ADVERTISEMENT

ಮುಟ್ಟಿನ ರಜೆ: ಸರ್ಕಾರದ ದಿಟ್ಟ ಹೆಜ್ಜೆ- ರಣದೀಪ್‌ ಸಿಂಗ್‌ ಸುರ್ಜೇವಾಲ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 14:33 IST
Last Updated 12 ಅಕ್ಟೋಬರ್ 2025, 14:33 IST
ರಣದೀಪ್‌ ಸಿಂಗ್‌ ಸುರ್ಜೇವಾಲ
ರಣದೀಪ್‌ ಸಿಂಗ್‌ ಸುರ್ಜೇವಾಲ   

ಬೆಂಗಳೂರು: ‘ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನಸಹಿತ ಮುಟ್ಟಿನ ರಜೆ ನೀಡುವ ಕರ್ನಾಟಕ ಸರ್ಕಾರದ ನಿರ್ಣಯವು ಒಂದು ದಿಟ್ಟ ಹೆಜ್ಜೆ. ಇದು ಕೇವಲ ರಜೆಯಲ್ಲ, ಮಹಿಳೆಯರ ಆರೋಗ್ಯದ ಹಕ್ಕು ಮತ್ತು ಘನತೆಯನ್ನು ಎತ್ತಿಹಿಡಿಯುವ ಕ್ರಮ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅಭಿಪ್ರಾಯಪಟ್ಟಿದ್ದಾರೆ.

‘ಈ ನಿರ್ಣಯದ ಮೂಲಕ ಮಹಿಳೆಯರ ಬಹುದಿನಗಳ ಬೇಡಿಕೆಗೆ ಕರ್ನಾಟಕ ಸರ್ಕಾರವು ಸ್ಪಂದಿಸಿದೆ. ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುವ ನೋವು ಮತ್ತು ಆರೋಗ್ಯದ ಸೂಕ್ಷ್ಮತೆಯನ್ನು ಗುರುತಿಸಿ ವೇತನ ಸಹಿತ ರಜೆ ಘೋಷಿಸಿರುವುದು, ಮಹಿಳೆಯರ ಸ್ವಾವಲಂಬನೆಗೆ ಮತ್ತು ಆರೋಗ್ಯಕ್ಕೆ ಮಾಡಿಕೊಟ್ಟ ದಾರಿ’ ಎಂದಿದ್ದಾರೆ.

‘ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ, ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಗಳ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಒಂದು ಮೈಲಿಗಲ್ಲು ಸಾಧಿಸಿದೆ. ಈ ಯೋಜನೆಗಳ ಸರಣಿ ಮುಂದುವರಿಕೆಯಿದು. ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಕ್ರಮಗಳ ಬೆನ್ನಲ್ಲೇ, ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ನಿರ್ಧಾರವು ಮಹಿಳೆಯರ ಪಾಲಿಗೆ ಮತ್ತಷ್ಟು ಸ್ವಾವಲಂಬನೆ ಶಕ್ತಿ ತುಂಬಲಿದೆ’ ಎಂದಿದ್ದಾರೆ.

ADVERTISEMENT

‘ಕರ್ನಾಟಕ ಸರ್ಕಾರದ ಈ ‘ಋತುಚಕ್ರ ರಜೆ ನೀತಿ– 2025’ ಇಡೀ ದೇಶಕ್ಕೆ ಮಾದರಿ’ ಎಂದಿರುವ ಸುರ್ಜೇವಾಲಾ, ‘ಕಾಂಗ್ರೆಸ್ ಪಕ್ಷವು ಮಹಿಳೆಯರ ಬಗ್ಗೆ ಅಪಾರ ಗೌರವವನ್ನು ಹೊಂದಿದೆ. ಜೊತೆಗೆ, ಅವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇಂತಹ ಮಾನವೀಯ ಮತ್ತು ಪ್ರಗತಿಪರ ಕ್ರಮವನ್ನು ಕೈಗೊಳ್ಳಲು ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಸಾಧ್ಯ. ಈ ನಿರ್ಧಾರದಿಂದಾಗಿ ಕರ್ನಾಟಕವು ಗ್ಯಾರಂಟಿ ಯೋಜನೆಗಳ ನಂತರ ಮತ್ತೊಮ್ಮೆ ಇಡೀ ದೇಶಕ್ಕೆ ಮತ್ತು ಇತರ ರಾಜ್ಯಗಳಿಗೆ ಮಾದರಿಯಾಗಿದೆ’ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.