ADVERTISEMENT

ಬೆಳಗಾವಿ: ರಾಜ್ಯೋತ್ಸವ ಬಹಿಷ್ಕರಿಸಿದ ಎಂಇಎಸ್‌ನಿಂದ ಕರಾಳ ದಿನಾಚರಣೆ

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹೋರಾಟ: ಚಂದಗಡ ಶಾಸಕ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 13:15 IST
Last Updated 1 ನವೆಂಬರ್ 2019, 13:15 IST
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ಆಯೋಜಿಸಿದ್ದ ಕರಾಳ ದಿನಾಚರಣೆ ಅಂಗವಾಗಿ ದ್ವಿಚಕ್ರವಾಹನಗಳ ರ್‍ಯಾಲಿ ನಡೆಯಿತು
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ಆಯೋಜಿಸಿದ್ದ ಕರಾಳ ದಿನಾಚರಣೆ ಅಂಗವಾಗಿ ದ್ವಿಚಕ್ರವಾಹನಗಳ ರ್‍ಯಾಲಿ ನಡೆಯಿತು   

ಬೆಳಗಾವಿ:ಕರ್ನಾಟಕರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರು ಇಲ್ಲಿ ಶುಕ್ರವಾರ ಕರಾಳ ದಿನಾಚರಣೆ ನಡೆಸಿದರು. ‘ಕರ್ನಾಟಕ ಸರ್ಕಾರವನ್ನು ದುಷ್ಯಾಶನನಿಗೆ ಹೋಲಿಸಿ, ದ್ರೌಪದಿಯ ಸೀರೆ (ಮರಾಠಿ ಭಾಷೆ) ಎಳೆದು ಮಾನಹರಣ ಮಾಡುವ’ ಸಂದೇಶವುಳ್ಳ ಚಿತ್ರಗಳನ್ನು ಪ್ರದರ್ಶಿಸಿದರು.

ಸಂಭಾಜಿಉದ್ಯಾನದಿಂದ ಮೆರವಣಿಗೆ ಆರಂಭಿಸಿದ ಅವರು, ಶಹಾಪುರದ ಕೆಲವು ರಸ್ತೆಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದ ಮೂಲಕ ಮರಾಠಾ ಮಂದಿರ ಮಂಗಲ ಕಾರ್ಯಾಲಯದಲ್ಲಿ ಸಮಾವೇಶಗೊಂಡರು. ಕೆಲವರು ದ್ವಿಚಕ್ರವಾಹನಗಳಲ್ಲಿ ಭಾಗವಹಿಸಿದ್ದರು. ಮುಖಂಡರು ಹಾಗೂ ಕಾರ್ಯಕರ್ತರ ಸಂಖ್ಯೆ ಹೆಚ್ಚಿರಲಿಲ್ಲ.

ಕರ್ನಾಟಕವನ್ನು ದುಷ್ಯಾಶನನಿಗೆ, ಕೇಂದ್ರ ಸರ್ಕಾರವನ್ನು ದೃತರಾಷ್ಟ್ರನಿಗೆ ಹೋಲಿಸುವ ವ್ಯಂಗ್ಯಚಿತ್ರಗಳನ್ನು ಹಿಡಿದಿದ್ದರು. ‘ಮರಾಠಿ ಭಾಷಿಕರ ಮಾನ ಹರಣ ಮಾಡಿದ ಕರ್ನಾಟಕ ಸರ್ಕಾರ, ಅನ್ಯಾಯವನ್ನು ನೋಡುತ್ತಿರುವ ಮಹಾರಾಷ್ಟ್ರ, ಗಡಿ ವಿಚಾರದಲ್ಲಿ ಕೃಷ್ಣನ ಪಾತ್ರ ಯಾರದು?’ ಎಂದು ಪ್ರಶ್ನಿಸುವ ಬ್ಯಾನರ್‌ಗಳನ್ನು ಮಕ್ಕಳು, ಯುವಕರು ಹಿಡಿದಿದ್ದರು. ರಸ್ತೆಯುದ್ದಕ್ಕೂ ಭಗವಾಧ್ವಜಗಳು, ಕಪ್ಪು ಧ್ವಜಗಳನ್ನು ಹಾರಿಸಿದರು. ಶ್ರೀರಾಮನ ಪರ ಘೋಷಣೆಗಳು ಕೇಳಿಬಂದವು. ‘ಇದು ಬೆಳಗಾವಿ ಅಲ್ಲ, ಬೆಳಗಾಂವ’ ಎಂಬ ಫಲಕವೂ ಕಂಡುಬಂತು.

ADVERTISEMENT

ವಿಧಾನಸಭೆಯಲ್ಲಿ ಚರ್ಚೆ: ಕಾರ್ಯಕ್ರಮದಲ್ಲಿ ಮಾತನಾಡಿದ ನೆರೆಯ ಮಹಾರಾಷ್ಟ್ರದ ಚಂದಗಡ ಶಾಸಕ ರಾಜೇಶ ಪಾಟೀಲ, ‘ಬೆಳಗಾವಿಯಲ್ಲೇ ಆಡಿ ಬೆಳೆದ ನಾನು ಮೊದಲ ಬಾರಿಗೆ ಶಾಸಕನಾಗಿದ್ದೇನೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿರುವ ನಿಮ್ಮ (ಮರಾಠಿ ಭಾಷಿಕರ) ನೋವು ಏನು ಎಂಬುವುದು ನನಗೂ ತಿಳಿದಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಧ್ವನಿಎತ್ತುತ್ತೇನೆ. ನಮ್ಮ ಹೋರಾಟ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಬೆಳಗಾವಿಯಿಂದಲೇ ನಾನು ಶಾಸಕನಾಗಿ ಆಯ್ಕೆಯಾಗುತ್ತೇನೆ’ ಎಂದು ಹೇಳಿದರು.

ಮೊಬೈಲ್‌ ಫೋನ್‌ನಲ್ಲಿ ಮಾತನಾಡಿದ ಮಹಾರಾಷ್ಟ್ರ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಏಕನಾಥ ಶಿಂಧೆ, ‘ಬೆಳಗಾವಿ ಮರಾಠಿಗರ ಹೋರಾಟಕ್ಕೆ ಶಿವಸೇನೆಯ ಬೆಂಬಲವಿದೆ. ಹೋರಾಟ ತೀವ್ರಗೊಳಿಸಲಾಗುವುದು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವುದು ಖಚಿತ’ ಎಂದರು.

ಮುಖಂಡರಾದ ಮನೋಹರ ಕಿಣೇಕರ, ದೀಪಕ ದಳವಿ, ಪ್ರಕಾಶ ಮರಗಾಳೆ, ಮಾಲೋಜಿರಾವ ಅಷ್ಟೇಕರ, ಸರಸ್ವತಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.