ADVERTISEMENT

ಗೋದಾಮುಗಳಲ್ಲಿ ಅಕ್ಕಿ ಕೊಳಿತಿದೆ... ಬಿಜೆಪಿಯವರಿಗೆ ನಾಚಿಕೆಯಾಗಬೇಕು: ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 11:28 IST
Last Updated 19 ಜೂನ್ 2023, 11:28 IST
   

ರಾಯಚೂರು: ‘ಬಡವರಿಗೆ ಹಂಚುವ ಉಚಿತ ಅಕ್ಕಿಯನ್ನು ರಾಜಕೀಯಕ್ಕೆ ಎಳೆದ ಬಿಜೆಪಿಯವರಿಗೆ ನಾಚಿಕೆ ಬರಬೇಕು. ಕೇಂದ್ರದ ಗೋದಾಮುಗಳಲ್ಲಿ ದಾಸ್ತಾನು ಇರುವ ಅಕ್ಕಿ ಕೊಳೆತಾ ಇದೆ. ಬಡವರ ಬಗ್ಗೆ ಬಿಜೆಪಿಗೆ ಕಿಂಚಿತ್ತೂ ಆಸಕ್ತಿ ಇಲ್ಲ’ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಹೊರ ವಲಯದಲ್ಲಿ ಅತಿಥಿಗೃಹದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಬಡವರಿಗೆ ಅಕ್ಕಿ ಕೊಡುವ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಬಿಜೆಪಿ ರಾಜಕೀಯ ದ್ವೇಷ ಸಾಧನೆಗೆ ಬಡವರಿಗೆ ಉಚಿತ ಅಕ್ಕಿ ವಿತರಣೆ ತಡೆಯಲು ಪ್ರಯತ್ನ ನಡೆಸಿದೆ. ಬಡವರ ಪರ ಎಂದು ಸುಳ್ಳು ಹೇಳುವ ಬಿಜೆಪಿಯ ಮುಖವಾಡ ಕಳಚಿದೆ’ ಎಂದು ಹೇಳಿದರು.

‘ಕೇಂದ್ರದ ಮೂಲಕ ಅಕ್ಕಿ ವಿತರಣೆ ಶುರು ಮಾಡಿದ್ದು ಸಹ ಕಾಂಗ್ರೆಸ್‌. ಆಹಾರ ಭದ್ರತೆ ಯೋಜನೆಯನ್ನು ಜಾರಿಗೆ ತಂದು ಪ್ರತಿಯೊಬ್ಬ ಬಡವನಿಗೂ ಅಕ್ಕಿ ದೊರೆಯುವಂತೆ ಮಾಡಿದೆ. ದೇಶದಲ್ಲಿ ಯಾರೊಬ್ಬರೂ ಉಪವಾಸ ಇರಬಾರದು ಎನ್ನುವುದು ಕಾಂಗ್ರೆಸ್‌ನ ಸಂಕಲ್ಪವಾಗಿದೆ. ಆದರೆ, ಬಿಜೆಪಿಗೆ ಇದು ಬೇಕಾಗಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಬಿಜೆಪಿ ಎಷ್ಟೇ ಟೀಕೆ ಟಿಪ್ಪಣ ಮಾಡಿದರೂ ಕಾಂಗ್ರೆಸ್‌ ಸರ್ಕಾರ ಬಡವರಿಗೆ ಸಿಂಹಪಾಲು ಯೋಜನೆ ತಲುಪಿಸುವ ಕೆಲಸ ಮಾಡಲಿದೆ’ ಎಂದು ಸ್ಪಷ್ಟಪಡಿಸಿದರು.

‘ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಏಮ್ಸ್‌ಗೆ ಜಾಗ ಸೇರಿದಂತೆ ಎಲ್ಲ ರೀತಿಯ ಸೌಕರ್ಯ ಕೊಡಲು ಸಿದ್ಧವಿದೆ. ಚೆಂಡು ಈಗ ಕೇಂದ್ರದ ಅಂಗಳದಲ್ಲಿ ಇದೆ’ ಎಂದು ತಿಳಿಸಿದರು.

‘ಮರಳು ಮಾಫಿಯಾದಿಂದಾಗಿಯೇ ದೇವದುರ್ಗ ತಾಲ್ಲೂಕಿನಲ್ಲಿ ಮೂವರು ಪ್ರಾಣ ಕಳೆದುಕೊಂಡ ಘಟನೆಯ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬಿಜೆಪಿ ವಿದ್ಯುತ್‌ ಬಿಲ್‌ ಹೆಚ್ಚಿಸಿದೆ

‘ಈ ತಿಂಗಳು ಬಂದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿನ ಬಿಲ್‌. ಆಗಸ್ಟ್‌ನಿಂದ ಕಾಂಗ್ರೆಸ್‌ ಅಸ್ತಿತ್ವಕ್ಕೆ ಬಂದಾಗಿನ ಬಿಲ್‌ ಬರಲಿದೆ. ಜನರಿಗೆ ವ್ಯತ್ಯಾಸ ಗೊತ್ತಾಗಲಿದೆ’ ಎಂದು ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.

‘ಮೊದಲ ದಿನ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಬಳಕೆದಾರರ ಹೆಸರು ನೋಂದಣಿಯಾಗಿಲ್ಲ. ತಾಂತ್ರಿಕ ದೋಷ ಸರಿ ಪಡಿಸಲಾಗುವುದು. ಮನೆಯ ಯಜಮಾನಿಗೆ ಆಗಸ್ಟ್‌ 15ರಿಂದ ₹ 2 ಸಾವಿರ ದೊರಕಲಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಕೊಟ್ಟ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.