ADVERTISEMENT

ಸಂಪುಟದಿಂದ ರಾಜಣ್ಣ ವಜಾ: ಸಚಿವ ಸ್ಥಾನಕ್ಕೆ ಮುಳುವಾಯ್ತೇ, ಮತ ಕಳವಿನ ಟೀಕೆ?

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
<div class="paragraphs"><p>ಕೆ.ಎನ್. ರಾಜಣ್ಣ</p></div>

ಕೆ.ಎನ್. ರಾಜಣ್ಣ

   

ಬೆಂಗಳೂರು: ವಿವಾದಾಸ್ಪದ ಮಾತುಗಳಿಂದ ಸದಾ ಸದ್ದು ಮಾಡುತ್ತಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ತಮ್ಮ ಪಕ್ಷದ ನಡೆಯ ವಿರುದ್ಧವೇ ಟೀಕೆ ಮಾಡಲು ಹೋಗಿ ಸಚಿವ ಸ್ಥಾನದಿಂದ ವಜಾಗೊಂಡಿದ್ದಾರೆ.

ಸಚಿವರಾಗಿದ್ದವರ ಹೆಸರು ಹಗರಣದಲ್ಲಿ ಪ್ರಸ್ತಾವಗೊಂಡಾಗ, ಸರ್ಕಾರ ಮುಜುಗರಕ್ಕೆ ಸಿಲುಕುವಂತಹ ಲೈಂಗಿಕ ಹಗರಣದಲ್ಲಿ ಸಿಕ್ಕಿ ಬಿದ್ದಾಗ ಸಚಿವರಿಂದ ‘ಬಲವಂತ’ವಾಗಿ ರಾಜೀನಾಮೆ ಪಡೆದು, ಅವರ ಗೌರವಕ್ಕೆ ಧಕ್ಕೆ ತರದಂತಹ ನಡೆಯನ್ನು ಆಡಳಿತಾರೂಢ ಪಕ್ಷಗಳು ಅನುಸರಿಸಿಕೊಂಡು ಬಂದಿದ್ದವು. ಸಚಿವ ಸ್ಥಾನದಿಂದ ಕಿತ್ತೊಗೆಯುವ ಸನ್ನಿವೇಶಗಳು ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿರಲಿಲ್ಲ.

ADVERTISEMENT

‘ನರೇಂದ್ರ ಮೋದಿಯವರು ಚುನಾವಣಾ ಆಯೋಗದ ಸಹಕಾರದಲ್ಲಿ ಮತ ಕಳವು ಮಾಡಿ ಪ್ರಧಾನಿ ಹುದ್ದೆಗೇರಿದ್ದಾರೆ’ ಎಂಬ ಗಂಭೀರ ಆಪಾದನೆ ಮಾಡಿರುವ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶವ್ಯಾಪಿ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಎಐಸಿಸಿಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದ ರಾಹುಲ್ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ರಾಜೀನಾಮೆಗೆ ಆಗ್ರಹಿಸಿದ್ದರು.

ಅದರ ಮಾರನೇ ದಿನವೇ (ಆ.9) ಪ್ರತಿಕ್ರಿಯಿಸಿದ್ದ ರಾಜಣ್ಣ, ‘ಲೋಕಸಭೆ ಚುನಾವಣೆ ನಡೆದದ್ದು, ಮತಪಟ್ಟಿ ಸಿದ್ಧಪಡಿಸಿದ್ದು, ನಮ್ಮ ಸರ್ಕಾರದ ಅವಧಿಯಲ್ಲೇ. ಎಲ್ಲರೂ ಆಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದರು’ ಎಂದು ಹೇಳಿದ್ದರು. ಮತ ಕಳುವಿನ ವಿರುದ್ಧ ತೊಡೆ ತಟ್ಟಿದ್ದ ರಾಹುಲ್ ಗಾಂಧಿ ಅವರನ್ನು ಟೀಕಿಸಲು ಇದು, ಬಿಜೆಪಿಗೆ ನೆರವಾಗಿತ್ತು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಮುಜುಗರಕ್ಕೆ ಈಡಾಗಿತ್ತು. 

ರಾಜೀನಾಮೆ ಅಲ್ಲ ವಜಾ: ಮುಂಗಾರು ಅಧಿವೇಶನದ ಮೊದಲ ದಿನವೇ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದರಿಂದಾಗಿ, ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಅಣಿಯಾಗಿದ್ದ ಪ್ರತಿಪಕ್ಷಗಳಿಗೆ ಇದು ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ.

ಕಲಾಪ ಆರಂಭವಾದ ಹೊತ್ತಿನಲ್ಲಿ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸಂಜೆಯ ಹೊತ್ತಿಗೆ ರಾಜಣ್ಣ ರಾಜೀನಾಮೆ ನೀಡಿದ್ದಲ್ಲ; ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ ಎಂಬ ಸುದ್ದಿ ಖಚಿತವಾಯಿತು. ಮುಖ್ಯಮಂತ್ರಿ ಕಚೇರಿಯಿಂದ ರಾಜಭವನಕ್ಕೆ ಅದೇ ರೀತಿಯ ಸೂಚನೆ ರವಾನೆಯಾಯಿತು. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಶಿಫಾರಸಿನ ಕುರಿತು ರಾಜಭವನದಿಂದ ಮಾರೋಲೆಯು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಲುಪಿತು. ಇದು ಮಾಧ್ಯಮಗಳಿಗೂ ಹಂಚಿಕೆಯಾಯಿತು. ವಜಾಗೊಳಿಸಿದ ಅಧಿಸೂಚನೆ ಹೊರಬಿದ್ದಿತು.

ವಜಾಕ್ಕೆ ಹೈಕಮಾಂಡ್ ಪಟ್ಟು: ‌‌ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಇಂಡಿಯಾ’ ಮೈತ್ರಿಕೂಟ ಸೋಮವಾರ ದೆಹಲಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿತ್ತು. ಇದೇ ವೇಳೆ, ರಾಜಣ್ಣ ಅವರ ವ್ಯತಿರಿಕ್ತ ಹೇಳಿಕೆಯನ್ನು ಮಿತ್ರ ಪಕ್ಷದ ನಾಯಕರು ಪ್ರಶ್ನಿಸಿದ್ದರಿಂದಾಗಿ, ಕಾಂಗ್ರೆಸ್ ನಾಯಕರು ಮುಜುಗರಕ್ಕೆ ಸಿಲುಕಿದರು ಎನ್ನಲಾಗಿದೆ.

ಇದರ ಬೆನ್ನಲ್ಲೇ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಹೈಕಮಾಂಡ್‌, ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿತು. ‘ಸದನ ನಡೆಯುತ್ತಿರುವ ಸಂದರ್ಭದಲ್ಲಿ ವಜಾ ಮಾಡಿದರೆ ವಿರೋಧಪಕ್ಷಗಳಿಗೆ ಅಸ್ತ್ರವಾಗುತ್ತದೆ. ಅಧಿವೇಶನ ಮುಗಿದ ಬಳಿಕ ರಾಜೀನಾಮೆ ಪಡೆಯೋಣ’ ಎಂದು ಸಿದ್ದರಾಮಯ್ಯ ಅವರು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಆದರೆ, ಅದಕ್ಕೆ ಹೈಕಮಾಂಡ್ ಒಪ್ಪಲಿಲ್ಲ ಎಂದು ಹೇಳಲಾಗಿದೆ.

ಈ ಬೆಳವಣಿಗೆಯು, ರಾಜಣ್ಣ ಅವರ ಗಮನಕ್ಕೆ ಬರುತ್ತಿದ್ದಂತೆ ರಾಜೀನಾಮೆ ಪತ್ರ ಸಿದ್ಧಪಡಿಸಿಕೊಂಡರು. ಕಲಾಪ ನಡೆಯುತ್ತಿರುವಾಗಲೇ ಸದನದ ಒಳಗೆ ಬಂದು ಮುಖ್ಯಮಂತ್ರಿಯವರ ಕಿವಿಯಲ್ಲಿ ಏನೋ ಉಸುರಿ ಹೊರ ನಡೆದರು. ಈ ಬೆನ್ನಲ್ಲೇ, ರಾಜಣ್ಣ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತು. ಮಾಧ್ಯಮಗಳು ಇದನ್ನು ಬಿತ್ತರಿಸುತ್ತಿದ್ದಂತೆ, ವಿರೋಧ ಪಕ್ಷ ಬಿಜೆಪಿ ಸದನದಲ್ಲೇ ಇದನ್ನು ಪ್ರಶ್ನಿಸಿತು. ವಿಧಾನಸಭೆ ಕಲಾಪದಲ್ಲಿ ಈ ವಿಷಯದ ಮೇಲೆ ವಾಕ್ಸಮರವೂ ನಡೆಯಿತು. 

ಭೋಜನ ವಿರಾಮದ ಬಳಿಕ ವಿಧಾನಸಭೆಯಲ್ಲಿ ಈ ವಿಷಯ ವಿರೋಧಪಕ್ಷಗಳಿಗೆ ಪ್ರಬಲ ಅಸ್ತ್ರವಾಯಿತು. ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ರಾಜಣ್ಣ ಅವರ ವಜಾಕ್ಕೆ ಕಾರಣ ಕೇಳಿ ಸರ್ಕಾರವನ್ನು ಒತ್ತಾಯಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದು ಉತ್ತರ ನೀಡುತ್ತಾರೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಮತ್ತು ಕೆ.ಎನ್‌.ರಾಜಣ್ಣ ಸಮಜಾಯಿಷಿ ನೀಡಿದರು. ಆದರೆ, ಕಲಾಪ ಮುಗಿಯುವವರೆಗೆ ಸಿದ್ದರಾಮಯ್ಯ ಸದನದ ಒಳಗೆ ಬರಲೇ ಇಲ್ಲ.

ವಿವಾದದ ದಾರಿಗುಂಟ ರಾಜಣ್ಣ 

  • ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ

  • ಅಧಿಕಾರ ಹಂಚಿಕೆ ಚರ್ಚೆ ನಡೆದಿಲ್ಲ, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ

  • ಸಾಮಾಜಿಕ ನ್ಯಾಯಕ್ಕಾಗಿ ಮೂವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು 

  • ಲೋಕಸಭೆ ಚುನಾವಣೆ ಮುಗಿದರೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಏಕಿಲ್ಲ?  

  • ನಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ

  • ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಸುರ್ಜೇವಾಲಾ ನನಗೇನು ತಾಕೀತು ಮಾಡುತ್ತಾರೆ?

  • ಕೆಲವರು ನನ್ನನ್ನು ಹನಿಟ್ರ್ಯಾಪ್‌ನ ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿದ್ದರು. ಈ ಬಗ್ಗೆ ದಾಖಲೆಗಳಿವೆ.

  • ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್–2025ರ ನಂತರ ಕ್ರಾಂತಿ ಆಗಲಿದೆ

2 ವರ್ಷದಲ್ಲಿ ಎರಡನೇ ವಿಕೆಟ್ ಪತನ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆಯುವಷ್ಟರಲ್ಲಿ ಎರಡನೇ ಸಚಿವರು ತಮ್ಮ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಮತ ಕಳವು ಹೇಳಿಕೆಗೆ ಸಂಬಂಧಿಸಿದಂತೆ ರಾಜಣ್ಣ ಅವರ ವಜಾಗೆ ಸಿದ್ದರಾಮಯ್ಯ ಅವರೇ ಶಿಫಾರಸು ಮಾಡಿದ್ದು, ಸಂಪುಟದ ಎರಡನೇ ವಿಕೆಟ್‌ ಪತನವಾಗಿದೆ.
ರಾಜಣ್ಣ ಹೇಳಿದ್ದೇನು?
ಲೋಕಸಭೆ ಚುನಾವಣೆಯಲ್ಲಿ ಮತ ಕಳವು ನಡೆದಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರೂ ಕಣ್ಣುಮುಚ್ಚಿ ಕುಳಿತಿದ್ದರೇ? ಮತ ಕಳುವಿನ ವಿಚಾರ ಮಾತನಾಡಲು ಹೋದರೆ ಮಾತನಾಡಬೇಕಾಗುತ್ತದೆ. ಅದು ಬೇರೆ–ಬೇರೆ ಆಗುತ್ತದೆ. ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇದ್ದೇವಲ್ಲ ಎಂಬ ಬಗ್ಗೆ ನಾಚಿಕೆ ಆಗಬೇಕು. ನಮ್ಮ ಕಣ್ಣು ಮುಂದೆ ಅಕ್ರಮಗಳು ನಡೆದಿರುವುದನ್ನು ನೋಡಿದರೆ ನಮಗೆ ಅವಮಾನ ಆಗಬೇಕು. ಆಗ ಸುಮ್ಮನೆ ಇದ್ದು, ಈಗ ಹೇಳುತ್ತಿದ್ದೇವೆ. ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದೆ ಎಚ್ಚರಿಕೆಯಿಂದ ಇರುತ್ತೇವೆ. (ಆಗಸ್ಟ್ 9ರಂದು ತುಮಕೂರಿನಲ್ಲಿ ಹೇಳಿದ್ದು)
ರಾಹುಲ್ ಅವರ ‘ಮತ ಕಳ್ಳತನ’ದ ಸುಳ್ಳಿಗೆ ಕನ್ನಡಿ ಹಿಡಿದಿದ್ದೇ ರಾಜಣ್ಣ ಅವರ ತಪ್ಪಾ? ಸತ್ಯ ಹೇಳಿದ್ದಕ್ಕೆ ರಾಜೀನಾಮೆ ಶಿಕ್ಷೆನಾ? ಸಿದ್ದರಾಮಯ್ಯಗೆ ಸತ್ಯಕ್ಕಿಂತ ಹೈಕಮಾಂಡ್‌ ಗುಲಾಮಗಿರಿಯೇ ಹೆಚ್ಚಾಗಿದ್ದು ದುರಂತ
ಆರ್‌.ಅಶೋಕ, ವಿರೋಧಪಕ್ಷದ ನಾಯಕ

ಷಡ್ಯಂತ್ರದ ಬಗ್ಗೆ ಕಾಲ ಬಂದಾಗ ಹೇಳುವೆ: ರಾಜಣ್ಣ

‘ಇದರ ಹಿಂದೆ ಪಿತೂರಿ, ಷಡ್ಯಂತ್ರ ಇದೆ. ಎಲ್ಲವನ್ನೂ ಕಾಲ ಬಂದಾಗ ತಿಳಿಸುತ್ತೇನೆ’ ಎಂದು ಕೆ.ಎನ್. ರಾಜಣ್ಣ ಹೇಳಿದರು.

ಸಿದ್ದರಾಮಯ್ಯ ಅವರನ್ನು ‘ಕಾವೇರಿ’ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸಚಿವರಾದ ಸತೀಶ ಜಾರಕಿಹೊಳಿ, ಎಂ.ಸಿ. ಸುಧಾಕರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್‌ ಜತೆಯಲ್ಲಿ ಸುದ್ದಿಗಾರರೊಂದಿಗೆ ರಾಜಣ್ಣ ಮಾತನಾಡಿದರು.‌

‘ಇದು ಪಕ್ಷದ ತೀರ್ಮಾನ. ಪ್ರಶ್ನೆ ಮಾಡುವುದಿಲ್ಲ. ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ನಮ್ಮ ಅಧ್ಯಕ್ಷರಿಗೆ (ಮಲ್ಲಿಕಾರ್ಜುನ ಖರ್ಗೆ) ತಪ್ಪು ಗ್ರಹಿಕೆ ನಿವಾರಣೆ ಮಾಡಲು ದೆಹಲಿಗೆ ಹೋಗುತ್ತೇನೆ’ ಎಂದರು.

‘ರಾಹುಲ್ ಗಾಂಧಿ ಈ ದೇಶದ ನಾಯಕ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳಲು ಸಂತೋಷ ಇದೆ. ಮುಖ್ಯಮಂತ್ರಿಗೆ ಶಕ್ತಿ ತುಂಬಲು ರಾಜೀನಾಮೆ ನೀಡಿದ್ದೇನೆ’ ಎಂದು ಕೈ ಮುಗಿದು ತೆರಳಿದರು.

ಪಕ್ಷದ ತೀರ್ಮಾನ: ಡಿಕೆಶಿ

‘ಸಚಿವ ಸಂಪುಟದಿಂದ ರಾಜಣ್ಣ ಅವರ ವಜಾ ಪಕ್ಷದ ತೀರ್ಮಾನ. ಇದರ ಹೊರತಾಗಿ ಬೇರೆ ವಿಚಾರ ನನಗೆ ತಿಳಿದಿಲ್ಲ’ ಎಂದು ಕೆ‍ಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದರಿಂದ ನನಗೂ ನೋವಾಗಿದೆ. ರಾಜಣ್ಣ ಅವರು ನನ್ನ ಒಳ್ಳೆಯ ಸ್ನೇಹಿತರು, ಆಪ್ತರು. 25 ವರ್ಷಗಳಿಂದ ಜೊತೆಯಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ’ ಎಂದರು.

‘ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹೈಕಮಾಂಡ್‌ನಿಂದ ಸೂಚನೆ ಏನಾದರೂ ಬಂದಿತ್ತೇ’ ಎಂಬ ಪ್ರಶ್ನೆಗೆ,‌ ‘ಶಾಸಕರು ಮತ್ತು ಮಂತ್ರಿಗಳು ನನ್ನ ಕಾರ್ಯವ್ಯಾಪ್ತಿಗೆ ಬರುವುದಿಲ್ಲ. ಶಾಸಕರಾದ ನಂತರ ಪಕ್ಷಕ್ಕೆ ಸಂಬಂಧಪಟ್ಟಂತೆ ಅಶಿಸ್ತು ತೋರಿದರೆ ಸಣ್ಣಪುಟ್ಟ ನೋಟಿಸ್ ನೀಡುವ ಕೆಲಸ ಮಾಡಲಾಗುತ್ತದೆ.‌ ಇದರ ಹೊರತಾಗಿ ಸಿಎಲ್‌ಪಿ ನಾಯಕರೇ (ಸಿದ್ದರಾಮಯ್ಯ) ಮಂತ್ರಿಗಳು ಹಾಗೂ ಶಾಸಕರ ಮೇಲೆ ನಿಯಂತ್ರಣ ಹೊಂದಿರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.