
ಮೇಕೆದಾಟು ಪ್ರದೇಶ
ನವದೆಹಲಿ: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ಪ್ರಸ್ತಾವಿತ ಮೇಕೆದಾಟು ಯೋಜನೆಯ ತಾಂತ್ರಿಕ–ಆರ್ಥಿಕ ಮೌಲ್ಯಮಾಪನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರ ಜಲ ಆಯೋಗಕ್ಕೆ ಪತ್ರ ಬರೆದಿದೆ.
ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಲಹೆಗಳನ್ನು ಪಡೆದು ಕೇಂದ್ರ ಜಲ ಆಯೋಗ ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸೂಚ್ಯವಾಗಿ ಹೇಳಿತ್ತು. ಇದೀಗ, ರಾಜ್ಯ ಸರ್ಕಾರವು ಆಯೋಗಕ್ಕೆ ಪತ್ರ ಬರೆದು ತ್ವರಿತವಾಗಿ ಈ ಪ್ರಕ್ರಿಯೆ ಮುಗಿಸುವಂತೆ ಒತ್ತಡ ಹೇರಿದೆ.
ಯೋಜನೆಯ ತಾಂತ್ರಿಕ–ಆರ್ಥಿಕ ಸಾಧ್ಯತೆಗಳ ಪರಾಮರ್ಶೆ ನಡೆಸುವಂತೆ ಆಯೋಗಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕಳೆದ ವರ್ಷ ಫೆಬ್ರುವರಿಯಲ್ಲಿ ಪ್ರಸ್ತಾವ ವಾಪಸ್ ಕಳುಹಿಸಿತ್ತು. ಜಲ ಆಯೋಗ ಪ್ರಸ್ತಾವದ ಮೌಲ್ಯಮಾಪನ ನಡೆಸಿರಲಿಲ್ಲ. ಆಯೋಗವು ಎಂಟು ಹಂತದಲ್ಲಿ ಮೌಲ್ಯಮಾಪನ ನಡೆಸಲಿದ್ದು, ಇದಕ್ಕೆ ಕನಿಷ್ಠ ಆರು ತಿಂಗಳು ಬೇಕಾಗಲಿದೆ. ಆ ಬಳಿಕವಷ್ಟೇ ಕಾವೇರಿ ಪ್ರಾಧಿಕಾರಕ್ಕೆ ಪ್ರಸ್ತಾವ ಹೋಗಲಿದೆ. ಹೀಗಾಗಿ, ಸೋಮವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಕಾರ್ಯಸೂಚಿ ಇರಲಿಲ್ಲ.
ಡಿಸೆಂಬರ್ ತಿಂಗಳಿಗೆ ಹಂಚಿಕೆಯಾಗಿರುವ 7.5 ಟಿಎಂಸಿ ಅಡಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಪ್ರಾಧಿಕಾರ ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.