ADVERTISEMENT

ಆಳ ಅಗಲ | ರಟ್ಟೆ ಸೋತ ರಾಜಧಾನಿ

ಎಲ್ಲಿಂದಲೋ ಬಂದವರನ್ನು ಇನ್ನು ಬರಸೆಳೆಯುವುದೇ ಬೆಂಗಳೂರು?

ಪ್ರವೀಣ ಕುಮಾರ್ ಪಿ.ವಿ.
Published 28 ಮೇ 2020, 2:04 IST
Last Updated 28 ಮೇ 2020, 2:04 IST
ಬೆಂಗಳೂರಿನ ಮೆಟ್ರೊ ಕಾಮಗಾರಿಗೆ ವಲಸೆ ಕಾರ್ಮಿಕರೇ ಆಧಾರವಾಗಿದ್ದರು. ಅಲ್ಲಿ ದುಡಿಯುತ್ತಿದ್ದ ಸಾವಿರಾರು ಮಂದಿ ಈಗ ತವರಿಗೆ ಮರಳಿದ್ದು, ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ - ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಬೆಂಗಳೂರಿನ ಮೆಟ್ರೊ ಕಾಮಗಾರಿಗೆ ವಲಸೆ ಕಾರ್ಮಿಕರೇ ಆಧಾರವಾಗಿದ್ದರು. ಅಲ್ಲಿ ದುಡಿಯುತ್ತಿದ್ದ ಸಾವಿರಾರು ಮಂದಿ ಈಗ ತವರಿಗೆ ಮರಳಿದ್ದು, ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ - ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ದೇಶದಲ್ಲಿ ಕ್ಷಿಪ್ರವೇಗದಲ್ಲಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಮುಂಚೂಣಿಯಲ್ಲಿದ್ದುದೇ ಬೆಂಗಳೂರು. ಕೈಗಾರಿಕೆ ಇರಲಿ, ನಿರ್ಮಾಣ ಚಟುವಟಿಕೆಗಳಿರಲಿ, ಆತಿಥ್ಯ ಉದ್ದಿಮೆಗಳಿರಲಿ, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರವೇ ಇರಲಿ... ಕಳೆದೆರಡು ದಶಕಗಳಲ್ಲಿ ಇಂತಹ ಹತ್ತು ಹಲವು ರಂಗಗಳಲ್ಲಿ ಈ ನಗರ ಬೆಳೆದ ಪರಿ ಬೆರಗು ಮೂಡಿಸುವಂತಹದ್ದು.

ಬೆಂಗಳೂರಿನಲ್ಲಿ 2000ನೇ ಇಸವಿಯಲ್ಲಿ55.87 ಲಕ್ಷದಷ್ಟಿದ್ದ ಜನಸಂಖ್ಯೆ 2020ರಲ್ಲಿ 1.37 ಕೋಟಿ ತಲುಪಿರುವುದೇ ಈ ಬೆಳವಣಿಗೆಯ ವೇಗದ ಚಿತ್ರಣವನ್ನು ಕಟ್ಟಿಕೊಡುತ್ತದೆ. ದೇಶದ ರಾಜಧಾನಿ ನವದೆಹಲಿ ಶೇ 3.03ರ ದರದಲ್ಲಿ ಬೆಳೆಯುತ್ತಿದ್ದರೆ, ನಮ್ಮ ರಾಜ್ಯದ ರಾಜಧಾನಿಯ ಬೆಳವಣಿಗೆ ದರ ಶೇ 3.98ರಷ್ಟಿದೆ.ಈ ಅಗಾಧ ಬೆಳವಣಿಗೆಯ ಹಿಂದಿರುವ ಚಾಲಕ ಶಕ್ತಿ ಕಾರ್ಮಿಕರು. ಹೊಟ್ಟೆಪಾಡಿಗಾಗಿ ಎಲ್ಲಿಂದಲೋ ಇಲ್ಲಿಗೆ ಬಂದವರೇ ತಮ್ಮ ರಟ್ಟೆ ಬಲವನ್ನು ಬಳಸಿ ನೋಡ ನೋಡುತ್ತಿದ್ದಂತೆಯೇ ಬೆಂಗಳೂರನ್ನು ವಿಶ್ವಭೂಪಟದಲ್ಲಿ ಗುರುತಿಸಿಕೊಳ್ಳುವ ನಗರವನ್ನಾಗಿ ಕಟ್ಟಿ ಬೆಳೆಸಿದರು.

ಆದರೆ, ಕೊರೊನಾ ಸೋಂಕು ಇಡೀ ಚಿತ್ರಣವನ್ನೇ ಬದಲಿಸಿದೆ. ಯಾವ ಊರು ತಮಗೆ ಬದುಕು ಕಲ್ಪಿಸುತ್ತದೆ ಎಂಬ ಭರವಸೆ ಇಟ್ಟು ಜನ ಇಲ್ಲಿಗೆ ಬಂದಿದ್ದರೋ, ಅವರೆಲ್ಲ ‘ಬದುಕುಳಿದರೆ ಬೇಡಿಯಾದರೂ ತಿಂದೇವು’ ಎಂಬ ಧಾವಂತದಲ್ಲಿ ಹುಟ್ಟೂರು ಸೇರುತ್ತಿದ್ದಾರೆ. ಎರಡು ವಾರಗಳಲ್ಲಿ ರೈಲುಗಳಲ್ಲಿ ತವರು ಸೇರಿದ ಹೊರರಾಜ್ಯಗಳ ವಲಸೆ ಕಾರ್ಮಿಕರ ಸಂಖ್ಯೆಯೇ 2.5 ಲಕ್ಷ ದಾಟಿದೆ. ಇನ್ನು ಗಂಟು ಮೂಟೆ ಕಟ್ಟಿಕೊಂಡು ಸಿಕ್ಕ ಸಿಕ್ಕ ಹಾದಿಯಲ್ಲಿ ಸಾವಿರಾರು ಮೈಲಿ ದೂರದ ಊರಿಗೆ ಬಿರಬಿರನೇ ಹೆಜ್ಜೆ ಹಾಕಿ ಹೊರಟವರ ಸಂಖ್ಯೆ ಇಟ್ಟವರಿಲ್ಲ. ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ 8 ಲಕ್ಷಕ್ಕೂ ಅಧಿಕ ಕಾರ್ಮಿಕರು ಸರ್ಕಾರಿ ಬಸ್‌ಗಳ ಮೂಲಕ ತವರು ಸೇರಿದ್ದಾರೆ. ಇನ್ನು ಬಾಡಿಗೆ ವಾಹನಗಳಲ್ಲಿ ಹಾಗೂ ಸಿಕ್ಕ ಸಿಕ್ಕ ಲಾರಿ, ಟೆಂಪೊ ಹತ್ತಿ ಊರು ಸೇರಿದವರಂತೂ ಎಣಿಕೆಗೆ ಸಿಗಲೊಲ್ಲರು. ಒಂದು ತಿಂಗಳಲ್ಲಿ ಏನಿಲ್ಲವೆಂದರೂ20 ಲಕ್ಷಕ್ಕೂ ಅಧಿಕ ಕಾರ್ಮಿಕರು ನಗರಕ್ಕೆ ‘ದೊಡ್ಡ ನಮಸ್ಕಾರ’ ಹಾಕಿ ಹೊರಟು ಹೋಗಿದ್ದಾರೆ.

ADVERTISEMENT

ನಗರದ ರಟ್ಟೆ ಬಲದಂತಿದ್ದ ಕಾರ್ಮಿಕರ ಈ ಮಹಾವಲಸೆ ಅತಿವೇಗದಲ್ಲಿ ಬೆಳೆಯುತ್ತಿದ್ದ ಬೆಂಗಳೂರಿನ ಭವಿಷ್ಯದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಗರದ ಏಳಿಗೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ರಿಯಲ್‌ ಎಸ್ಟೇಟ್‌ ಚಟುವಟಿಕೆ ನಿಂತಿರುವುದು ಕಾರ್ಮಿಕರ ಶ್ರಮದ ಮೇಲೆ.ಕಟ್ಟಡ ನಿರ್ಮಾಣ ಚಟುವಟಿಕೆಗೆ ಸರ್ಕಾರ ಅವಕಾಶ ನೀಡಿದರೂ ಈ ಕ್ಷೇತ್ರ ಮತ್ತೆ ಎದ್ದುನಿಲ್ಲುವ ಯಾವ ಲಕ್ಷಣವೂ ಸದ್ಯಕ್ಕೆ ಕಾಣಿಸುತ್ತಿಲ್ಲ.

‘ಕಟ್ಟಡ ನಿರ್ಮಾಣಕ್ಕೆ ಬೇರೆ ಬೇರೆ ಕೌಶಲ ಹೊಂದಿರುವ ಕಾರ್ಮಿಕರ ಅಗತ್ಯವಿದೆ. ನಗರದಲ್ಲಿದ್ದ ವಲಸೆ ಕಾರ್ಮಿಕರಲ್ಲಿ ಶೇ 20ರಿಂದ 25ರಷ್ಟು ಮಂದಿ ಕಟ್ಟಡ ಕಾರ್ಮಿಕರು. ಅವರಲ್ಲಿ ಬಹುತೇಕರು ನಗರವನ್ನು ತೊರೆದಿದ್ದಾರೆ. ಅವರಿಲ್ಲದೇ ಕಟ್ಟಡಗಳು ಮೇಲೇರಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ ಕ್ರೆಡಾಯ್‌ ಬೆಂಗಳೂರು ಘಟಕದ ಅಧ್ಯಕ್ಷ ಸುರೇಶ್‌ ಹರಿ.

ಊರು ಸೇರಿರುವ ಲಕ್ಷಾಂತರ ಕೆಲಸಗಾರರು ಬೆಂಗಳೂರಿಗೆ ಮತ್ತೆ ಮರಳುವತ್ತ ಕನಸಿನಲ್ಲೂ ಚಿತ್ತ ಹರಿಸಲಿಕ್ಕಿಲ್ಲ. ದಾರಿಯುದ್ದಕ್ಕೂ ಎದುರಿಸಿದ ಬವಣೆಗಳು ಅವರನ್ನು ದುಃಸ್ವಪ್ನದಂತೆ ಕಾಡುತ್ತಿವೆ. ಸರ್ಕಾರ ಏನೇ ಉತ್ತೇಜನ ಕ್ರಮಗಳನ್ನು ಪ್ರಕಟಿಸಿದರೂ ರಿಯಲ್‌ ಎಸ್ಟೇಟ್‌ ಉದ್ದಿಮೆ ಗತವೈಭವಕ್ಕೆ ಮರಳಲು ವರ್ಷಗಟ್ಟಲೆ ಕಾಯಬೇಕಾದೀತು ಎಂಬುದು ಈ ಕ್ಷೇತ್ರವನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ.

ಎಷ್ಟೇ ಯಾಂತ್ರೀಕರಣಗೊಂಡರೂ ಮೂಲಸೌಕರ್ಯ ಅಭಿವೃದ್ಧಿಗೆ ಈಗಲೂ ಕಾರ್ಮಿಕರ ಬೆವರೇ ಇಂಧನ. ಬೆಂಗಳೂರು ನಗರವೊಂದರಲ್ಲೇ ರಸ್ತೆ, ಮೇಲ್ಸೇತುವೆ, ವಸತಿ, ಕೆರೆ ಅಭಿವೃದ್ಧಿ, ರಾಜಕಾಲುವೆ ದುರಸ್ತಿ ಮುಂತಾದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ಲಾಕ್‌ಡೌನ್ ಜಾರಿಯಾದ‌ ಬಳಿಕ ಸ್ಥಗಿತಗೊಂಡಿದ್ದವು. ಬಿಬಿಎಂಪಿ, ಬಿಡಿಎ, ಕೆಆರ್‌ಡಿಸಿಎಲ್‌, ನಮ್ಮ ಮೆಟ್ರೊ, ಲೋಕೋಪಯೋಗಿ ಇಲಾಖೆ, ರೈಲ್ವೆ, ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಮೊತ್ತವೇ₹1 ಲಕ್ಷ ಕೋಟಿಗೂ ಅಧಿಕ. ‘ನಮ್ಮ ಮೆಟ್ರೊ’ ಎರಡನೇ ಹಂತದ ಕಾಮಗಾರಿ ವೆಚ್ಚವೇ ₹30 ಸಾವಿರ ಕೋಟಿ ದಾಟುತ್ತದೆ. ಕಾರ್ಮಿಕರ ವಲಸೆಯ ಕರಿನೆರಳು ಈ ಕಾಮಗಾರಿಗಳ ಮೇಲೂ ಬಿದ್ದಿದೆ.

ನಮ್ಮ ಮೆಟ್ರೊ ಕಾಮಗಾರಿಗಾಗಿ ಹೊರರಾಜ್ಯಗಳಿಂದ ಬಂದ 9,400 ವಲಸೆ ಕಾರ್ಮಿಕರು ದುಡಿಯುತ್ತಿದ್ದರು.ಅವರಲ್ಲಿ ಈಗಾಗಲೇ 2,400 ಮಂದಿ ನಗರವನ್ನು ತೊರೆದಿದ್ದರೆ, 700ಕ್ಕೂ ಹೆಚ್ಚು ಮಂದಿ ರೈಲು ಟಿಕೆಟ್‌ ಕಾಯ್ದಿರಿಸಿದ್ದಾರೆ. ಮಿಕ್ಕವರೂ ಇಲ್ಲೇ ಉಳಿಯುತ್ತಾರೆ ಎಂಬ ನಂಬಿಕೆ ಇಲ್ಲ. ಮೊದಲೇ ಆಮೆಗತಿಯಲ್ಲಿ ನಡೆಯುತ್ತಿದ್ದ ಮೆಟ್ರೊ ಕಾಮಗಾರಿ ಶೇ 30ರಷ್ಟು ಕಾರ್ಮಿಕರಿಲ್ಲದ ಮೇಲೆ ಹಳಿ ತಪ್ಪದಿರಲು ಸಾಧ್ಯವೇ?

ಹೆಚ್ಚು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರಿದ್ದುದುಆತಿಥ್ಯ ಉದ್ಯಮಗಳಲ್ಲಿ. ಬೆಂಗಳೂರಿ ನಲ್ಲಿ ನಗರದಲ್ಲಿ ಸುಮಾರು 25 ಸಾವಿರ ಹೋಟೆಲ್‌ಗಳಿವೆ. ಇವುಗಳು 8 ಲಕ್ಷಕ್ಕೂ ಅಧಿಕ ಕಾರ್ಮಿಕರ ಜೀವನೋಪಾಯಕ್ಕೆ ದಾರಿ ತೋರಿಸಿದ್ದವು. ಇವುಗಳಲ್ಲಿ ಸ್ವಾಗತಕಾರರಿಂದ ಹಿಡಿದು ಪರಿಣಿತ ಬಾಣಸಿಗರವರೆಗೂ ಕೆಲಸಕ್ಕಿದ್ದುದು ಇಲ್ಲಿನವರಲ್ಲ.ಶೇ 70ಕ್ಕೂ ಅಧಿಕ ಕೆಲಸಗಾರರು ವಲಸಿಗರೇ ಆಗಿದ್ದರು. ಲಾಕ್‌ಡೌನ್‌ನಿಂದಾಗಿ ಮುಚ್ಚಿದ್ದ ಹೋಟೆಲ್‌ಗಳು ಇನ್ನೂ ಪೂರ್ಣಪ್ರಮಾಣದಲ್ಲಿತೆರೆದಿಲ್ಲ. ಕೆಲವು ಪಾರ್ಸೆಲ್‌ ಸೇವೆಯನ್ನು ಮಾತ್ರ ಒದಗಿಸುತ್ತಿವೆ. ಈ ನಡುವೆ ಇವುಗಳ ಶೇ 75ರಷ್ಟು ಕಾರ್ಮಿಕರು ಊರು ಸೇರಿದ್ದಾರೆ. ಮೊದಲೇ ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದ ಹೋಟೆಲ್‌ ಉದ್ದಿಮೆ ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಹೋಟೆಲ್‌ಗಳ ಪುನರಾರಂಭಕ್ಕೆ ಸರ್ಕಾರ ಅವಕಾಶ ಕಲ್ಪಿಸಿದರೂ ಈ ಉದ್ಯಮ ಮೊದಲಿನ ಸ್ಥಿತಿಗೆ ಬರುವುದಕ್ಕೆ ಅನೇಕ ತಿಂಗಳುಗಳೇ ಬೇಕಾಗಬಹುದು. ಹೋಟೆಲ್‌ಗಳ ವಹಿವಾಟು ನೆಲಕಚ್ಚಿರುವುದರಿಂದ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಸಾರಿಗೆ, ಮನೋರಂಜನಾ ಉದ್ಯಮ ಮತ್ತು ಇತರ ಸೇವಾ ವಲಯದ ಉದ್ದಿಮೆಗಳ ಮೇಲೂ ದುಷ್ಪರಿಣಾಮ ಉಂಟಾಗಿದೆ.

ನಗರದಲ್ಲಿ 4 ಲಕ್ಷಕ್ಕೂ ಅಧಿಕ ಕೈಗಾರಿಕೆಗಳು 45 ಲಕ್ಷದಷ್ಟು ಮಂದಿಗೆ ಉದ್ಯೋಗ ಕಲ್ಪಿಸಿದ್ದವು. ಇವರಲ್ಲೂ ಶೇ 20ರಷ್ಟು ಮಂದಿ ವಲಸಿಗರು. ಹೊರಗುತ್ತಿಗೆ ಅಥವಾ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಮರಳುವ ಸಾಧ್ಯತೆ ಕಡಿಮೆ. ಕುಶಲ ಕಾರ್ಮಿಕರು ಊರಿಗೆ ಮರಳಿದ್ದರಿಂದ ಕೈಗಾರಿಕೆಗಳ ಉತ್ಪಾದನೆ ಕುಸಿತ ನಿಚ್ಚಳ.

‘ಕೈಗಾರಿಕೆಗಳಲ್ಲಿ ಬಹುತೇಕರು ಕಾಯಂ ನೌಕರರು. ಅವರು ಕೆಲಸಕ್ಕೆ ಮರಳುವ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ.

ಬಂದವರನ್ನೆಲ್ಲೆಲ್ಲ ಬರಸೆಳೆದು ಬೆಳೆಯುತ್ತಿದ್ದ ಬೆಂಗಳೂರಿನಂತಹ ಬೆಂಗಳೂರು ಕೂಡಾ ಕಣ್ಣಿಗೆ ಕಾಣದ ಕೊರೊನಾ ನೀಡಿದ ಏಟಿಗೆ ಹೊರಳು ಹಾದಿ ಹಿಡಿಯಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಈ ಹೊರಳು ಹಾದಿ ಎಂತಹದ್ದಾಗಿರಬಹುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.