ಬೆಂಗಳೂರು: ‘ಆದಷ್ಟು ಬೇಗ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ವೇ (ಎನ್‌ಇ–7) ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ನಗರಾಭಿವೃದ್ದಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ನಿರ್ಮಾಣದ ಪ್ರಗತಿ, ರಾಷ್ಟ್ರೀಯ ಹೆದ್ದಾರಿ–75ರ ನಿರ್ವಹಣೆ ಮತ್ತು ಅದರಲ್ಲಿರುವ ಲೋಪಗಳಿಗೆ ಸಂಬಂಧಿಸಿದಂತೆ ಸೋಮವಾರ ಸಭೆ ನಡೆಸಿದರು.
ಕೋಲಾರ ಜಿಲ್ಲೆಯಲ್ಲಿ ಹಾದು ಹೋಗುವ 56 ಕಿ.ಮೀ ವ್ಯಾಪ್ತಿಯ ಈ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಸ್ಥಳಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಆಗುತ್ತಿರುವುದರಿಂದ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಎಕ್ಸ್‌ಪ್ರೆಸ್ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಭೆಯಲ್ಲಿ ಹೇಳಿದರು.
ತಕ್ಷಣ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿದ ಸಚಿವರು, ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಜಮೀನಿನ ಮಾಲೀಕರು ಅಡ್ಡಿಪಡಿಸುತ್ತಿದ್ದು, ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು.
ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಯೋಜನಾ ನಿರ್ದೇಶಕರಾದ ಅರ್ಚನಾ, ನಗರಾಭಿವೃದ್ದಿ ಇಲಾಖೆಯ ಉಪ ಕಾರ್ಯದರ್ಶಿ ರಘುನಂದನ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.