ADVERTISEMENT

ರೈಲು ಸಾರಿಗೆ ಕೋರ್ಸ್‌: ಅಂಗಡಿ ಸಲಹೆಗೆ ವಿಟಿಯು ಕ್ರಮ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 18:39 IST
Last Updated 25 ಜೂನ್ 2019, 18:39 IST

ಬೆಳಗಾವಿ: ಗುಜರಾತ್‌ನ ವಡೋದರದಲ್ಲಿ ಸ್ಥಾಪನೆಯಾಗಿರುವ ದೇಶದ ಪ್ರಥಮ ರೈಲ್ವೆ ವಿಶ್ವವಿದ್ಯಾಲಯವಾದ ಎನ್‌ಆರ್‌ಟಿಐ (ದಿ ನ್ಯಾಷನಲ್ ರೇಲ್ ಅಂಡ್ ಟ್ರಾನ್ಸ್‌ಪೋರ್ಸ್‌ ಇನ್‌ಸ್ಟಿಟ್ಯೂಟ್) ಮಾದರಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ರೈಲು ಸಾರಿಗೆಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿರುವ ಅವರು, ‘ಈ ಹೊಸ ಕೋರ್ಸ್‌ಗಳು ಅಥವಾ ಕಾರ್ಯಕ್ರಮಗಳ ಆರಂಭಕ್ಕೆ ಕ್ರಮ ವಹಿಸಿದರೆ ಅಗತ್ಯ ಸಹಕಾರ ಕೊಡುವುದಾಗಿ ತಿಳಿಸಿದ್ದೇನೆ’ ಎಂದು ಹಂಚಿಕೊಂಡಿದ್ದಾರೆ.

‘ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳ ಸಮೃದ್ಧ ಅನುಭವ ಹೊಂದಿರುವ ವಿಟಿಯು ಸಾರಿಗೆ ಕ್ಷೇತ್ರಕ್ಕೆ ಅಗತ್ಯವಾದ ಕೋರ್ಸ್‌ಗಳನ್ನು ರೂಪಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ರೈಲು ಸಾರಿಗೆ ಕ್ಷೇತ್ರದಲ್ಲಿರುವ ಉದ್ಯೋಗ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕೌಶಲ ನೀಡಿದಂತಾಗುತ್ತದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ವಡೋದರದ ಎನ್‌ಆರ್‌ಐಟಿಯಲ್ಲಿ ಪದವಿ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ವಿಟಿಯುನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭಿಸಲು ಅವಕಾಶವಿದೆ. ಕೌಶಲ ವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಚಿವರ ಸಹಕಾರವನ್ನೂ ಪಡೆಯಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕುಲಪ‍ತಿ ಪ್ರೊ.ಕರಿಸಿದ್ದಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.