಕೋಟಿ ಅನುದಾನ ರಾಜ್ಯಕ್ಕೆ ದೊರೆಯಲಿದೆ’ ಎಂದು ತಿಳಿಸಿದರು.

‘ಎಂಟು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈ ಪೈಕಿ ‘ಅರಿವು’ ಸೇರಿ ನಾಲ್ಕು ಹಳೆ ಯೋಜನೆ, ನಾಲ್ಕು ಹೊಸ ಯೋಜನೆಗಳು. ನಿರುದ್ಯೋಗಿಗಳಿಗೆ ಕಾರು ಸೇರಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ₹3 ಲಕ್ಷ ಸಹಾಯಧನ ನೀಡುವ ಸ್ವಾವಲಂಬಿ, ತಾಂತ್ರಿಕ ಕೌಶಲ ತರಬೇತಿ ನೀಡುವ ಶ್ರಮಶಕ್ತಿ, ವಿಧವೆ, ವಿಚ್ಛೇದಿತ, ಅವಿವಾಹಿತ ಮಹಿಳೆಯರಿಗೆ ₹50 ಸಾವಿರ ಸಾಲ ನೀಡುವ ವೃತ್ತಿ ಪ್ರೋತ್ಸಾಹ ಯೋಜನೆಗೆ ಚಾಲನೆ ನೀಡಲಾಗಿದೆ’ ಎಂದು ಸಚಿವರು ವಿವರಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಾಶಿ, ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.