ADVERTISEMENT

ನಾಲ್ಕು ಮಕ್ಕಳಿಗೆ ಸೋಂಕು ಬಂತೆಂದು ‘ವಿದ್ಯಾಗಮ’ ವಿಫಲ ಎನ್ನಲಾಗದು: ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 3:22 IST
Last Updated 10 ಅಕ್ಟೋಬರ್ 2020, 3:22 IST
ಶಿಕ್ಷಣ ಸಚಿವ ಸುರೇಶ್‌ ಕುಮಾರ್‌
ಶಿಕ್ಷಣ ಸಚಿವ ಸುರೇಶ್‌ ಕುಮಾರ್‌    

ಬೆಂಗಳೂರು: ‘ನಾಲ್ವರು ಮಕ್ಕಳಿಗೆ ಸೋಂಕು ತಗುಲಿದೆ ಎಂಬ ಮಾತ್ರಕ್ಕೆ ವಿದ್ಯಾಗಮಯೋಜನೆಯೇ ವಿಫಲಎಂದು ಬಿಂಬಿಸುವುದು ಸರಿಯಲ್ಲ. ವಿದ್ಯಾಗಮ ಪರಿಪೂರ್ಣ ಮತ್ತು ಸುರಕ್ಷಿತ ಯೋಜನೆಯಾಗಿದೆ. ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ಕಲಿಕೆ ನಿರಂತರವಾಗಿರಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಸಮರ್ಥಿಸಿಕೊಂಡಿದ್ದಾರೆ.

ಕಲಬುರ್ಗಿ ಜಿಲ್ಲೆಯಮಾಶಾಳ ಗ್ರಾಮದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ವರದಿ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಮಾಶಾಳದ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಿಗೆ ತಿಂಗಳ ಹಿಂದೆ ಸೋಂಕು ತಗುಲಿದ್ದು, ಅವರು ಈಗ ಪೂರ್ಣ ಗುಣಮುಖರಾಗಿದ್ದಾರೆ. ಈ ಅವಧಿಯಲ್ಲಿ ಶಾಲೆಯ ಯಾವುದೇ ಶಿಕ್ಷಕರಿಗೆ ಸೋಂಕು ತಗುಲಿಲ್ಲ’ ಎಂದು ಹೇಳಿದ್ದಾರೆ.

‘ಸೆ.22ರಂದು ಮಾಶಾಳದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ 203 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಿದಾಗ ನಾಲ್ಕು ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ವಿದ್ಯಾರ್ಥಿಗಳಿಗೆಶಾಲಾ ಆವರಣದಲ್ಲಿ ಈ ಸೋಂಕು ತಗುಲಿರುವುದು ಸಾಧ್ಯವಿಲ್ಲ ಎಂಬ ಅಂಶಗಳನ್ನು ಸ್ಥಳೀಯ ಜಿಲ್ಲಾ ಉಪನಿರ್ದೇಶಕರು ದೃಢಪಡಿಸಿದ್ದಾರೆ. ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ಸತ್ಯವಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಶಾಲೆ ಪ್ರಾರಂಭಿಸುವ ಧಾವಂತವಿಲ್ಲ’

‘ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಖಂಡಿತ ಇಲ್ಲ. ‌ನಮಗೆ ಮಕ್ಕಳ ಆರೋಗ್ಯ, ಸುರಕ್ಷತೆ ಅತ್ಯಂತ ಮುಖ್ಯ’ ಎಂದು ಸುರೇಶ್‌ಕುಮಾರ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಶಾಲೆಗಳನ್ನು ತೆರೆಯುವ ಕುರಿತು ಎಲ್ಲ ಶಾಸಕರ ಅಭಿಪ್ರಾಯವನ್ನು ಕೇಳಿದ್ದೆ. ಅಭಿಪ್ರಾಯ ಕೇಳಿದ ಮಾತ್ರಕ್ಕೆ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಸರ್ಕಾರ ಈಗಾಗಲೇ ಕೈಗೊಂಡೇ ಬಿಟ್ಟಿದೆ ಎಂದರ್ಥವಲ್ಲ’ ಎಂದು ಅವರು ಹೇಳಿದ್ದಾರೆ.

‘ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು, ಎಲ್ಲರೊಡನೆ ಸಮಾಲೋಚನೆ ನಡೆಸಿದ ನಂತರವೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

‘ಎಲ್ಲರನ್ನೂ ಕರೆದು ಸಾಧಕ–ಬಾಧಕಗಳನ್ನು ಚರ್ಚಿಸಿದ ನಂತರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಯಾವುದೇ ವದಂತಿಗೆ ಕಿವಿಗೊಡಬಾರದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.