ADVERTISEMENT

ಕೆಜಿಎಫ್‌ನಲ್ಲಿ ಗಣಿಗಾರಿಕೆ ನಡೆಯದ ಪ್ರದೇಶದಲ್ಲಿ ಗಣಿಗಾರಿಕೆಗೆ ರಾಜ್ಯಕ್ಕೆ ಅನುಮತಿ

ಕಬ್ಬಿಣ ಅದಿರು ರಾಯಧನ ಹೆಚ್ಚಿಸಲು ಕೇಂದ್ರದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 10:48 IST
Last Updated 28 ಆಗಸ್ಟ್ 2020, 10:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಳ್ಳಾರಿ ಜಿಲ್ಲೆ ದೋಣಿಮಲೈ ಕಬ್ಬಿಣ ಅದಿರು ಗಣಿಗಾರಿಕೆಯ ಮೇಲೆ ಪ್ರೀಮಿಯಂ/ರಾಯಧನ ನಿಗದಿ, ಕೆಜಿಎಫ್‌ನಲ್ಲಿ ಗಣಿಗಾರಿಕೆ ನಡೆಸದ ಪ್ರದೇಶದಲ್ಲಿ ಖನಿಜ ಸಂಪನ್ಮೂಲಗಳ ಲಭ್ಯತೆ ಇದ್ದರೆ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಲು ಕೇಂದ್ರ ಒಪ್ಪಿಗೆ ನೀಡಿದೆ.

ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಬಹಳ ವರ್ಷಗಳಿಂದ ನನೆಗುದಿಯಲ್ಲಿದ್ದ ವಿಷಯಗಳನ್ನು ಇತ್ಯರ್ಥಗೊಳಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಕಂದಾಯ ಸಚಿವ ಆರ್‌.ಅಶೋಕ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಇದ್ದರು.

ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದಜೋಷಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕುರಿತು ವಿವರ ನೀಡಿದರು.

ADVERTISEMENT

ಬಳ್ಳಾರಿ ಜಿಲ್ಲೆಯಲ್ಲಿರುವ ದೋಣಿಮಲೈನಲ್ಲಿ ಗಣಿಗಾರಿಕೆ ನಡೆಸುತ್ತಿರುವ ಉಕ್ಕು ಸಚಿವಾಲಯದ ಎನ್‌ಎಂಡಿಸಿ ಕಂಪೆನಿಯು ರಾಜ್ಯ ಸರ್ಕಾರಕ್ಕೆ ಹೆಚ್ಚು ಪ್ರೀಮಿಯಂ ನೀಡಬೇಕು ಎಂಬ ಬೇಡಿಕೆ ಕಳೆದ ಐದು ವರ್ಷಗಳಿಂದ ಇತ್ತು. ಈ ಕಂಪನಿಯ 50 ವರ್ಷಗಳ ಗುತ್ತಿಗೆ ಅವಧಿಯೂ ಮುಗಿದಿತ್ತು. 2020ರ ಬಳಿಕ ಸ್ಥಾಪನೆಗೊಳ್ಳುವ ಸಾರ್ವಜನಿಕ ಉದ್ದಿಮೆಗಳಿಗೆ ಪ್ರೀಮಿಯಂ ಅನ್ನು ಕೇಂದ್ರ ಸರ್ಕಾರ ನಿಗದಿ ಮಾಡಬಹುದು. ಆದರೆ, ಗುತ್ತಿಗೆಯನ್ನು ನವೀಕರಿಸಿದರೆ ಪ್ರೀಮಿಯಂ ನಿನಗದಿ ಮಾಡುವ ಅವಕಾಶ ಇರಲಿಲ್ಲ ಎಂದು ಅವರು ಹೇಳಿದರು.

ಇದರಿಂದ ರಾಜ್ಯ ಸರ್ಕಾರ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಖೋತಾ ಆಗುತ್ತದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗಣಿ ಇಲಾಖೆ, ಉಕ್ಕು ಇಲಾಖೆ ಮತ್ತು ರಾಜ್ಯ ಸರ್ಕಾರದ ಸಮಿತಿಯೊಂದನ್ನು ರಚಿಸಿ ಮೂರು ತಿಂಗಳ ಒಳಗೆ ಪ್ರೀಮಿಯಂ ನಿಗದಿ ಮಾಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲು ಸೂಚಿಸಲಾಗಿದೆ. ಈಗ ರಾಯಧನ ಶೇ 15 ಇದೆ. ಶೇ 22.5 ಕ್ಕೆ ಹೆಚ್ಚಿಸಲು ಒಪ್ಪಿಕೊಂಡಿದ್ದು, ಒಟ್ಟು ಶೇ 37.25 ರಾಯಧನ ರಾಜ್ಯಕ್ಕೆ ಸಿಗುತ್ತದೆ ಎಂದು ಪ್ರಹ್ಲಾದ ಜೋಷಿ ತಿಳಿಸಿದರು.

ಕೆಜಿಎಫ್‌ನಲ್ಲಿ ಭಾರತ್ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ ಬಳಿ ಸುಮಾರು 10,000 ದಿಂದ 12,000 ಎಕರೆ ಭೂಮಿ ಇದ್ದು, ಅಲ್ಲಿ ಯಾವುದೇ ರೀತಿಯಲ್ಲಿ ಗಣಿಗಾರಿಕೆ ನಡೆದಿಲ್ಲ. ಅಲ್ಲಿ ಯಾವುದಾದರೂ ಖನಿಜ ಇದೆಯೇ ಎಂಬುದನ್ನು ಪತ್ತೆ ಮಾಡಿ ಆರು ತಿಂಗಳಲ್ಲಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಭೂಮಿಯಲ್ಲಿ ಒಂದು ವೇಳೆ ಚಿನ್ನ, ಟಂಗಸ್ಟನ್‌ ಸೇರಿದಂತೆ ಯಾವುದೇ ರೀತಿಯ ಖನಿಜ ಇದ್ದರೆ ಅದರ ಗಣಿಗಾರಿಕೆಯ ಹರಾಜು ನಡೆಸಲು ರಾಜ್ಯಕ್ಕೆ ಅವಕಾಶ ನೀಡಲಾಗಿದೆ. ಅದರ ರಾಯಧನವನ್ನು ರಾಜ್ಯ ಸರ್ಕಾರವೇ ಪಡೆಯಬಹುದು. ಒಂದು ವೇಳೆ ಯಾವುದೇ ಖನಿಜ ಇಲ್ಲವಾದರೆ, ಅಲ್ಲಿ ಕೈಗಾರಿಕಾ ಪಾರ್ಕ್‌ ಮಾಡಲು ಬಳಕೆ ಮಾಡಬಹುದು ಎಂದು ಸೂಚನೆ ನೀಡಲಾಗಿದೆ ಎಂದು ಜೋಷಿ ಹೇಳಿದರು.

ಮಹಾರಾಷ್ಟ್ರದ ಬಾರಂಜಾ ಕಲ್ಲಿದ್ದಲು ಗಣಿಯಲ್ಲಿ ಕರ್ನಾಟಕಕ್ಕೆ ನಿಗದಿಯಾಗಿದ್ದ ಬ್ಲಾಕ್‌ನಲ್ಲಿ ಗಣಿಗಾರಿಕೆ ಮಾಡಲು ಸೂಚನೆ ನೀಡಲಾಗಿದೆ. ಇದೂ ಬಹಳ ಕಾಲದಿಂದ ನನೆಗುದಿಯಲ್ಲಿ ಇತ್ತು. ಅಲ್ಲದೆ, ಸಿಂಗರೇಣಿಯಿಂದ ಕರ್ನಾಟಕಕ್ಕೆ ಕಲ್ಲಿದ್ದಲು ಸಾಗಿಸುವಾಗ ಅದರ ಗುಣಮಟ್ಟದಲ್ಲಿ ವ್ಯತ್ಯಾಸ ಆಗುತ್ತಿತ್ತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿತ್ತು. ಗುಣಮಟ್ಟ ವ್ಯತ್ಯಯ ಆಗದಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗುವುದು. ಈ ಸಂಬಂಧ ಕಲ್ಲಿದ್ದಲು ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕರ ಜತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.