ADVERTISEMENT

‘ಸಿಎಂ ದೆಹಲಿಗೆ ಏಕೆ ಹೋಗಿದ್ದಾರೋ ಗೊತ್ತಿಲ್ಲ; ಖಂಡಿತ ಒಳ್ಳೆ ಸುದ್ದಿ ಬರುತ್ತೆ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 11:25 IST
Last Updated 10 ಜನವರಿ 2021, 11:25 IST
   

ಧಾರವಾಡ: ‘ಮುಖ್ಯಮಂತ್ರಿ ದೆಹಲಿಗೆ ಏಕೆ ಹೋಗಿದ್ದಾರೋ ಗೊತ್ತಿಲ್ಲ. ಆದರೆ ದೆಹಲಿಯಿಂದ ಖಂಡಿತ ಒಳ್ಳೆ ಸುದ್ದಿ ಬರುತ್ತೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭಾನುವಾರ ಇಲ್ಲಿ ಹೇಳಿದರು.

ಜಿಲ್ಲಾ ಪಂಚಾಯ್ತಿಯ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿ ನಾಯಕರು ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯದನ್ನೇ ಮಾಡಿ ಕಳುಹಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಎಲ್ಲಾ ಶಾಸಕರಿಗೂ ಮಂತ್ರಿ ಆಗುವ ಬಯಕೆ ಇರುತ್ತದೆ. ಆದರೆ ಅದಕ್ಕೊಂದು ಮಿತಿ ಇರಬೇಕು. ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಪಕ್ಷಕ್ಕೆ ಹಲವು ಬಂದಿದ್ದಾರೆ. ಅವರ ಋಣ ತೀರಿಸಬೇಕಿದೆ. ಪಕ್ಷಕ್ಕೆ ಸೇರಿದವರೆಲ್ಲರೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಅವರು ಹೊರಗಿನಿಂದ ಬಂದವರು ಎಂದು ನಮಗೆ ಅನಿಸುತ್ತಿಲ್ಲ’ ಎಂದರು.

ADVERTISEMENT

ಸಂಕ್ರಾಂತಿ ನಂತರ ಬದಲಾವಣೆ ಎಂಬ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಲಿಂಗಾಯತ ಸಮಾಜದ ಮೀಸಲಾತಿ ಕುರಿತು ಅವರು ಆ ಹೇಳಿಕೆ ನೀಡಿದ್ದಾರಂತೆ. ಆದರೆ ಅವರ ಹಿಂದಿನ ಹೇಳಿಕೆಗಳ ಕುರಿತು ಈಗಾಗಲೇ ಶಿಸ್ತು ಕ್ರಮಕ್ಕೆ ಪಕ್ಷದ ರಾಜ್ಯಾಧ್ಯಕ್ಷರು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.