ADVERTISEMENT

ಗ್ರಾಮ ಪಂಚಾಯಿತಿಗೊಂದು ಇಂಗ್ಲಿಷ್‌ ಶಾಲೆ ಕೊಡಿ: ಶಾಸಕ ಶಿವಲಿಂಗೇಗೌಡ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 15:35 IST
Last Updated 20 ಜುಲೈ 2023, 15:35 IST
ಕೆ.ಎಂ. ಶಿವಲಿಂಗೇಗೌಡ
ಕೆ.ಎಂ. ಶಿವಲಿಂಗೇಗೌಡ   

ಬೆಂಗಳೂರು: ರಾಜ್ಯದ ಪ್ರತಿ ಗ್ರಾಮಪಂಚಾಯಿತಿ ಕೇಂದ್ರದಲ್ಲೂ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಬೇಕು ಎಂದು ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದು ಪೋಷಕರು ಭಾವಿಸಿದ್ದಾರೆ. ಸರ್ಕಾರ ಅದಕ್ಕೆ ಮನ್ನಣೆ ನೀಡಲೇಬೇಕು ಎಂದರು.

ನಗರ ಪ್ರದೇಶದಲ್ಲಿ ಬೇಕಾದಷ್ಟು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿವೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಇಲ್ಲ. ಪಕ್ಷವು 5 ಗ್ಯಾರಂಟಿ ಜತೆಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಗ್ಯಾರಂಟಿಯನ್ನೂ ಘೋಷಿಸಬೇಕಿತ್ತು ಎಂದರು.

ADVERTISEMENT

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಸಾಕಷ್ಟು ಹಿನ್ನಡೆ ಕಂಡಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಬೆಳವಣಿಗೆ ಪ್ರಮಾಣ ಕುಸಿದಿದೆ. ಲೋಕೋಪಯೋಗಿ, ಜಲಸಂಪನ್ಮೂಲ ಸೇರಿ ಪ್ರಮುಖ ಇಲಾಖೆಗಳಲ್ಲಿ ನಾಲ್ಕೈದು ತಿಂಗಳಲ್ಲಿ ತರಾತುರಿಯಲ್ಲಿ ₹49,116 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಟೆಂಡರ್‌ ಕರೆಯಲಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಇದ್ದ ನಿರೀಕ್ಷೆಗಳು ಹುಸಿಯಾಗಿವೆ. ಅವರ ಕಾಲದಲ್ಲಿ ಆರ್ಥಿಕ ಶಿಸ್ತುಪಾಲನೆ ಆಗಿಲ್ಲ. ಆದ್ದರಿಂದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.