ADVERTISEMENT

ಆಶ್ರಯ ಮನೆ ಮಾರಾಟ: ದುರ್ಬಳಕೆ ಮಾಡಿಕೊಂಡವರಿಗೆ ನೋಟಿಸ್‌: ಅಪ್ಪಚ್ಚು ರಂಜನ್

ಸಂಸದ ಪ್ರತಾಪ ಸಿಂಹ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 14:26 IST
Last Updated 14 ಜನವರಿ 2020, 14:26 IST
ಮಡಿಕೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರತಾಪ್‌ ಸಿಂಹ ಮಾತನಾಡಿದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರತಾಪ್‌ ಸಿಂಹ ಮಾತನಾಡಿದರು   

ಮಡಿಕೇರಿ: ಆಶ್ರಯ ಯೋಜನೆ ಅಡಿಜಿಲ್ಲೆಯಲ್ಲಿ ಉಳ್ಳವರೇ ಮನೆ ಪಡೆದು ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ, ತೋಟದ ಮಾಲೀಕರು ಆಶ್ರಯ ಮನೆಗಳನ್ನು ಶೆಡ್‌ ಹಾಗೂ ದನದ ಕೊಟ್ಟಿಗೆಗೆ ಬಳಕೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರೇ ಇದರಲ್ಲಿ ಪಾಲುದಾರರು...

ಈ ವಿಚಾರವು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಸಭಾಂಗಣದಲ್ಲಿ ಮಂಗಳವಾರ ಸಂಸದ ಪ್ರತಾಪ್‌ ಸಿಂಹ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರತಿಧ್ವನಿಸಿತು.

‘ಇನ್ಮುಂದೆ ಅಂಥ ವ್ಯವಹಾರ ನಡೆಯುವಂತಿಲ್ಲ. ದುರ್ಬಳಕೆ ಮಾಡಿಕೊಳ್ಳುವವರಿಗೆ ನೋಟಿಸ್‌ ನೀಡಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಇಒ ಸುನಿಲ್‌ಗೆ ಸೂಚಿಸಿದರು.

ADVERTISEMENT

‘ಈ ರೀತಿ ದುರ್ಬಳಕೆಯಾದರೆ ನಿರಾಶ್ರಿತರಿಗೆ ಹೇಗೆ ಮನೆ ನಿರ್ಮಿಸಿಕೊಡುವುದು’ ಎಂದೂ ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಪ್ರತಿಕ್ರಿಯಿಸಿ, ‘ಒಂದೇ ಕೈಯಲ್ಲಿ ಚಪ್ಪಾಳೆ ತಟ್ಟಲು ಅಸಾಧ್ಯ. ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಅವರ ವಿರುದ್ಧವೂ ಕ್ರಮವಾಗಬೇಕು’ ಎಂದು ಹೇಳಿದರು.

ಬಳಿಕ ಪ್ರತಾಪ್‌ ಸಿಂಹ ಮಾತನಾಡಿ, ‘ಜಿಲ್ಲೆಯ ಪ್ರತಿಯೊಬ್ಬರಿಗೂ ಮನೆ ಸಿಗುವಂತೆ ಆಗಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರಪೇಟೆ ಇಒ ಸುನಿಲ್‌ ಮಾತನಾಡಿ, ಸೋಮವಾರಪೇಟೆ ತಾಲ್ಲೂಕಿನಲ್ಲಿ 5 ಸಾವಿರ ವಸತಿ ರಹಿತರು ಹಾಗೂ 6 ಸಾವಿರ ನಿವೇಶನ ರಹಿತರಿದ್ದಾರೆ. ಕೆಲವು ಕಡೆ ನಿವೇಶನವನ್ನೂ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ನಮ್ಮ ತಾಲ್ಲೂಕಿಗೆ ತರಬೇಡಿ’:ಕರಡಿಗೋಡು ಹಾಗೂ ಕೊಂಡಂಗೇರಿ ಗ್ರಾಮದ ನಿರಾಶ್ರಿತರಿಗೆ ವಿರಾಜಪೇಟೆ ತಾಲ್ಲೂಕಿನಲ್ಲಿ ಪುನರ್ವಸತಿ ಕಲ್ಪಿಸಬೇಕು. ವಿರಾಜಪೇಟೆ ತಾಲ್ಲೂಕಿನಲ್ಲೂ ಸಾಕಷ್ಟು ಜಾಗವಿದೆ. ಖಾಲಿ ಜಾಗ ಹುಡುಕಿ ಅಲ್ಲೇ ವಸತಿ ಕಲ್ಪಿಸಬೇಕು ಎಂದು ರಂಜನ್‌ ಅವರು ಜಿಲ್ಲಾಧಿಕಾರಿ ಗಮನ ಸೆಳೆದರು.

ಕಸ ವಿಲೇವಾರಿ ಘಟಕ:ಜಿಲ್ಲೆಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಬಾಕಿಯಿರುವ ಗ್ರಾಮ ಪಂಚಾಯಿತಿ ಮಾಹಿತಿ ಪಡೆದ ಪ್ರತಾಪ್‌ ಸಿಂಹ, ಸಾಕಷ್ಟು ಅನುದಾನ ಲಭ್ಯವಿದೆ. ಅದನ್ನು ಬಳಕೆ ಮಾಡಿಕೊಳ್ಳಿ. ಮಡಿಕೇರಿಯ ಸ್ಟೋನ್‌ ಹಿಲ್‌ನಲ್ಲಿ ಕಸದಿಂದ ಉಂಟಾಗಿರುವ ಸಮಸ್ಯೆ ಪರಿಹರಿಸೋಣ. ಅನುದಾನದ ಕೊರತೆಯಿಲ್ಲ ಎಂದು ಹೇಳಿದರು. ಮೈಸೂರಿನಲ್ಲಿ ಅಳವಡಿಸಿರುವ ತ್ಯಾಜ್ಯ ಸಂಸ್ಕರಣಾ ಘಟಕದ ವೀಕ್ಷಣೆಗೆ ಬರುವಂತೆ ನಗರಸಭೆ ಪೌರಾಯುಕ್ತ ರಮೇಶ್‌ ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮಾತನಾಡಿ, ‘ದೊಡ್ಡ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. 1990ರಿಂದಲೂ ಸ್ಟೋನ್‌ ಹಿಲ್‌ನಲ್ಲಿ ಕಸ ಸುರಿಯಲಾಗಿದೆ. ಸಂಸ್ಕರಿಸಿಲ್ಲ. ಒಂದು ವೇಳೆ ಬೆಟ್ಟ ಕುಸಿದರೆ ಅನಾಹುತ ಆಗಲಿದೆ’ ಎಂದು ಸಂಸದದ ಗಮನ ಸೆಳೆದರು.

ನಕಲಿ ಚಾಕೋಲೆಟ್‌ ದಂಧೆ, ಆಕ್ರೋಶ:ಕುಶಾಲನಗರವು ಸೇರಿದಂತೆ ಹಲವು ಸ್ಥಳಗಳಲ್ಲಿ ನಕಲಿ ಚಾಕೋಲೆಟ್‌ ದಂಧೆ ನಡೆಯುತ್ತಿದೆ. ಆಹಾರ ಗುಣಮಟ್ಟ ಪರಿಶೀಲನೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಈ ದಂಧೆಗೆ ಏಕೆ ಕಡಿವಾಣ ಹಾಕಿಲ್ಲ ಎಂದು ರಂಜನ್‌ ಆಕ್ರೋಶದಿಂದ ಹೇಳಿದರು.

ಕೊಡಗು ಹೆರಿಟೇಜ್ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಅಪ್ಪಚ್ಚು ರಂಜನ್ ಅವರು, ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಕಿ ಇರುವ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‌ಗೆ ಪ್ರತಾಪ್‌ ಸಿಂಹ ಸೂಚಿಸಿದರು.

ಜಿಲ್ಲೆಯಲ್ಲಿ ಸೌಭಾಗ್ಯ ಯೋಜನೆಯಡಿ 4,135 ಕುಟುಂಬಗಳನ್ನು ಗುರುತಿಸಲಾಗಿದ್ದು, ಈಗಾಗಲೇ 2 ಸಾವಿರ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್ ಮಾಹಿತಿ ನೀಡಿದರು.

ನಾಗರಹೊಳೆ ವ್ಯಾಪ್ತಿಯಲ್ಲಿ 19 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿಯಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.