ADVERTISEMENT

ಹೂಡಿಕೆ,ವಿಸ್ತರಣೆಗೆ ದಾವೋಸ್‌ ಭೂಮಿಕೆ: 40ಕ್ಕೂ ಹೆಚ್ಚು ಕಂಪನಿಗಳ ಜತೆ ಸಭೆ–ಎಂಬಿಪಾ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 15:34 IST
Last Updated 31 ಜನವರಿ 2026, 15:34 IST
ಗುಂಜನ್ ಕೃಷ್ಣ, ಎಂ.ಬಿ. ಪಾಟೀಲ, ಸೆಲ್ವಕುಮಾರ್ 
ಗುಂಜನ್ ಕೃಷ್ಣ, ಎಂ.ಬಿ. ಪಾಟೀಲ, ಸೆಲ್ವಕುಮಾರ್    

ಬೆಂಗಳೂರು: ‘ರಾಜ್ಯದಲ್ಲಿ ವೈಮಾನಿಕ ಮತ್ತು ರಕ್ಷಣೆ, ಸುಧಾರಿತ ತಯಾರಿಕಾ ವಲಯ, ಪಾನೀಯ ಮತ್ತು ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ, ಜೀವ ವಿಜ್ಞಾನ, ದತ್ತಾಂಶ ಕೇಂದ್ರಗಳು, ಡಿಜಿಟಲ್ ಮೂಲಸೌಲಭ್ಯ, ಶುದ್ಧ ಇಂಧನ ಮುಂತಾದ ವಲಯಗಳಲ್ಲಿ ಹೂಡಿಕೆ ಸಂಬಂಧಿಸಿದಂತೆ 25ಕ್ಕೂ ಹೆಚ್ಚು ಬಹುರಾಷ್ಟ್ರೀಯ ಮತ್ತು 15ಕ್ಕೂ ಹೆಚ್ಚು ಭಾರತೀಯ ಕಂಪನಿಗಳ ಜೊತೆ ದಾವೋಸ್‌ನಲ್ಲಿ ಸಭೆ ನಡೆಸಲಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಭಾಗವಹಿಸಿ ಮರಳಿರುವ ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಮಾಹಿತಿ ಹಂಚಿಕೊಂಡರು.

‘ರಾಜ್ಯದಲ್ಲಿ ಹೊಸ ಬಂಡವಾಳ ಹೂಡಿಕೆ, ಉದ್ಯಮ ವಿಸ್ತರಣೆ ಮತ್ತು ಪಾಲುದಾರಿಕೆಗಳು ತ್ವರಿತವಾಗಿ ಸಾಕಾರಗೊಳ್ಳಲು ಈ ಸಮಾವೇಶವು ಉತ್ತಮ ಭೂಮಿಕೆ ಸಿದ್ಧಪಡಿಸಿದೆ. ಆದರೆ, ದೇಶಿ ಉದ್ಯಮಗಳ ಜೊತೆ ಯಾವುದೇ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಬಾರದೆಂಬ ‌ನಿರ್ಧಾರಕ್ಕೆ ಬರಲಾಗಿತ್ತು. ಬದಲಿಗೆ ಭವಿಷ್ಯದ ಹೂಡಿಕೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ’ ಎಂದರು.

ADVERTISEMENT

‘ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ, ವಿಸ್ತರಣೆಯ ವಾಗ್ದಾನಗಳನ್ನು ಆದ್ಯತೆಯಲ್ಲಿ ಕಾರ್ಯಗತಗೊಳಿಸಲು ವಿವಿಧ ಕಂಪನಿಗಳ ಮುಖ್ಯಸ್ಥರು ಒಲವು ತೋರಿಸಿದ್ದಾರೆ. ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಅಳವಡಿಸಿಕೊಂಡಿರುವ ಸರ್ಕಾರದ ಧೋರಣೆಯನ್ನು ಉದ್ಯಮ ದಿಗ್ಗಜರು ಶ್ಲಾಘಿಸಿದರು’ ಎಂದರು.

‘ರಾಜ್ಯಕ್ಕೆ ಜಂಟಿಯಾಗಿ ಹೂಡಿಕೆಗಳನ್ನು ಆಕರ್ಷಿಸುವುದರ ಬಗ್ಗೆ ಲಿಚೆಂಟೈನ್‌ ಮತ್ತು ಸಿಂಗಪುರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ. ಎಐ, ರೋಬೊಟಿಕ್ಸ್‌, ಕ್ವಾಂಟಂ ಮತ್ತಿತರ ಭವಿಷ್ಯದ ತಂತ್ರಜ್ಞಾನಗಳು ಒಡ್ಡಿರುವ ಸವಾಲುಗಳನ್ನು ಎದುರಿಸುವ ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆಯೂ ದಾವೋಸ್‌ ಭೇಟಿಯಲ್ಲಿ ಮನವರಿಕೆ ಆಯಿತು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿದೆ’ ಎಂದು ಸಚಿವರು ತಿಳಿಸಿದರು.

‘ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್‌, ಕ್ವಾಂಟಂ ತಂತ್ರಜ್ಞಾನದಂತಹ ಭವಿಷ್ಯದ ತಂತ್ರಜ್ಞಾನಗಳು ಈಗ ಸಾಫ್ಟ್‌ವೇರ್‌ಗಷ್ಟೇ ಸೀಮಿತವಾಗಿಲ್ಲ. ತಯಾರಿಕಾ ವಲಯಕ್ಕೂ ಕಾಲಿಟ್ಟಿವೆ. ಉದ್ಯೋಗ ಅವಕಾಶಗಳು ಕಡಿಮೆಯಾಗುವ ಭೀತಿ ಸೃಷ್ಟಿಸಿವೆ. ಭವಿಷ್ಯದ ತಂತ್ರಜ್ಞಾನಗಳು ಒಳಿತಿನ ಜೊತೆಗೆ ಕೆಲವು ಕೆಡುಕುಗಳನ್ನೂ ಒಳಗೊಂಡಿವೆ. ನಮ್ಮಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇರುವ ಯುವಜನರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ನಾವು ಆದ್ಯತೆ ನೀಡುತ್ತಿದ್ದೇವೆ’ ಎಂದು ಅವರು ಹೇಳಿದರು.

‘ರಾಜ್ಯದ ಮಹತ್ವಕಾಂಕ್ಷೆಯ ʼಕ್ವಿನ್‌ ಸಿಟಿʼ ಯೋಜನೆಯ ಭಾಗವಾಗುವುದಕ್ಕೆ ಟಾಟಾ ಸನ್ಸ್‌ ಆಸಕ್ತಿ ವ್ಯಕ್ತಪಡಿಸಿದೆ. ಈ ಸಂಬಂಧ ಮಾತುಕತೆ ಮುಂದುವರೆಸಲು ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಒಲವು ವ್ಯಕ್ತಪಡಿಸಿದ್ದಾರೆʼ ಎಂದು ಸಚಿವರು ವಿವರಿಸಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಒ ಜೋತ್ಸ್ನಾ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಉಪಸ್ಥಿತರಿದ್ದರು.

‘ಬೆಂಗಳೂರಿನಾಚೆಗೂ ಹೂಡಿಕೆಗೆ ಒಲವು’
‘ರಾಜ್ಯದ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಹೂಡಿಕೆ ಹಾಗೂ ವಿಸ್ತರಣೆ ಬಗ್ಗೆ ಹಲವು ಕಂಪನಿಗಳು ಒಲವು ವ್ಯಕ್ತಪಡಿಸಿವೆ’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು. ‘ಬೆಂಗಳೂರು ಆಚೆಗಿನ ನಗರಗಳು ಬೆಳೆಯಲು ರಾಜ್ಯ ಸರ್ಕಾರ ನೀಡುತ್ತಿರುವ ಆದ್ಯತೆಗೆ ಪೂರಕವಾಗಿ 2ನೇ ಸ್ತರದ ನಗರಗಳಲ್ಲಿ ವಿಸ್ತರಣೆಗೆ ಟೆಕ್‌ ಮಹೀಂದ್ರಾ ಡೇಟಾ ಕೇಂದ್ರಗಳನ್ನು ಸ್ಥಾಪಿಸಲು ಭಾರ್ತಿ ಎಂಟರ್‌ಪ್ರೈಸಸ್‌ ಮತ್ತು ಸಿಫಿ ಟೆಕ್ನಾಲಜೀಸ್‌ ಆಸಕ್ತಿ ತೋರಿಸಿವೆ. ಕೃತಕ ಬುದ್ಧಿಮತ್ತೆ (ಎಐ) ಡೇಟಾ ಸೆಂಟರ್‌ಗಳು ಸೆಮಿಕಂಡಕ್ಟರ್‌ಗಳು ಸ್ಪೇಸ್ ಟೆಕ್ ಇಂಡಸ್ಟ್ರಿ 4.0 ಒಳಗೊಂಡಂತೆ ಹೊಸ ತಲೆಮಾರಿನ ಕೈಗಾರಿಕೆಗಳಿಗೆ ರಾಜ್ಯವು ಆದ್ಯತೆಯ ತಾಣವಾಗಿದೆ ಎಂದು ಜಾಗತಿಕ ಹೂಡಿಕೆದಾರರು ಮತ್ತು ತಂತ್ರಜ್ಞಾನ ದಿಗ್ಗಜರಿಗೆ ಮನದಟ್ಟು ಮಾಡಿಕೊಡಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.