ADVERTISEMENT

'ಕೆಎಂಎಫ್‌ ಮತ್ತು ಅಮೂಲ್‌ ವಿಲೀನ ವಿರೋಧಿಸಿ ಒಕ್ಕೂಟಗಳು ನಿರ್ಣಯ ಕೈಗೊಳ್ಳಲಿ'

ಅಮೂಲ್‌– ನಂದಿನಿ ಕುರಿತ ಅಮಿತ್‌ ಶಾ ಹೇಳಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 21:36 IST
Last Updated 4 ಜನವರಿ 2023, 21:36 IST
ಸಿದಗೌಡ ಮೋದಗಿ
ಸಿದಗೌಡ ಮೋದಗಿ   

ಬೆಂಗಳೂರು: ಕೆಎಂಎಫ್‌ ಮತ್ತು ಅಮೂಲ್‌ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿದ ಹೇಳಿಕೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ವಿಷಯದ ಹಿನ್ನೆಲೆಯಲ್ಲಿ ‘ನಂದಿನಿ–ಅಮೂಲ್ ಅಮಿತ್ ಶಾ ಹೇಳಿದ್ದೇನು?’ ಎನ್ನುವ ಕುರಿತು ‘ಪ್ರಜಾವಾಣಿ’ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ವಿಲೀನ ವಿರೋಧಿಸಿ ಎಲ್ಲ ಹಾಲು ಒಕ್ಕೂಟಗಳು ಒಮ್ಮತದ ನಿರ್ಣಯಗಳನ್ನು ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂತು.

ಅತಿಥಿಗಳು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

ADVERTISEMENT

ರಾಜಕೀಯಕ್ಕೆ ‘ನಂದಿನಿ’ ಬಲಿಯಾಗಬಾರದು

ನಂದಿನಿ ಮತ್ತು ಅಮುಲ್‌ಗೆ ಸಂಬಂಧಿಸಿದಂತೆ ಅಮಿತ್‌ ಶಾ ಅವರು ನೀಡಿರುವ ಹೇಳಿಕೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ನಂದಿನಿಯನ್ನು ‌ರಾಜಕೀಯವಾಗಿ ಬಳಸಿಕೊಳ್ಳದೆ ರೈತರ ಹಿತಾಸಕ್ತಿಗೆ ಮಾತ್ರ ಸೀಮಿತವಾಗಬೇಕು. ಬೇರೆ ಬೇರೆ ರಾಜ್ಯಗಳಲ್ಲಿರುವ ವ್ಯವಸ್ಥೆ ಬೇರೆಯಾಗಿದ್ದು, ಕರ್ನಾಟಕದ ವ್ಯವಸ್ಥೆಯೇ ಬೇರೆ. ಹಾಲು ಒಕ್ಕೂಟಗಳನ್ನು ವಿಲೀನಗೊಳಿಸಿ ಬಹು ರಾಜ್ಯಗಳ ಸಂಸ್ಥೆ ಸ್ಥಾಪಿಸಿ ವಿದೇಶದಲ್ಲಿ ಭಾರತದ ‘ಬ್ರ್ಯಾಂಡ್‌’ ಸೃಷ್ಟಿಸುವ ಯೋಜನೆ ಇದಾಗಿರಬಹುದು. ಆದರೆ, ಈಗಾಗಲೇ ನಂದಿನಿ ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರತಿಯೊಂದು ರಾಜ್ಯದಲ್ಲಿ ಗುಜರಾತ್‌ ಮಾದರಿ ಜಾರಿಗೊಳಿಸುತ್ತೇವೆ ಎನ್ನುವುದು ಸರಿ ಅಲ್ಲ

– ಸಿದಗೌಡ ಮೋದಗಿ, ರಾಜ್ಯಾಧ್ಯಕ್ಷ, ಭಾರತೀಯ ಕೃಷಿಕ ಸಮಾಜ, ಬೆಳಗಾವಿ

ಕೆಎಂಎಫ್‌ ಮತ್ತು ಅಮೂಲ್ ವಿಲೀನಗೊಳಿಸಿದರೆ ಕನ್ನಡಿಗರಿಗೆ ಮಾಡುವ ದ್ರೋಹವಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಕರ್ನಾಟಕ ಮೂಲದ ಬ್ಯಾಂಕ್‌ಗಳನ್ನು ಬೇರೆ ಬೇರೆ ಬ್ಯಾಂಕ್‌ಗಳ ಜತೆ ವಿಲೀನಗೊಳಿಸಿ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಈಗ ಅಮೂಲ್‌ಗೆ ಸ್ಪರ್ಧೆವೊಡ್ಡುತ್ತಿರುವ ಕೆಎಂಎಫ್‌ ಅನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ.

ಕೆಎಂಎಫ್‌ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅಮೂಲ್‌ ಜತೆ ವಿಲೀನಗೊಳಿಸುವ ಕ್ರಮ ಸರಿ ಅಲ್ಲ. ಕೆಎಂಎಫ್‌ ಅಧ್ಯಕ್ಷರು ಮತ್ತು ನಿರ್ದೇಶಕರು ವಿಲೀನಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಆದರೆ, ಅವರು ಇದುವರೆಗೆ ಹೇಳಿಕೆ ನೀಡಿಲ್ಲ. ಎಲ್ಲ ಹಾಲು ಒಕ್ಕೂಟಗಳ ನಿರ್ದೇಶಕರು ಸಹ ಪ್ರತಿಭಟನೆ ವ್ಯಕ್ತಪಡಿಸಬೇಕು.

-ಎಲ್‌.ಗಂಗಾಧರಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್

ಕೆಎಂಎಫ್‌– ಅಮೂಲ್‌ ವಿಲೀನ ಅಸಾಧ್ಯ ಮತ್ತು ಬೆಂಬಲಿಸಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕೆಎಂಎಫ್‌ ನಮ್ಮದು ಎನ್ನುವ ಕೂಗು ಹೆಚ್ಚಾಗಬೇಕು. ಎಲ್ಲ ಒಕ್ಕೂಟಗಳು ಈ ಬಗ್ಗೆ ದನಿ ಎತ್ತಬೇಕು. ಕೆಎಂಎಫ್‌ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಂತರರಾಷ್ಟ್ರೀಯ ಮಟ್ಟದ ಉತ್ಪನ್ನ ಗಳನ್ನು ತಯಾರಿಸಲು ಒಂದಷ್ಟು ಬದಲಾವಣೆಗಳನ್ನು ಕೈಗೊಳ್ಳಬೇಕು. ಈ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಬ್ರ್ಯಾಂಡ್‌ ಸೃಷ್ಟಿಸಿಕೊಳ್ಳಲು ಸಾಧ್ಯವಾಗಲಿದೆ. ಕೆಎಂಎಫ್‌ನಲ್ಲಿ ಶಕ್ತಿ ಮತ್ತು ಸಾಮರ್ಥ್ಯ ಇದೆ. ಆದರೆ, ಬೇಕಾಗಿರುವುದು ನೆರವು. ಜತೆಗೆ, ಮಾರುಕಟ್ಟೆ ಕಾರ್ಯತಂತ್ರವನ್ನು ವಿಸ್ತರಿಸಲು ಜಾಗತಿಕ ದೃಷ್ಟಿಕೋನದ ವ್ಯವಸ್ಥಾಪಕರು ಸಹ ಅಗತ್ಯ.

-ಡಾ. ಶಂಕರ ಸಿದ್ಧಾಂತಿ, ಪ್ರಾದೇಶಿಕ ಸಹಕಾರ ಆಡಳಿತ ನಿರ್ವಹಣಾ ಸಂಸ್ಥೆಯ ಮಾಜಿ ನಿರ್ದೇಶಕ, ಬೆಂಗಳೂರು.

ಯಾವುದೇ ಕಾರಣಕ್ಕೂ ಅಮುಲ್‌ ಜತೆ ವಿಲೀನ ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ನಂದಿನಿ ಮತ್ತು ಅಮೂಲ್‌ ನಡುವೆ ಪೈಪೋಟಿ ಇದೆ. ಹೀಗಾಗಿ, ಅಮೂಲ್‌ ಜತೆ ಹೊಂದಾಣಿಕೆ ಸಾಧ್ಯವಿಲ್ಲ. ಆದರೆ, ವಿಲೀನ ವಿರೋಧಿಸಿ ಕೆಎಂಎಫ್‌ ಅಧ್ಯಕ್ಷರು ಇದುವರೆಗೆ ಹೇಳಿಕೆ ನೀಡಿಲ್ಲ. ನಂದಿನಿ 26 ಲಕ್ಷಕ್ಕೂ ಹೆಚ್ಚು ಜನರ ಜೀವನಾಡಿಯಾಗಿದೆ. ಇದು ನಮ್ಮ ಹೆಮ್ಮೆ. ನಂದಿನಿ ಬ್ರ್ಯಾಂಡ್ ಕಳೆದುಕೊಂಡರೆ ಸ್ವತಂತ್ರ ಮಗನನ್ನು ಕಳೆದುಕೊಂಡಂತೆ. ಅಮೂಲ್‌ ಮತ್ತು ನಂದಿನಿ ಒಂದಾಗಿ ಕೆಲಸ ಮಾಡಬಹುದೇ ಹೊರತು ವಿಲೀನ ಸಾಧ್ಯವಿಲ್ಲ. ಹಾಲು ಉತ್ಪಾದನೆಯ ಖರ್ಚು ಹೆಚ್ಚಾಗಿದ್ದರೂ ಆದಾಯ ಕಡಿಮೆಯಾಗಿದೆ. ಎಲ್ಲ ರಾಜ್ಯಗಳಲ್ಲಿ ಒಂದೇ ದರ ನಿಗದಿಪಡಿಸಿದರೆ ಹಾಲು ಉತ್ಪಾದನೆ ಹೆಚ್ಚಾಗಬಹುದು.

– ಮಾಗಡಿ ನರಸಿಂಹಮೂರ್ತಿ, ಅಧ್ಯಕ್ಷ, ಬಮೂಲ್‌, ರಾಮನಗರ

ಪೂರ್ಣ ಸಂವಾದ ವೀಕ್ಷಿಸಲು:

https://youtu.be/t9fNvoNn-jo

https://www.facebook.com/prajavani.net/videos/3313315965549597/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.