ಮೇಕೆದಾಟು ಪ್ರದೇಶದಲ್ಲಿ ಭೋರ್ಗರೆಯುತ್ತಾ ಹರಿದಿರುವ ಕಾವೇರಿ
ಪ್ರಜಾವಾಣಿ ಚಿತ್ರ : ಆರ್.ಜಿತೇಂದ್ರ
ನವದೆಹಲಿ: ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ಕೇಂದ್ರ ಜಲ ಆಯೋಗಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಮರಳಿಸಿ ಹತ್ತು ತಿಂಗಳುಗಳು ಕಳೆದಿವೆ. ಆದರೆ, ಜಲ ಆಯೋಗ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.
ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಲೋಕಸಭೆಯಲ್ಲಿ ಗುರುವಾರ ಕೇಳಿದ ಪ್ರಶ್ನೆಗೆ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.
ಯೋಜನೆಯ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಕರ್ನಾಟಕ ಸರ್ಕಾರ 2019ರ ಜನವರಿಯಲ್ಲಿ ಸಲ್ಲಿಸಿತ್ತು. ಡಿಪಿಆರ್‌ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೇ ಅನುಮೋದನೆ ನೀಡಬೇಕು ಎಂದು ಜಲ ಆಯೋಗ ಷರತ್ತು ವಿಧಿಸಿತ್ತು. ‘ಡಿಪಿಆರ್ ಕುರಿತು ಪ್ರಾಧಿಕಾರ ಚರ್ಚೆ ನಡೆಸಬಹುದು. ಆದರೆ, ಈ ಪ್ರಸ್ತಾವನೆ ಆಧಾರದಲ್ಲಿ ಅಧಿಕೃತವಾಗಿ ಯಾವುದೇ ಅಭಿಪ್ರಾಯಕ್ಕೆ ಬರುವಂತಿಲ್ಲ’ ಎಂದು ಸುಪ್ರೀಂಕೋರ್ಟ್ 2022ರ ಜುಲೈನಲ್ಲಿ ನಿರ್ದೇಶನ ನೀಡಿತ್ತು. ಹೀಗಾಗಿ, ಪ್ರಾಧಿಕಾರವು ಇದರ ಬಗ್ಗೆ ಚರ್ಚೆಯನ್ನೇ ನಡೆಸಿರಲಿಲ್ಲ. ಯೋಜನಾ ವರದಿಗೆ ಪ್ರಾಧಿಕಾರ ಒಪ್ಪಿಗೆ ನೀಡಬೇಕು ಎಂದು ಕರ್ನಾಟಕ ಸರ್ಕಾರ ಒತ್ತಡ ಹೇರಿತ್ತು.
2024ರ ಫೆಬ್ರುವರಿ 2ರಂದು ನಡೆದ ಕಾವೇರಿ ಪ್ರಾಧಿಕಾರದ 28ನೇ ಸಭೆಯಲ್ಲಿ ಡಿಪಿಆರ್ ಕುರಿತು ಚರ್ಚಿಸಲಾಗಿತ್ತು. ಯೋಜನೆಯ ವಿವಿಧ ಆರ್ಥಿಕ ಹಾಗೂ ತಾಂತ್ರಿಕ ಅಂಶಗಳ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಪ್ರಾಧಿಕಾರವು ಪ್ರಸ್ತಾವವನ್ನು ಆಯೋಗಕ್ಕೆ ವಾಪಸ್ ಕಳುಹಿಸಿತ್ತು.
ಡಿಪಿಆರ್ ಪರಾಮರ್ಶೆ ನಡೆಸಿ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರ ಜಲ ಆಯೋಗಕ್ಕೆ ರಾಜ್ಯ ಸರ್ಕಾರವು ಏಪ್ರಿಲ್ 30ರಂದು ಪತ್ರ ಬರೆದಿತ್ತು. ಆಯೋಗದ ಅಧ್ಯಕ್ಷರಿಗೆ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಜೂನ್ 19ರಂದು ಮತ್ತೊಮ್ಮೆ ಪತ್ರ ಬರೆದಿದ್ದರು. ಆ ಬಳಿಕ, ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಯೋಜನೆಗೆ ಅನುಮೋದನೆ ನೀಡುವಂತೆ ಆಗ್ರಹಿಸಿದ್ದರು.
ಮೇಕೆದಾಟು ಯೋಜನೆಗೆ ಪರಿಸರ ಅನುಮೋದನೆ ಪಡೆಯಲು ಮತ್ತೆ ಪ್ರಯತ್ನ ಆರಂಭಿಸಿದ್ದ ಕರ್ನಾಟಕ ಸರ್ಕಾರವು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಜೂನ್‌ನಲ್ಲಿ ಹೊಸ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅರಣ್ಯ ಸಚಿವಾಲಯವು ಈವರೆಗೆ ಯಾವುದೇ ಪ್ರಕ್ರಿಯೆ ನಡೆಸಿಲ್ಲ.
ಯಾವುದೇ ಯೋಜನೆಗೆ ಪರಿಸರ ಅನುಮೋದನೆ ಕೋರುವ ಸಂದರ್ಭದಲ್ಲಿ ಕಾರ್ಯಸೂಚಿಗೆ (ಟಿಒಆರ್) ಒಪ್ಪಿಗೆ ಪಡೆಯುವುದು ಅತ್ಯಗತ್ಯ ಪ್ರಕ್ರಿಯೆ. ಕಾರ್ಯಸೂಚಿಗೆ (ಟಿಒಆರ್) ಒಪ್ಪಿಗೆ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸಚಿವಾಲಯಕ್ಕೆ 2019ರ ಜೂನ್‌ನಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಸಚಿವಾಲಯವು 2022ರ ಸೆಪ್ಟೆಂಬರ್‌ನಲ್ಲಿ ಪರಿವೇಷ್ ಪೋರ್ಟಲ್‌ನಿಂದ ಪ್ರಸ್ತಾವವನ್ನು ‘ಡಿ ಲಿಸ್ಟ್’ (ತೆಗೆದುಹಾಕು) ಮಾಡಿತ್ತು.
‘ಈ ಯೋಜನೆಯು ಅಂತರ್ ರಾಜ್ಯ ಜಲ ವಿವಾದವನ್ನು ಒಳಗೊಂಡಿದೆ. ಹೀಗಾಗಿ, ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕ ಬಳಿಕ ಹಾಗೂ ಜಲಶಕ್ತಿ ಸಚಿವಾಲಯವು ಡಿಪಿಆರ್‌ಗೆ ಒಪ್ಪಿಗೆ ನೀಡಿದ ನಂತರವಷ್ಟೇ ಟಿಒಆರ್‌ಗೆ ಒಪ್ಪಿಗೆ ನೀಡಲಾಗುವುದು’ ಎಂದು ಪರಿಸರ ಸಚಿವಾಲಯ ಸ್ಪಷ್ಟಪಡಿಸಿತ್ತು.
ಈ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ 4,716 ಹೆಕ್ಟೇರ್ ಅರಣ್ಯ ಮುಳುಗಡೆಯಾಗಲಿದೆ. ಯೋಜನೆಯ ಕಾಮಗಾರಿಗೆ ಚಾಲನೆ ನೀಡುವ ಮುನ್ನ ಪರಿಸರದ ಜತೆಗೆ ಅರಣ್ಯ ಹಾಗೂ ವನ್ಯಜೀವಿ ಅನುಮೋದನೆಯನ್ನೂ ಪಡೆಯಬೇಕಿದೆ. ಪರಿಸರ ಅನುಮೋದನೆಯನ್ನಷ್ಟೇ ಪಡೆದು ಕಾಮಗಾರಿಗೆ ಚಾಲನೆ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ 2011ರಲ್ಲಿ ನಿರ್ದೇಶನ ನೀಡಿತ್ತು. ಜತೆಗೆ, ಅರಣ್ಯದ ಹೊರಭಾಗದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಳಿಕ ಪರಿಸರ ಅನುಮೋದನೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದೂ ತಾಕೀತು ಮಾಡಿತ್ತು.
67 ಟಿಎಂಸಿ ಅಡಿ ಕಾವೇರಿ ನೀರು ಸಂಗ್ರಹಿಸಲು ಸಮತೋಲನ ಜಲಾಶಯ ನಿರ್ಮಾಣ
ಕುಡಿಯುವ ನೀರು ಹಾಗೂ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ
ಬೆಂಗಳೂರು ಮಹಾನಗರ ಪ್ರದೇಶಕ್ಕೆ 24 ಟಿಎಂಸಿ ಅಡಿ ನೀರು ಪೂರೈಕೆ ಉದ್ದೇಶ
ಯೋಜನೆಗಾಗಿ 4,716 ಹೆಕ್ಟೇರ್ ಅರಣ್ಯ ಹಾಗೂ 280 ಹೆಕ್ಟೇರ್ ಕಂದಾಯ ಭೂಮಿ ಮುಳುಗಡೆ
ಯೋಜನೆಯ ಆರಂಭಿಕ ಅಂದಾಜು ವೆಚ್ಚ: ₹ 5,912 ಕೋಟಿ
ಪರಿಷ್ಕೃತ ಅಂದಾಜು ವೆಚ್ಚ: ₹ 9,000 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.