ADVERTISEMENT

‘ಗ್ರಾಹಕರಿಗೆ ಹಾಲು ಖರೀದಿಸಲು ಅವಕಾಶ ನೀಡಿ’

​ಪ್ರಜಾವಾಣಿ ವಾರ್ತೆ
Published 8 ಮೇ 2021, 4:00 IST
Last Updated 8 ಮೇ 2021, 4:00 IST

ಬೆಂಗಳೂರು: ‘ಹಾಲು ಮಾರಾಟದ ಅವಧಿಯನ್ನು ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4ರಿಂದ 6 ಗಂಟೆಯವರೆಗೆ ನಿಗದಿಪಡಿಸಬೇಕು. ಈ ವೇಳೆ ಗ್ರಾಹಕರಿಗೆ ಹಾಲು ಖರೀದಿಗೆ ಅನುಮತಿ ನೀಡಬೇಕು’ಎಂದು ಬೆಂಗಳೂರು ಡೈರಿ ಏಜೆಂಟರ ಸಂಘ ಮನವಿ ಮಾಡಿದೆ.

‘ಬೆಂಗಳೂರಿನಾದ್ಯಂತ ಒಟ್ಟು 1,200 ಹಾಲಿನ ಏಜೆಂಟರು ಕೆಲಸ ಮಾಡುತ್ತಿದ್ದಾರೆ. ಹಾಲು ಹಾಗೂ ಇತರೆ ಉತ್ಪನ್ನಗಳ ಖರೀದಿಗೆ ಸರ್ಕಾರ ರಾತ್ರಿ 8 ಗಂಟೆಯವರೆಗೆ ಅವಕಾಶ ಕಲ್ಪಿಸಿದೆ. ಆದರೆ, ಖರೀದಿಸಲು ಬರುವ ಗ್ರಾಹಕರಿಗೆ ಅನುಮತಿ ಇಲ್ಲ. ಬೆಳಿಗ್ಗೆ 10 ಗಂಟೆಯ ನಂತರ ಗ್ರಾಹಕರಿಲ್ಲದೆ, ಎಲ್ಲ ಹಾಲಿನ ಮಳಿಗೆಗಳು ರಾತ್ರಿವರೆಗೂ ಖಾಲಿ ಹೊಡೆಯುತ್ತವೆ’ ಎಂದುಸಂಘದ ಅಧ್ಯಕ್ಷ ಎಚ್.ಎಸ್.ರಂಗಸ್ವಾಮಿ ತಿಳಿಸಿದರು.

‘ಹಾಲು ಹಾಗೂ ಇತರ ಉತ್ಪನ್ನಗಳಿಗೆ ಮೊದಲು ಬೇಡಿಕೆ ಇರುತ್ತಿತ್ತು. ಹೋಟೆಲ್‌ಗಳು ಹಾಗೂ ಕೇಟರಿಂಗ್‌ನವರು ಹೆಚ್ಚಾಗಿ ಹಾಲು ಖರೀದಿಸುತ್ತಿದ್ದರು. ಸದ್ಯ ಹೋಟೆಲ್‌ಗಳು ಸ್ತಬ್ಧವಾಗಿವೆ. ಕಾರ್ಯಕ್ರಮಗಳೂ ನಡೆಯುತ್ತಿಲ್ಲ. ಈಗ ಸಾರ್ವಜನಿಕರು ಮಾತ್ರ ಹಾಲು ಖರೀದಿಸುತ್ತಿದ್ದಾರೆ. ಆದರೆ, ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ. ಇದರಿಂದ ಏಜೆಂಟರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅಳಲು ತೋಡಿಕೊಂಡರು.

ADVERTISEMENT

‘ಕೋವಿಡ್ ಅವಧಿಯಲ್ಲೂ ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹಾಲು ಏಜೆಂಟರಿಗೆ ಸರ್ಕಾರ ಉಚಿತವಾಗಿ ಲಸಿಕೆ, ಔಷಧ ಹಾಗೂ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ವಿತರಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.