
ಬೆಂಗಳೂರು: 2025ರ ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ರಾಜ್ಯಕ್ಕೆ ಹೊಸದಾಗಿ ₹1.53 ಲಕ್ಷ ಕೋಟಿಯಷ್ಟು ಹೂಡಿಕೆ ಹರಿದುಬಂದಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ರಾಜ್ಯಕ್ಕೆ ಹೂಡಿಕೆಯನ್ನು ಆಕರ್ಷಿಸಲು ಹಲವು ಹಂತದಲ್ಲಿ ಕೆಲಸ ಮಾಡಲಾಗುತ್ತಿದೆ. ಜಾಗತಿಕ ಹೂಡಿಕೆದಾರರ ಸಮಾವೇಶ, ಏಕ ಗವಾಕ್ಷಿ ವ್ಯವಸ್ಥೆ ಎಲ್ಲದರ ಫಲವಾಗಿ 11 ತಿಂಗಳಲ್ಲಿ ₹1.53 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಬಂದಿದೆ’ ಎಂದು ಮಾಹಿತಿ ನೀಡಿದರು.
‘ತಯಾರಿಕೆ, ಮರುಬಳಕೆ ಇಂಧನ, ದತ್ತಾಂಶ ಕೇಂದ್ರಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರದ (ಜಿಸಿಸಿ) ವಲಯದಲ್ಲಿ ಹೆಚ್ಚಿನ ಬಂಡವಾಳ ಹರಿದುಬರುತ್ತಿದೆ. ದೇಶ ಮತ್ತು ವಿದೇಶಗಳ ಅಗ್ರಗಣ್ಯ ಉದ್ಯಮಗಳು ಈ ಕ್ಷೇತ್ರದಲ್ಲಿ ಹೂಡಿಕೆಗೆ ಕಾರ್ಯಯೋಜನೆ ರೂಪಿಸಿವೆ. ಕೆಲವೇ ದಿನಗಳಲ್ಲಿ ಇವೆಲ್ಲವೂ ಜಾರಿಯಾಗಲಿವೆ’ ಎಂದರು ವಿವರಿಸಿದರು.
‘ದೇವನಹಳ್ಳಿಯಲ್ಲಿ ದತ್ತಾಂಶ ಕೇಂದ್ರ ಸ್ಥಾಪನೆಗೆ ಎನ್‌ಟಿಟಿಯಿಂದ ₹4,000 ಕೋಟಿ, ನಂಜನಗೂಡಿನಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆಗೆ ಎಟಿ ಆ್ಯಂಡ್ ಎಸ್‌ನಿಂದ ₹2,850 ಕೋಟಿ, ಗೂಗಲ್‌ನಿಂದ ಬೆಂಗಳೂರಿನಲ್ಲಿ ₹2,500 ಕೋಟಿ, ಎಸ್‌ಎಪಿಯಿಂದ ದೇವನಹಳ್ಳಿಯಲ್ಲಿ ₹1,960 ಕೋಟಿ ಹೂಡಿಕೆ ಮತ್ತು ಮಂಗಳೂರು, ಹುಬ್ಬಳ್ಳಿಯಲ್ಲಿ ದತ್ತಾಂಶ ಕೇಂದ್ರ ಸ್ಥಾಪನೆಗೆ ಡೇಟಾ ಸಮುದ್ರ ಕಂಪನಿಯಿಂದ ₹1,350 ಕೋಟಿ ಹೂಡಿಕೆ ಆಗಲಿದೆ’ ಎಂದು ತಿಳಿಸಿದರು.
‘ಜಿಗಣಿಯಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ತಯಾರಿಕಾ ಘಟಕ ವಿಸ್ತರಣೆಗೆ ಟೋಯಾಟಾದಿಂದ ₹1,330 ಕೋಟಿ, ಕ್ಯುಪೈಎಐ ಕಂಪನಿಯು ಬೆಂಗಳೂರಿನಲ್ಲಿ ಕ್ವಾಂಟಂ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ₹1,136 ಕೋಟಿ, ಪಿಸಿಬಿಯ ತಾಮ್ರದ ಲ್ಯಾಮಿನೇಟ್ ತಯಾರಿಕಾ ಘಟಕ ಸ್ಥಾಪನೆಗೆ ವಿಪ್ರೊದಿಂದ ₹499 ಕೋಟಿ ಮತ್ತು ಝೆನ್–ಫೋಲ್ಡ್ ಬಯೋಸೈನ್ಸಸ್ ಲಿಮಿಟೆಡ್‌ನಿಂದ ಔಷಧ ಕಚ್ಚಾವಸ್ತುಗಳ ತಯಾರಿಕಾ ಘಟಕ ಸ್ಥಾಪನೆಗೆ ₹490 ಕೋಟಿ ಹೂಡಿಕೆ ಆಗಲಿದೆ’ ಎಂದು ವಿವರಿಸಿದರು.
₹66293 ಕೋಟಿ ತಯಾರಿಕೆ ವಲಯ
₹20913 ಕೋಟಿ ನವೀಕರಿಸಬಹುದಾದ ಇಂಧನ
₹12500 ಕೋಟಿ ಜಾಗತಿಕ ಸಾಮರ್ಥ್ಯ ಕೇಂದ್ರ
₹6350 ಕೋಟಿ ದತ್ತಾಂಶ ಕೇಂದ್ರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.