ADVERTISEMENT

ಮಳೆ ಹೆಚ್ಚಾದರೆ ರಕ್ಷಣಾ ಕಾರ್ಯಕ್ಕೆ ಮಿಲಿಟರಿ ಹೆಲಿಕಾಪ್ಟರ್ ಬಳಕೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 6:34 IST
Last Updated 20 ಸೆಪ್ಟೆಂಬರ್ 2020, 6:34 IST
   

ಉಡುಪಿ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ರಕ್ಷಣಾ ಕಾರ್ಯಾಚರಣೆಗೆ ಮಿಲಿಟರಿ ಹೆಲಿಕಾಪ್ಟರ್ ಬಳಸಲು ನಿರ್ಧರಿಸಲಾಗಿದ್ದು, ಸನ್ನದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ 250 ಸಿಬ್ಬಂದಿಯನ್ನೊಳಗೊಂಡ ಎಸ್‌ಡಿಆರ್‌ಎಫ್‌ ತಂಡ ಹಗಲಿರುಳು ಶ್ರಮಿಸುತ್ತಿದೆ. ಉಡುಪಿ ತಾಲ್ಲೂಕಿನ ನಾಲ್ಕು ಗ್ರಾಮಗಳು ಜಲಾವೃತಗೊಂಡಿದ್ದು, ಅಲ್ಲಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಎನ್‌ಡಿಆರ್‌ಎಫ್‌ ತಂಡ ಮಂಗಳೂರಿನಿಂದ ಉಡುಪಿಗೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪಶ್ಚಿಮಘಟ್ಟದಲ್ಲಿ ಮಳೆ ಅಬ್ಬರ ಹೆಚ್ಚಾಗಿ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಕಾರ್ಕಳ ತಾಲ್ಲೂಕಿನಲ್ಲಿ ಹಲವು ಸೇತುವೆಗಳು ಕುಸಿದಿವೆ. ಅಲ್ಲಿನ ನದಿಪಾತ್ರದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.

ADVERTISEMENT

ಬಜೆ ಜಲಾಶಯದ ಬಳಿಯ ಕಿರು ಜಲವಿದ್ಯುತ್ ಸ್ಥಾವರದ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿರುವ ಮಾಹಿತಿ ಸಿಕ್ಕಿದ್ದು, ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಜನರ ಪ್ರಾಣ ರಕ್ಷಣೆಗೆ ತುರ್ತು ಕ್ರಮಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.