ADVERTISEMENT

ತಕ್ಷಣವೇ ಸಿಗಲಿದೆ ಮ್ಯುಟೇಶನ್ ಪ್ರತಿ: ಸ್ವಯಂ ಚಾಲಿತ ವ್ಯವಸ್ಥೆಗೆ ಸಚಿವರ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 15:35 IST
Last Updated 24 ಫೆಬ್ರುವರಿ 2026, 15:35 IST
   

ಬೆಂಗಳೂರು: ಕೃಷಿ ಭೂಮಿ ಸೇರಿದಂತೆ ಯಾವುದೇ ಸ್ವತ್ತಿಗೆ ಸ್ವಯಂ ಚಾಲಿತವಾಗಿ ಮ್ಯುಟೇಷನ್‌ ಪಡೆಯಬಹುದಾದ ಹೊಸ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಂಗಳವಾರ ಚಾಲನೆ ನೀಡಿದರು.

ಎಲ್ಲ 7 ದಿನಗಳ ಮತ್ತು 15 ದಿನಗಳ ನೋಟಿಸ್‌ ಅವಧಿ ಹೊಂದಿರುವ ಮ್ಯುಟೇಶನ್‌ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂ ಚಾಲಿತ ತಂತ್ರಾಂಶದ ಮೂಲಕ ಸರ್ವರ್ ಸಹಿ  ಇರುವ ಮ್ಯುಟೇಷನ್‌ ಪಡೆಯಬಹುದಾಗಿದೆ. ಇದರಿಂದಾಗಿ ಕ್ರಯ, ವಿಭಾಗ, ದಾನ, ಪೌತಿ, ಉಯಿಲುಗಳ ಮ್ಯುಟೇಶನ್‌ ಸ್ವಯಂಚಾಲಿತವಾಗಿ ಪಡೆಯಬಹುದು. 

ಒಂದು ವೇಳೆ 7 ಕೆಲಸದ ದಿನಗಳು ಅಥವಾ 15 ಕೆಲಸದ ದಿನಗಳ ನೋಟಿಸ್‌ ಅವಧಿಯೊಳಗೆ ಕಂದಾಯ ನಿರೀಕ್ಷಕರು (ಸರ್ಕಾರಿ ಆಕ್ಷೇಪ) ಅಥವಾ ಸಾರ್ವಜನಿಕರು ತಕರಾರು ಸಲ್ಲಿಸಿದರೆ, ಅಂತಹ ಮ್ಯುಟೇಶನ್‌ಗಳನ್ನು ಪೂರ್ಣಗೊಳಿಸದೆ, ಆರ್‌ಸಿಸಿಎಂಎಸ್‌ ತಂತ್ರಾಂಶದ ಮೂಲಕ ತಹಶೀಲ್ದಾರ್‌ ನ್ಯಾಯಾಲಯಕ್ಕೆ  ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ADVERTISEMENT

ಈ ಹಿಂದೆ ಮ್ಯುಟೇಶನ್‌ಗಳಿಗೆ ಆಕ್ಷೇಪಣೆ ಇದ್ದಲ್ಲಿ ಅಥವಾ ಅನುಮೋದನೆ ನೀಡಬೇಕಾದಲ್ಲಿ, ರಾಜಸ್ವ ನಿರೀಕ್ಷಕರು ಖುದ್ದಾಗಿ ತಾಲ್ಲೂಕು ಕಚೇರಿಗಳಿಗೆ ಬಂದು ಸಲ್ಲಿಸಬೇಕಾಗಿತ್ತು. ಈಗ ರಾಜಸ್ವ ನಿರೀಕ್ಷಕರಿಗೆ ಲಾಗಿನ್‌ ನೀಡಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ನೀಡಲಾಗಿದೆ.

ಜನಪರ ಆಡಳಿತದ ಮತ್ತೊಂದು ಹೆಜ್ಜೆ:

ಈ ಕುರಿತು ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ‘ಈ ಹೊಸ ವ್ಯವಸ್ಥೆಯಿಂದ ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆ ಬಾಗಿಲಿಗೇ ತಲುಪಿಸಬೇಕು ಎಂಬ ಸರ್ಕಾರದ ಉದ್ದೇಶ ಈಡೇರಿದೆ. ಈ ಸೇವೆಯನ್ನು ಒಂದು ತಿಂಗಳಿನಿಂದ ಮಂಡ್ಯದಲ್ಲಿ ಅನುಷ್ಠಾನಗೊಳಿಸಿ, ಸಾಧಕ–ಬಾಧಕ ಪರಿಶೀಲಿಸಿದ್ದೇವೆ. ಇವತ್ತಿನಿಂದಲೇ ಶೇ 98 ರಷ್ಟು ಎಲ್ಲಾ ಖಾತೆ ಬದಲಾವಣೆಗಳೂ ಸ್ವಯಂ ಚಾಲಿತಗೊಳ್ಳಲಿವೆ’ ಎಂದರು.

ಕೆಲ ಅಧಿಕಾರಿಗಳ ಸ್ವೇಚ್ಛಾಚಾರದಿಂದ ಮತ್ತು ಮಧ್ಯವರ್ತಿಗಳ ಕಿರುಕುಳದಿಂದ ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದರು. ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತಿತ್ತು. ಸ್ವಯಂ ಚಾಲಿತ ಮ್ಯುಟೇಷನ್‌ನಿಂದ ಈ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಸಿಕ್ಕಿದಂತಾಗಿದೆ. ಇನ್ನು ಮುಂದೆ ಜನ ಸಾಮಾನ್ಯರು ಖಾತೆ ಬದಲಾವಣೆಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್‌ ಮೂಲಕ ಆನ್‌ಲೈನ್‌ನಲ್ಲೇ ತಮ್ಮ ಖಾತೆ ಬದಲಾವಣೆ ಕೆಲಸಗಳನ್ನು ನಿರ್ವಹಿಸಬಹುದು ಎಂದು ಕೃಷ್ಣಬೈರೇಗೌಡ ಹೇಳಿದರು.

‘2024ನೇ ಏಪ್ರಿಲ್‌ 1ರಿಂದ 2026ರ ಫೆಬ್ರುವರಿ 20ರವರೆಗಿನ ಅವಧಿಯಲ್ಲಿ 35,11,987 ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತವಾಗಿ ಮಾಡಿದ್ದೇವೆ. ಖಾತೆ ಬದಲಾವಣೆಗೆ ಮೊದಲೆಲ್ಲಾ ಕಂದಾಯ ನಿರೀಕ್ಷರು ಕಚೇರಿಗೆ ಬಂದು ಬೆರಳಚ್ಚು ಕೊಡುವವರೆಗೆ ಈ ಕೆಲಸಗಳು ಆಗುತ್ತಿರಲಿಲ್ಲ. ಆದರೆ, ಈಗ ಅಧಿಕಾರಿಗಳ ಡಿಜಿಟಲ್‌ ಸಹಿಯ ಮೂಲಕ ಎಲ್ಲ ಕೆಲಸವೂ ಆನ್‌ಲೈನ್‌ನಲ್ಲೇ ಆಗುತ್ತಿದೆ. ಖಾತೆ ಬದಲಾವಣೆ ಮತ್ತು ತಕರಾರು ಸಲ್ಲಿಸಲು ಅಧಿಕಾರಿಗಳು ಕಚೇರಿಗೆ ಬರುವ ಅಗತ್ಯವೂ ಇಲ್ಲ. ಅವರ ಸಮಯವೂ ಉಳಿಯುತ್ತದೆ’ ಎಂದು ಅವರು ಹೇಳಿದರು.

ಪಹಣಿ ಜತೆ ಆಧಾರ್‌ ಜೋಡಣೆಗೆ ಮನವಿ

ಪಹಣಿಗಳಿಗೆ (ಆರ್‌ಟಿಸಿ) ಆಧಾರ್ ಅನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಸಚಿವ ಕೃಷ್ಣಬೈರೇಗೌಡ ಮನವಿ ಮಾಡಿದರು.

ಪಹಣಿ ಜತೆ ಆಧಾರ್‌ ಜೋಡಣೆಯಾದರೆ ಪಹಣಿಯಲ್ಲಿ ಏನೇ ಬದಲಾವಣೆ ಆದರೂ ಆ ಸಂದೇಶವನ್ನು ಆಸ್ತಿ ಮಾಲಿಕರ ಮೊಬೈಲ್‌ಗೆ ಕಳಿಸಲಾಗುತ್ತದೆ. ಆಗ ಆಸ್ತಿ ಮಾಲೀಕರ ಗಮನಕ್ಕೆ ಬಾರದೆ ನಡೆಯುವ ಖಾತೆ ಬದಲಾವಣೆ ಅಥವಾ ಮಾರಾಟವನ್ನು ತಡೆಯಬಹುದು. ಆ ಮೂಲಕ ಆಸ್ತಿ ಮಾಲೀಕತ್ವಕ್ಕೆ ಖಾತರಿ ಪಡೆಯಬಹುದು. ಅಲ್ಲದೇ, ನ್ಯಾಯಾಲಯ ಆದೇಶ ನಮೂದಿಸಿದರೆ ಅಥವಾ ಪಹಣಿಯಲ್ಲಿ ಬೇರೆಯವರ ಹೆಸರು ಸೇರಿಸಿದರೂ ಎಸ್‌ಎಂಎಸ್‌ ಮೂಲಕ ಮಾಹಿತಿ ಬರುತ್ತದೆ ಎಂದು ಅವರು ಹೇಳಿದರು.

ಆಧಾರ್ ಜೋಡಣೆ ಮಾಡದಿದ್ದರೆ ಆಸ್ತಿ ಮಾಲೀಕರ ಗಮನಕ್ಕೆ ಬಾರದೆ ಖಾತೆ ಬದಲಾವಣೆ ಆಗುವ ಅಪರೂಪದ ಸಾಧ್ಯತೆಗಳಿವೆ. ಹೀಗಾಗಿ ಮಾಲೀಕತ್ವ ಸುಭದ್ರವಾಗಿರಬೇಕಾದರೆ ಮೊದಲು ಪಹಣಿ ಜತೆಗೆ ಆಧಾರ್ ಜೋಡಿಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.