ADVERTISEMENT

ಮೇಕೆದಾಟು ಕುರಿತು ಬಿಜೆಪಿ ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2021, 9:52 IST
Last Updated 13 ಆಗಸ್ಟ್ 2021, 9:52 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮೇಕೆದಾಟು ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಳೆದಿರುವ ಗಟ್ಟಿನಿಲುವಿಗೆ ನಮ್ಮ ಬೆಂಬಲವಿದೆ. ಆದರೆ, ಈ ಯೋಜನೆ ಕುರಿತು ಬಿಜೆಪಿ ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, 'ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರದ ನಿಲುವು ಏನು ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಬೇಕು. ಬಿಜೆಪಿ ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ. ತಮಿಳುನಾಡಿನ ಬಿಜೆಪಿ ಈ ಯೋಜನೆಯನ್ನು ವಿರೋಧಿಸುತ್ತಿದೆ, ಆ ನಿಲುವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಬೆಂಬಲಿಸುತ್ತಿದ್ದಾರೆ.ಯಾಕೆ ಈ ದಂದ್ವ ನೀತಿ?' ಎಂದು ಪ್ರಶ್ನಿಸಿದ್ದಾರೆ.

'ಮೇಕೆದಾಟು ಬಗ್ಗೆ ಸಿಎಂ ತಳೆದಿರುವ ಗಟ್ಟಿನಿಲುವಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ. ಆದರೆ, ತಮ್ಮ ಸಡಿಲ ನಾಲಿಗೆಯ ಮೂಲಕ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿರುವ ಸಿ.ಟಿ.ರವಿ ಅವರಂತಹ ಕೂಗುಮಾರಿಗಳ ಬಾಯಿ ಮುಚ್ಚಿಸದೆ ಹೋದರೆ ನಾವು ನಾವೇ ಕಚ್ಚಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು' ಎಂದು ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ADVERTISEMENT

‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಕುವೆಂಪು ಕವನದ ಸಾಲುಗಳೇ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ. ಕಾಂಗ್ರೆಸ್ ಪಕ್ಷ ಇದನ್ನು ನಂಬಿದೆ. ಈ ಬಗ್ಗೆ ಬಿಜೆಪಿಗೆ ಭಿನ್ನಾಭಿಪ್ರಾಯ ಇದ್ದರೆ ಅದನ್ನು ಸ್ಪಷ್ಟಪಡಿಸಬೇಕು. ನಾವು ಕೂಡಾ ಭಾರತೀಯರು, ಇದಕ್ಕಾಗಿ ರಾಜ್ಯದ ಹಿತಾಸಕ್ತಿ ಕಡೆಗಣಿಸಲು ಸಾಧ್ಯ ಇಲ್ಲ' ಎಂದು ವಿರೋಧ ಪಕ್ಷದ ನಾಯಕ ತಿಳಿಸಿದ್ದಾರೆ.

'ನೆಲ-ಜಲ-ಭಾಷೆ ವಿಚಾರದಲ್ಲಿ ನಮ್ಮ ಪಕ್ಷ ರಾಜಕೀಯವನ್ನಾಗಲಿ, ರಾಜಿಯನ್ನಾಗಲಿ ಮಾಡುವುದಿಲ್ಲ. ಅಧಿಕಾರದಲ್ಲಿರಲಿ, ಇಲ್ಲದಿರಲಿ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿಗಳು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿ ತಮ್ಮ ಪಕ್ಷದೊಳಗಿನ ಒಡಕು ಬಾಯಿಗಳನ್ನು ಮುಚ್ಚಿಸಬೇಕು' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

'ಮೇಕೆದಾಟು ಯೋಜನೆಯ ವಿಚಾರದಲ್ಲಿ ಕಣ್ಣುಮುಚ್ಚಾಲೆ ಆಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿ ನ್ಯಾಯದ ಪರವಾದ ಗಟ್ಟಿನಿಲುವು ತೆಗೆದುಕೊಳ್ಳಬೇಕು. ಅನಗತ್ಯ ತಕರಾರು ತೆಗೆಯುತ್ತಿರುವ ತಮಿಳುನಾಡು ಸರ್ಕಾರಕ್ಕೆ ಬಿಗಿಮಾತಿನಿಂದ ಬುದ್ದಿ ಹೇಳಬೇಕು. ಮಹದಾಯಿ ಯೋಜನೆಯ ರೀತಿಯಲ್ಲಿ ಇಲ್ಲಿಯೂ ರಾಜಕೀಯ ಮಾಡಬಾರದು' ಎಂದು ಮಾಜಿ ಸಿಎಂ ಹೇಳಿದ್ದಾರೆ.

'ಕಾವೇರಿ ನ್ಯಾಯಮಂಡಳಿಯ ಐತೀರ್ಪು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಾವೇರಿ ಜಲವಿವಾದ ಇತ್ಯರ್ಥವಾಗಿದೆ. ಪ್ರಕೃತಿಯ ಕೃಪೆಯಿಂದ ಕಳೆದೆರಡು ವರ್ಷಗಳಲ್ಲಿ ತಮಿಳುನಾಡಿಗೆ ಅದರ ಪಾಲಿನ ನೀರು ಹರಿದು ಹೋಗುತ್ತಿದೆ. ಈ ಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆಯುವುದು ಸರಿ ಅಲ್ಲ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

'ಕೆ.ಆರ್.ಎಸ್ ಜಲಾಶಯದಿಂದ ಅನಿಯಂತ್ರಿತವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿರುವ ನೀರಿನಲ್ಲಿ 64 ಟಿಎಂಸಿ ನೀರನ್ನು ಬಳಸಿಕೊಂಡು ರೂಪಿಸಲಾಗಿರುವ ಮೇಕೆದಾಟು ಯೋಜನೆಯ ಮೊದಲ ಪ್ರಸ್ತಾವವವನ್ನು 2013ರಲ್ಲಿ ನಮ್ಮ ಸರ್ಕಾರ ಸಲ್ಲಿಸಿತ್ತು. 2019ರಲ್ಲಿ ನಮ್ಮದೇ ಸಂಯುಕ್ತ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ನಮ್ಮ ಪಕ್ಷ ಈ ಯೋಜನೆಗೆ ಬದ್ಧವಾಗಿದೆ' ಎಂದು ಅವರು ಟ್ವೀಟಿಸಿದ್ದಾರೆ.

'ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವ ಹಾನಿಯೂ ಇಲ್ಲ. ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಮ್‌.ಕೆ.ಸ್ಟಾಲಿನ್‌ ಒಬ್ಬ ಪ್ರಬುದ್ಧ ರಾಜಕಾರಣಿ. ಅವರು ಹಿಂದಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಂತೆ ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಬಾರದು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ಮೇಕೆದಾಟು ಮೂಲಭೂತವಾಗಿ ಬೆಂಗಳೂರು-ಮೈಸೂರು ನಗರಗಳಿಗಾಗಿ ರೂಪಿಸಿರುವ ಕುಡಿಯುವ ನೀರಿನ ಯೋಜನೆ. ಬೆಂಗಳೂರಿನಲ್ಲಿ ಕೇವಲ ಕನ್ನಡಿಗರು ಮಾತ್ರವಲ್ಲ ತಮಿಳು ಭಾಷಿಕರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಜನರಿದ್ದಾರೆ. ಇಂತಹ ಕುಡಿಯುವ ನೀರು ಪೂರೈಸುವ ಯೋಜನೆಗೆ ತಮಿಳುನಾಡು ವಿರೋಧ ಸಲ್ಲದು' ಎಂದು ಮಾಜಿ ಮುಖ್ಯಮಂತ್ರಿ ಟ್ವೀಟ್‌ ಮಾಡಿದ್ದಾರೆ.

'ತಮಿಳುನಾಡು ಸರ್ಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಎರಡು ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಅವುಗಳನ್ನು ಕರ್ನಾಟಕ ವಿರೋಧಿಸಿಲ್ಲ. ಪ್ರಾಕೃತಿಕ ಸಂಪತ್ತನ್ನು ಹಂಚಿಕೊಂಡು ಅನುಭವಿಸಬೇಕು ಎನ್ನುವುದು ನಮ್ಮ ನಿಲುವು. ತಮಿಳುನಾಡು ಹಟಹಿಡಿದು ಮೇಕೆದಾಟು ಯೋಜನೆಯನ್ನು ವಿರೋಧಿಸಿದರೆ ರಾಜಕೀಯ ಸಂಘರ್ಷ ಅನಿವಾರ್ಯವಾಗಬಹುದು' ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.