ADVERTISEMENT

ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಕ್ಷೀರ ಕ್ರಾಂತಿ

ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ದಾಪುಗಾಲು; ಸಮೃದ್ಧಿಯತ್ತ ಹೈನುಗಾರಿಕೆ

ಡಿ.ಬಿ, ನಾಗರಾಜ
Published 1 ಜೂನ್ 2020, 1:58 IST
Last Updated 1 ಜೂನ್ 2020, 1:58 IST
ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಡೇರಿ
ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಡೇರಿ   

ಮೈಸೂರು: ಜಿಲ್ಲೆಯ ಅಪಾರ ಸಂಖ್ಯೆಯ ರೈತ ಕುಟುಂಬಗಳಿಗೆ ಹೈನುಗಾರಿಕೆ ವರದಾನವಾಗಿದೆ. ಬಹು ವರ್ಷಗಳಿಂದಲೂ ಕಾವೇರಿ–ಕಪಿಲೆಯರ ಕೃಪೆಯಿಂದ ಜಲಸಂಪನ್ಮೂಲ ಹೆಚ್ಚಾದಂತೆ ನದಿ ದಂಡೆಯ ಹಳ್ಳಿಗಳು, ಕಾವೇರಿಯ ಕೃಪೆ ದೊರೆತ ಹಳ್ಳಿಗಳಲ್ಲೂ ಹಾಲಿನ ಹೊಳೆ ಹರಿಯುವಿಕೆ ಹೆಚ್ಚುತ್ತಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ‘ಕ್ಷೀರೋದ್ಯಮದ’ ಪ್ರಗತಿ ದಿನದಿಂದ ದಿನಕ್ಕೆ ದಾಪುಗಾಲಿನಲ್ಲಿ ಸಾಗಿದೆ. ಹೈನುಗಾರಿಕೆ ನಡೆಸಲು ಒಲವು ತೋರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರ ಪರಿಣಾಮ ಈ ಭಾಗದ ರೈತ ಕುಟುಂಬಗಳು ಆರ್ಥಿಕವಾಗಿ ಸದೃಢವಾಗುತ್ತಿವೆ.

ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟವೂ ಸತತ ಲಾಭ ಗಳಿಕೆಯಲ್ಲಿ ಮುಂದಿದ್ದು, ‘ಕ್ಷೀರೋದ್ಯಮ’ದಲ್ಲಿ ಪ್ರಗತಿದಾಯಕ ಬೆಳವಣಿಗೆ ಗೋಚರಿಸಿದೆ. 2019–20ನೇ ಸಾಲಿನಲ್ಲಿ ತೆರಿಗೆ ಪಾವತಿಸುವ ಪೂರ್ವದಲ್ಲೇ ₹ 16 ಕೋಟಿ ಲಾಭ ಗಳಿಸಿದೆ ಎಂಬುದು ಮೂಲಗಳಿಂದ ಖಚಿತ ಪಟ್ಟಿದೆ.

ADVERTISEMENT

ಹಾಲಿನ ಹೊಳೆ: ‘ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹಿಂದಿನ ವರ್ಷ ಇದೇ ಅವಧಿಯಲ್ಲಿ ನಿತ್ಯ 5.70 ಲಕ್ಷ ಲೀಟರ್ ಹಾಲನ್ನು ರೈತರಿಂದ ಸಂಗ್ರಹಿಸುತ್ತಿತ್ತು. ಪ್ರಸ್ತುತ 6.10 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 40 ಸಾವಿರ ಲೀಟರ್ ಹಾಲನ್ನು ಹೆಚ್ಚಾಗಿ ಸಂಗ್ರಹಿಸುತ್ತಿದೆ’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘2020ರ ಮೇ 1ರಂದು 5.25 ಲಕ್ಷ ಲೀಟರ್ ಹಾಲು ಜಿಲ್ಲೆಯಲ್ಲಿ ಸಂಗ್ರಹವಾಗುತ್ತಿತ್ತು. ಇದೀಗ 6.10 ಲಕ್ಷ ಲೀಟರ್ ಹಾಲು ನಿತ್ಯವೂ ಸಂಗ್ರಹಗೊಳ್ಳುತ್ತಿದೆ. ಒಂದು ತಿಂಗಳ ಅವಧಿಯಲ್ಲೇ 85 ಸಾವಿರ ಲೀಟರ್ ಹಾಲಿನ ಸಂಗ್ರಹ ಹೆಚ್ಚಿದೆ’ ಎಂದು ಹೇಳಿದರು.

‘ಮುಂಗಾರು ಪೂರ್ವ ಮಳೆ ಸುರಿದಿದೆ. ಎಲ್ಲೆಡೆ ಹಸಿರು ಹೆಚ್ಚಿದೆ. ಇದಕ್ಕೆ ಪೂರಕವಾಗಿ ವಾತಾವರಣದಲ್ಲಿನ ಉಷ್ಣಾಂಶ ಇಳಿಕೆಯಾಗಿದೆ. ಇದರ ಪರಿಣಾಮ ಹಾಲಿನ ಇಳುವರಿ ಹೆಚ್ಚಿದೆ. ಜೂನ್ ಅಂತ್ಯ ಅಥವಾ ಜುಲೈ 10ರೊಳಗೆ, 1 ದಿನದಲ್ಲಿ 7 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಿದ್ದೇವೆ’ ಎಂದು ಅವರು ತಿಳಿಸಿದರು.

3 ಲಕ್ಷ ಲೀಟರ್ ಹಾಲು ಬಳಕೆ

‘ಮೈಸೂರು ಜಿಲ್ಲೆಯಾದ್ಯಂತ ನಿತ್ಯವೂ 3 ಲಕ್ಷ ಲೀಟರ್ ಹಾಲು, ಮೊಸರು, ಮಜ್ಜಿಗೆ, ತುಪ್ಪ, ಸಿಹಿ ತಿನಿಸು ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆಗೆ ಬಳಕೆಯಾಗುತ್ತಿದೆ. ಅಂತರ ಡೇರಿ ಮೂಲಕ ನಿತ್ಯವೂ ಕೇರಳಕ್ಕೆ 60 ಸಾವಿರ ಲೀಟರ್ ಹಾಲು ಮಾರಾಟವಾದರೆ, ಕೋವಿಡ್‌ನಿಂದಾಗಿ ತಮಿಳುನಾಡಿಗೆ ಎರಡ್ಮೂರು ದಿನಕ್ಕೊಮ್ಮೆ 15–20 ಸಾವಿರ ಲೀಟರ್ ಮಾರಾಟವಾಗಲಿದೆ. 2 ಲಕ್ಷ ಲೀಟರ್ ಹಾಲನ್ನು ಪೌಡರ್‌ ಮಾಡಲು ಬಳಸಿಕೊಳ್ಳಲಾಗುತ್ತಿದೆ’ ಎಂದು ಡಿ.ಅಶೋಕ್ ತಿಳಿಸಿದರು.

‘ಸಹಜವಾಗಿ ವಾರ್ಷಿಕ ಶೇ 10ರಿಂದ 15ರಷ್ಟು ಹಾಲಿನ ಇಳುವರಿ ಹೆಚ್ಚಲಿದೆ. ಈ ವರ್ಷ ಮುಂಗಾರು ಪೂರ್ವ ಮಳೆ ಚೆನ್ನಾಗಿ ಸುರಿದಿದೆ. ಈಗಾಗಲೇ ಹಾಲು ಉತ್ಪಾದಕರಿಗೆ ಮೇವಿನ ಬೀಜ ಕೊಟ್ಟಿದ್ದೇವೆ. ಮೇವು ಬರುತ್ತಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಹಾಲಿನ ಇಳುವರಿ ಹೆಚ್ಚಿರಲಿದೆ’ ಎಂದು ಹೇಳಿದರು.

ಅಂಕಿ–ಅಂಶ

ಪ್ರತಿನಿತ್ಯ 6.10 ಲಕ್ಷ ಲೀಟರ್ ಹಾಲು ಸಂಗ್ರಹ

1 ದಿನದಲ್ಲಿ 7 ಲಕ್ಷ ಲೀಟರ್ ಹಾಲಿನ ಸಂಗ್ರಹ ಈ ವರ್ಷದ ಗುರಿ

ಜಿಲ್ಲೆಯಲ್ಲಿ 1,090 ಹಾಲು ಉತ್ಪಾದಕರ ಸಹಕಾರ ಸಂಘ ಅಸ್ತಿತ್ವದಲ್ಲಿ

89 ಸಾವಿರ ಹಾಲು ಉತ್ಪಾದಕರು ನಿತ್ಯವೂ ಹಾಲು ಹಾಕುವವರು

ಜಿಲ್ಲೆಯಲ್ಲಿ ಒಟ್ಟು 2.25 ಲಕ್ಷ ಹಾಲು ಉತ್ಪಾದಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.