ಚಿಕ್ಕಬಳ್ಳಾಪುರ: ‘ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ಕೊಡುತ್ತಿದೆ. ಆದರೂ ಜನರು ತೆಗೆದುಕೊಳ್ಳುತ್ತಿಲ್ಲ. ಆದರೂ ನಮ್ಮ ಸಿಬ್ಬಂದಿ ಕಾಡಿಬೇಡಿ ಲಸಿಕೆ ನೀಡುತ್ತಿದ್ದಾರೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ 5,500 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಒಂದು ಕೇಂದ್ರದಲ್ಲಿ ಕನಿಷ್ಠ 100 ಜನರು ಲಸಿಕೆ ಹಾಕಿಸಿಕೊಂಡರೂ ನಿತ್ಯ 5.50 ಲಕ್ಷ ಜನರಿಗೆ ಲಸಿಕೆ ಹಾಕಿದಂತೆ ಆಗುತ್ತದೆ. ಆದರೆ, ಈಗ ಪ್ರತಿದಿನ ಒಂದೂವರೆಯಿಂದ ಎರಡು ಲಕ್ಷ ಜನರು ಮಾತ್ರ ಲಸಿಕೆ ಪಡೆಯುತ್ತಿದ್ದಾರೆ ಎಂದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50ಕ್ಕೆ ಮಿತಿಗೊಳಿಸುವುದು, ಕಲ್ಯಾಣ ಮಂಟಪ, ಧಾರ್ಮಿಕ ಸ್ಥಳ, ಶಾಲೆಗಳಿಗೆ ನಿರ್ಬಂಧ ವಿಧಿಸುವುದು ಸರ್ಕಾರಕ್ಕೆ ಸಂತೋಷ ತರುವ ವಿಚಾರವಲ್ಲ. ಆದರೆ ಒಬ್ಬ ವ್ಯಕ್ತಿ, ಆತನ ಚಟುವಟಿಕೆಗಳನ್ನು ನೋಡಿ ಮಾರ್ಗಸೂಚಿ ಸಿದ್ಧಪಡಿಸಲು ಸಾಧ್ಯವಿಲ್ಲ. ರಾಜ್ಯದ ಆರೂವರೆ ಕೋಟಿ ಜನರ ಹಿತ ಮುಖ್ಯ. ಸೋಂಕು ಕಡಿಮೆ ಮಾಡುವ ಉದ್ದೇಶದಿಂದ ಮಾರ್ಗಸೂಚಿ ನಿಗದಿಗೊಳಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.
ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಒಂದು ದಿನದಲ್ಲಿ ಗರಿಷ್ಠ ನಾಲ್ಕೂವರೆ ಸಾವಿರ ಮಂದಿಗೆ ಸೋಂಕು ತಗುಲಿತ್ತು. ಆದರೆ, ಎರಡನೇ ಅಲೆ ಆರಂಭದಲ್ಲಿಯೇ ಮೂರೂವರೆ ಸಾವಿರ ಸೋಂಕಿತರು ಆಗಿದ್ದಾರೆ. ಇದೆಲ್ಲ ಗಮನಿಸಿ ಮಾರ್ಗಸೂಚಿ ಜಾರಿಗೆ ತರಲಾಗಿದೆ ಎಂದು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.