ADVERTISEMENT

ಸೂಟ್‌ಕೇಸ್‌ ಸಂಸ್ಕೃತಿ ಜೆಡಿಎಸ್‌ ಪಕ್ಷದ್ದು: ಕಂದಾಯ ಸಚಿವ ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 16:47 IST
Last Updated 3 ಸೆಪ್ಟೆಂಬರ್ 2021, 16:47 IST
ಕಂದಾಯ ಸಚಿವ ಆರ್‌. ಅಶೋಕ
ಕಂದಾಯ ಸಚಿವ ಆರ್‌. ಅಶೋಕ   

ಬೆಂಗಳೂರು: ಸೂಟ್‌ಕೇಸ್‌ ಸಂಸ್ಕೃತಿ ಜೆಡಿಎಸ್‌ ಪಕ್ಷದ್ದು. ಬಿಜೆಪಿಯಲ್ಲಿ ಹಣ ಕೊಡುವ ಮತ್ತು ಪಡೆಯುವ ಸಂಸ್ಕೃತಿ ಇಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ವಾಗ್ದಾಳಿ ನಡೆಸಿದರು.

‘ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸೂಟ್‌ಕೇಸ್‌ ಪಡೆಯಲು ಆಗಾಗ ಬಂದು, ಹೋಗುತ್ತಾರೆ’ ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ. ಪಕ್ಷ ಸಂಘಟನೆಗಾಗಿ ರಾಜ್ಯಕ್ಕೆ ಭೇಟಿ ನೀಡುವ ಅರುಣ್‌ ಸಿಂಗ್‌ ಕುರಿತು ಲಘುವಾಗಿ ಅರೋಪ ಮಾಡಿರುವುದನ್ನು ಖಂಡಿಸುತ್ತೇನೆ’ ಎಂದರು.

ಅರುಣ್‌ ಸಿಂಗ್‌ ಅವರು 30–40 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅಂತಹವರ ಕುರಿತು ಮಾತನಾಡುವಾಗ ಕುಮಾರಸ್ವಾಮಿ ಎಚ್ಚರಿಕೆ ವಹಿಸಬೇಕು. ಇಂತಹ ಹೇಳಿಕೆಗಳಿಂದ ಅವರ ಗೌರವವೇ ಕಡಿಮೆಯಾಗುತ್ತದೆ ಎಂದು ಹೇಳಿದರು.

ADVERTISEMENT

‘ಬಿ.ಎಸ್. ಯಡಿಯೂರಪ್ಪ ಅವರು ನಮ್ಮೆಲ್ಲರ ನಾಯಕ. ಅವರು ಪಕ್ಷದ ನಾಯಕರ ಜತೆ ಚರ್ಚಿಸಿದ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳುವ ಕುರಿತು ನಿರ್ಧರಿಸಲಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿಧಾನವಾಗಿ ಇಳಿಯಲಿದೆ: ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಕುರಿತು ಕೇಳಿದಾಗ, ‘ಪೆಟ್ರೋಲ್‌ ಮತ್ತು ಡೀಸೆಲ್‌ ದರ ನಿಧಾನವಾಗಿ ಇಳಿಯುತ್ತಿದೆ. ಅದರೊಂದಿಗೆ ಅಗತ್ಯ ವಸ್ತುಗಳ ಬೆಲೆಯೂ ಇಳಿಯಲಿದೆ. ಜನರು ಸಹಕಾರ ನೀಡಬೇಕು’ ಎಂದರು.

ಇಂದು ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ

ಮಳೆ ಮತ್ತು ಪ್ರವಾಹದಿಂದ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರದ ಅಧಿಕಾರಿಗಳ ತಂಡ ಶನಿವಾರ ಬೆಂಗಳೂರಿಗೆ ಬರಲಿದೆ. ಮಂಗಳವಾರದವರೆಗೂ ಈ ತಂಡ ವಿವಿಧೆ ಪ್ರವಾಸ ಮಾಡಿ, ಅಧ್ಯಯನ ನಡೆಸಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಅತಿವೃಷ್ಟಿ ಹಾಗೂ ಪ್ರವಾಹದಿಂದ ₹ 5,690 ಕೋಟಿ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರೀಯ ವಿಪತ್ತು ಪರಿಹಾರ ನಿಧಿಯಿಂದ ರಾಜ್ಯಕ್ಕೆ ₹ 765 ಕೋಟಿ ಪರಿಹಾರ ದೊರೆಯಬೇಕಿದೆ. ಅಧಿಕಾರಿಗಳ ತಂಡ ವರದಿ ಸಲ್ಲಿಸಿದ ಬಳಿಕ ಈ ಮೊತ್ತ ಬಿಡುಗಡೆಯಾಗಲಿದೆ ಎಂದರು.

ಭೂಮಾಪಕರ ನೇಮಕ: ರಾಜ್ಯದಲ್ಲಿ ಭೂಮಾಪನಕ್ಕೆ ಸಂಬಂಧಿಸಿದ ಎರಡು ಲಕ್ಷ ಕಡತಗಳು ಬಾಕಿ ಇವೆ. ಅವುಗಳ ತ್ವರಿತ ವಿಲೇವಾರಿಗಾಗಿ 820 ಭೂಮಾಪಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಇನ್ನೂ 600 ಭೂಮಾಪಕರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.