ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಖರ್ಗೆ, ಸಿದ್ದರಾಮಯ್ಯ ಮನೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 22:40 IST
Last Updated 23 ಜನವರಿ 2020, 22:40 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮುಂದುವರಿದಿದ್ದು, ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಮನೆಯಲ್ಲಿ ಪ್ರತ್ಯೇಕ ಸಭೆಗಳು ನಡೆದಿವೆ.

ಖರ್ಗೆ ಮನೆಗೆ ಬಂದಿದ್ದ ಮುಖಂಡರಾದ ಎಂ.ವೀರಪ್ಪ ಮೊಯಿಲಿ, ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ ಮತ್ತಿತರ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು ಎನ್ನಲಾಗಿದೆ.

‘ನೀವು ಅಧ್ಯಕ್ಷರಾದರೆ, ನಿಮ್ಮ ನೇತೃತ್ವದಲ್ಲೇ ಅಹಿಂದ ಸಮಾವೇಶಗಳನ್ನು ಮಾಡುವ ಮೂಲಕ ಚದುರಿ ಹೋಗಿರುವ ಆ ಸಮುದಾಯಗಳ ಮತಗಳನ್ನು ಒಗ್ಗೂಡಿಸಬಹುದು. ಜತೆಗೆ ಪಕ್ಷವೂ ಉಳಿಯುತ್ತದೆ, ನಾವು ಬದುಕುತ್ತೇವೆ’ ಎಂದು ಸಲಹೆ ಮಾಡಿದ್ದಾರೆ.

ADVERTISEMENT

‘ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಮುಂದಾಗಿದ್ದಾರೆ. ನೀವು ಅಧ್ಯಕ್ಷರಾಗುವುದಾದರೆ ಹೈಕಮಾಂಡ್ ಇಲ್ಲ ಎನ್ನುವುದಿಲ್ಲ, ಒಪ್ಪಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ‘ಸಿದ್ದರಾಮಯ್ಯ ಅವರನ್ನು ಸಹಿಸಿಕೊಳ್ಳುವುದು ಕಷ್ಟಕರ. ಇನ್ನು ಡಿ.ಕೆ.ಶಿವಕುಮಾರ್ ಜತೆಗೆ ಹೊಂದಾಣಿಕೆ ಅಷ್ಟು ಸುಲಭವಲ್ಲ’ ಎಂದು ಹೇಳಿದ್ದಾರೆ.

ಈ ಎಲ್ಲಬೇಡಿಕೆಗಳನ್ನು ಖರ್ಗೆ ಅವರು ನಯವಾಗಿಯೇ ತಿರಸ್ಕರಿಸಿದ್ದಾರೆ. ‘ಹಿಂದೆ ನನಗೆ ಅವಕಾಶ ತಪ್ಪಿಸಿ ಎಸ್.ಎಂ.ಕೃಷ್ಣ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಅಲ್ಲಿಂದ ಹಿಡಿದು 2008ರ ವರೆಗೂ ಯಾವೆಲ್ಲ ಸಂದರ್ಭಗಳಲ್ಲಿ ಅಧಿಕಾರದಿಂದ ವಂಚಿತರಾಗಬೇಕಾಯಿತು’ ಎಂಬ ವಿಚಾರಗಳನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಖರ್ಗೆ ಮಾತು ಕೇಳಿದ ನಾಯಕರು ಬರಿಗೈಲಿ ವಾಪಸಾದರು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಸಭೆ:ಸಿದ್ದರಾಮಯ್ಯ ಅವರು ಮೈಸೂರು ಪ್ರವಾಸದಿಂದ ವಾಪಸಾದ ನಂತರ ಅವರ ನಿವಾಸ ಕಾವೇರಿಯಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದವು. ತಮ್ಮ ಆಪ್ತರ ಜತೆಗೆ ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಸಮಾಲೋಚನೆ ನಡೆಸಿದರು. ಕೆಲವು ಮುಖಂಡರು ಭೇಟಿಯಾಗಿ ಚರ್ಚಿಸಿದರು.

‘ವಿಧಾನಸಭೆ ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪ್ರತ್ಯೇಕಿಸಬಾರದು. ಎರಡೂ ಸ್ಥಾನಗಳನ್ನು ಸಿದ್ದರಾಮಯ್ಯ ಅವರಿಗೆ ನೀಡಬೇಕು’ ಎಂದು ಅವರನ್ನು ಭೇಟಿಯಾದ ಮುಖಂಡರು ಒತ್ತಾಯಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಮುಖಂಡರಾದ ಜಮೀರ್ ಅಹಮದ್, ಡಿ.ಎಸ್.ಹುಲಗೇರಿ, ರಾಘವೇಂದ್ರ ಹಿಟ್ನಾಳ್, ಶಿವರಾಜ ತಂಗಡಗಿ ಸೇರಿದಂತೆ ಇತರ ನಾಯಕರು ಭೇಟಿಯಾಗಿ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.