ಬೆಂಗಳೂರು: ನೋಂದಣಿರಹಿತ ಮತ್ತು ಪರವಾನಗಿರಹಿತ ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ನೀಡಿರುವ ಸಾಲದ ಅಸಲು ಹಾಗೂ ಬಡ್ಡಿಯ ಮೊತ್ತವನ್ನು ಸಾಲಗಾರರು ಮರುಪಾವತಿ ಮಾಡಬೇಕಿಲ್ಲ ಎಂಬ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಅಂಶವನ್ನು ಮೈಕ್ರೊ ಫೈನಾನ್ಸ್ ಕಂಪನಿಗಳ ನಿಯಂತ್ರಣಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ ಕರಡಿನಲ್ಲಿ ಸೇರಿಸಲಾಗಿದೆ.
ಮೈಕ್ರೊ ಫೈನಾನ್ಸ್ ಕಂಪನಿಗಳು ಮತ್ತು ಲೇವಾದೇವಿದಾರರು ನೀಡುತ್ತಿರುವ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸುವ ಉದ್ದೇಶದಿಂದ ‘ಕರ್ನಾಟಕ ಮೈಕ್ರೊ ಫೈನಾನ್ಸ್ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025’ ಅನ್ನು ಹೊರಡಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಸುಗ್ರೀವಾಜ್ಞೆಯ ಕರಡನ್ನು ಭಾನುವಾರ ಅಂತಿಮಗೊಳಿಸಲಾಗಿದೆ.
ನೋಂದಣಿರಹಿತ ಮತ್ತು ಪರವಾನಗಿರಹಿತ ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ನೀಡಿರುವ ಸಾಲ ಹಾಗೂ ಬಡ್ಡಿ ವಸೂಲಿಗೆ ಸಂಬಂಧಿಸಿದಂತೆ ಸಾಲಗಾರರ ಮೇಲೆ ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿರುವುದಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಮತ್ತು ವಿಚಾರಣಾ ಹಂತದಲ್ಲಿ ಇರುವ ಎಲ್ಲ ಪ್ರಕರಣಗಳೂ ಸುಗ್ರೀವಾಜ್ಞೆ ಜಾರಿಯಾದ ಕ್ಷಣದಿಂದ ರದ್ದುಗೊಳ್ಳಲಿವೆ ಎಂಬ ಅಂಶವೂ ಕರಡಿನಲ್ಲಿದೆ.
ಸುಗ್ರೀವಾಜ್ಞೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ ಬಳಿಕ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಅಂಕಿತಕ್ಕೆ ಕಳುಹಿಸಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಸಾಲಗಾರರಿಗೆ ಹಿಂಸೆ, ಕಿರುಕುಳ ನೀಡುವ ಮೈಕ್ರೊ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರರಿಗೆ ಆರು ತಿಂಗಳಿಗಿಂತ ಕಡಿಮೆ ಇಲ್ಲದ, ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹5 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ನೋಂದಣಿ ಪ್ರಾಧಿಕಾರವು ಅಂತಹ ಸಂಸ್ಥೆಗಳ ನೋಂದಣಿಯನ್ನು ಅಮಾನತು ಅಥವಾ ರದ್ದುಪಡಿಸುವ ಕಠಿಣ ನಿಯಮ ಕೂಡಾ ಈ ಸುಗ್ರೀವಾಜ್ಞೆಯಲ್ಲಿದೆ.
‘ಸಾಲಗಾರರ ಮೇಲೆ ದೌರ್ಜನ್ಯ ಎಸಗುವ ಮೈಕ್ರೊ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರಿಗೆ ಮೂರು ವರ್ಷದವರೆಗೆ ಜೈಲು ಮತ್ತು ₹1 ಲಕ್ಷವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆ ಹೊರಡಿಸುವ ಕುರಿತು ಗುರುವಾರ (ಜನವರಿ 30) ಬೆಳಿಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಆದರೆ, ಚರ್ಚೆಯ ಸಂದರ್ಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಪ್ರಸ್ತಾಪಗೊಂಡ ಕಾರಣ ಮತ್ತು ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕೆಂಬ ಕಾರಣಕ್ಕೆ ಕಾನೂನು ಸಚಿವ ಎಚ್.ಕೆ. ಪಾಟೀಲ, ಗೃಹ ಸಚಿವ ಜಿ. ಪರಮೇಶ್ವರ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಜೊತೆ ಮುಖ್ಯಮಂತ್ರಿ ಅದೇ ದಿನ ಸಂಜೆ ಸಭೆ ನಡೆಸಿದ್ದರು. ಶನಿವಾರ (ಫೆಬ್ರುವರಿ 1) ಮತ್ತೊಂದು ಸುತ್ತಿನ ಸಭೆ ನಡೆಸಿದ ಎಚ್.ಕೆ. ಪಾಟೀಲ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸುಗ್ರೀವಾಜ್ಞೆಯಲ್ಲಿ ಇರಬೇಕಾದ ಕಾನೂನು ಅಂಶಗಳನ್ನು ಅಂತಿಮಗೊಳಿಸಿದರು’ ಎಂದು ಮೂಲಗಳು ಹೇಳಿವೆ.
ನೋಂದಾಯಿತ ಕಚೇರಿ ಹೊಂದಿರಬೇಕು:
ಪ್ರತಿಯೊಂದು ಮೈಕ್ರೊ ಫೈನಾನ್ಸ್ ಕಂಪನಿ ಅಥವಾ ಲೇವಾದೇವಿದಾರ ಏಜೆನ್ಸಿ ಸ್ಥಳೀಯವಾಗಿ ನೋಂದಾಯಿತ ಕಚೇರಿ ಹೊಂದಿರಬೇಕು. ಸಾಲಗಾರರಿಗೆ ವಿಧಿಸುವ ಬಡ್ಡಿ ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಾಲಗಾರರಿಗೆ ನೀಡುವ ಸಾಲದ ಕಾರ್ಡ್‌ನಲ್ಲಿ ವಿಧಿಸಿದ ಬಡ್ಡಿ, ಸಾಲಕ್ಕೆ ಸಂಬಂಧಿಸಿದ ಎಲ್ಲ ಷರತ್ತುಗಳು ಮತ್ತು ನಿಬಂಧನೆಗಳು, ಸಾಲ ಮರು ಪಾವತಿ ವಿವರಗಳನ್ನು ಸಾಲಗಾರನಿಗೆ ಅರ್ಥವಾಗುವ ಭಾಷೆಯಲ್ಲಿ ನೀಡಬೇಕು. ಸಾಲಗಾರರ ಜೊತೆ ಕನ್ನಡದಲ್ಲಿಯೇ ಸಂವಹನ ಮಾಡಬೇಕು ಎಂದು ಸುಗ್ರೀವಾಜ್ಞೆಯ ಕರಡಿನಲ್ಲಿ ವಿವರಿಸಲಾಗಿದೆ.
ವರದಿ ಸಲ್ಲಿಸದಿದ್ದರೆ ಶಿಕ್ಷೆ:
ಸಾಲಗಾರರು ಸಾಲ ಮರುಪಾವತಿಸುವಾಗ ರಸೀದಿ ನೀಡಬೇಕು. ಅಲ್ಲದೆ, ಎಲ್ಲ ಮೈಕ್ರೊ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರ ಏಜೆನ್ಸಿಗಳು ತಮ್ಮ ವಹಿವಾಟಿಗೆ ಸಂಬಂಧಿಸಿದ ಎಲ್ಲ ವಿವರಗಳ ಸಹಿತ ತ್ರೈ ಮಾಸಿಕ ಮತ್ತು ವಾರ್ಷಿಕ ವರದಿಯನ್ನು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ವರದಿ ಸಲ್ಲಿಸಲು ವಿಫಲವಾಗುವ ಸಂಸ್ಥೆಗಳಿಗೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ₹10 ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಈ ಎರಡನ್ನೂ ವಿಧಿಸಲು ಕೂಡಾ ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಸಂಸ್ಥೆಗಳು ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ಒಳಗೆ ಆಯಾ ನೋಂದಣಿ ಪ್ರಾಧಿಕಾರದಲ್ಲಿ (ಜಿಲ್ಲಾಧಿಕಾರಿ) ನೋಂದಣಿ ಮಾಡಿಕೊಳ್ಳಬೇಕು
ಸಾಲಗಾರರ ಸಂಪೂರ್ಣ ಮಾಹಿತಿ, ಸಾಲದ ಮೊತ್ತ, ಬಡ್ಡಿ ದರ, ವಸೂಲಿಗೆ ಬಾಕಿ, ಸಾಲ ಪಡೆಯುವಾಗ ಸಂಗ್ರಹಿಸಿದ ಲಿಖಿತ ಮುಚ್ಚಳಿಕೆ ನೀಡಬೇಕು
ಸುಗ್ರೀವಾಜ್ಞೆ ಜಾರಿಯಾದ ಬಳಿಕ ಮೈಕ್ರೊ ಫೈನಾನ್ಸ್ ಕಂಪನಿ, ಲೇವಾ ದೇವಿದಾರರು ನೋಂದಣಿ ಮಾಡದೆ ಸಾಲ ವಹಿವಾಟು ಮಾಡುವಂತಿಲ್ಲ
ನೋಂದಣಿ ಅವಧಿ ಒಂದು ವರ್ಷ ಮಾತ್ರ. ಅವಧಿ ಮುಗಿಯುವ 60 ದಿನಗಳ ಮೊದಲು ಮರು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲಿಸಿದ ಬಳಿಕ ಪ್ರಾಧಿಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ
ದೂರು ಬಂದರೆ ಅಥವಾ ಸ್ವಯಂಪ್ರೇರಿತವಾಗಿ ನೋಂದಣಿ ರದ್ದು ಮಾಡುವ ಅಧಿಕಾರವು ಪ್ರಾಧಿಕಾರಕ್ಕೆ ಇರಲಿದೆ
ಸುಗ್ರೀವಾಜ್ಞೆಯಲ್ಲಿರುವ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ, ಪ್ರಾಧಿಕಾರವು ನೋಟಿಸ್ ನೀಡದೆ ನೋಂದಣಿಯನ್ನು ಅಮಾನತು ಅಥವಾ ರದ್ದು ಮಾಡಬಹುದು
ಸಾಲ ನೀಡುವ ಮತ್ತು ವಸೂಲು ಮಾಡುವ ನಿಯಮಗಳನ್ನು ಅಧಿಸೂಚನೆ ಮೂಲಕ ಸರ್ಕಾರ ರೂಪಿಸಬಹುದು
ಸಾಲಗಾರರಿಂದ ಭದ್ರತೆಯಾಗಿ ಯಾವುದೇ ವಸ್ತು ಅಥವಾ ಆಸ್ತಿ ಅಡಮಾನ ಇಟ್ಟುಕೊಳ್ಳಬಾರದು. ಅಡಮಾನ ಇಟ್ಟು ಕೊಂಡಿದ್ದರೆ ಅದನ್ನು ಸಾಲಗಾರರಿಗೆ ಹಿಂದಿರುಗಿಸಬೇಕು
ಸಾಲದಾತರು ಕಿರುಕುಳ ನೀಡಿದರೆ ಸಾಲಗಾರರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬಹುದು. ಪೊಲೀಸ್ ಅಧಿಕಾರಿಯು ಪ್ರಕರಣ ದಾಖಲಿಸಲು ನಿರಾಕರಿಸ ಬಾರದು. ಅಲ್ಲದೆ, ಡಿವೈಎಸ್‌ಪಿ ಶ್ರೇಣಿಗಿಂತ ಮೇಲಿನ ಪೊಲೀಸ್ ಅಧಿಕಾರಿಗಳಿಗೆ ಸ್ವಯಂಪ್ರೇರಿತ
ವಾಗಿ ದೂರು ದಾಖಲಿಸಿಕೊಳ್ಳಲು ಕೂಡಾ ಅವಕಾಶ ನೀಡಲಾಗಿದೆ.
ಒಂಬುಡ್ಸುಮನ್ ನೇಮಕ: ಸಾಲದಾತ ಮತ್ತು ಸಾಲಗಾರನ ನಡುವಿನ ವಿವಾದಗಳನ್ನು ಇತ್ಯರ್ಥಪಡಿಸಲು ಮಧ್ಯವರ್ತಿ ಯಾಗಿ ರಾಜ್ಯ ಸರ್ಕಾರವು ಒಂಬುಡ್ಸುಮನ್ ನೇಮಕ ಮಾಡಲು ಕೂಡಾ ಅವಕಾಶವಿದೆ.
ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರುವುದು, ಅವಮಾನಿಸುವುದು, ಅಡ್ಡಿಪಡಿಸುವುದು, ಹಿಂಸಿಸುವುದು
ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು, ಅವರ ಸ್ವಾಧೀನ ದಲ್ಲಿರುವ ಸ್ವತ್ತುಗಳ ಬಳಕೆಗೆ ಅಡ್ಡಿಪಡಿಸುವುದು
ಸಾಲಗಾರರು ಅಥವಾ ಅವರ ಕುಟುಂಬದವರು ವಾಸಿಸುವ, ಕೆಲಸ ಮಾಡುವ ಸ್ಥಳಕ್ಕೆ ನಿರಂತರವಾಗಿ ಭೇಟಿ ನೀಡಿ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು
ಬಲವಂತದಿಂದ ಸಾಲ ವಸೂಲಿ ಮಾಡಲು ಹೊರಗುತ್ತಿಗೆ ಸಿಬ್ಬಂದಿ ಬಳಕೆ, ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಬಳಸಿಕೊಳ್ಳುವುದು
ಸಾಲಗಾರನು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಸಾಲದಾತ ಅಥವಾ ಅವರ ಸಿಬ್ಬಂದಿ ಕಿತ್ತುಕೊಳ್ಳುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.