ADVERTISEMENT

ರಾಜ್ಯದಲ್ಲಿ 2.28 ಲಕ್ಷ ಬಿಪಿಎಲ್‌ ಪಡಿತರ ಚೀಟಿ ರದ್ದು: ಸಚಿವ ಉಮೇಶ್‌ ಕತ್ತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 19:31 IST
Last Updated 9 ಮಾರ್ಚ್ 2021, 19:31 IST
ಉಮೇಶ್ ಕತ್ತಿ
ಉಮೇಶ್ ಕತ್ತಿ    

ಬೆಂಗಳೂರು: ರಾಜ್ಯದಲ್ಲಿ 2,28,188 ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ಪತ್ತೆ ಮಾಡಿ ರದ್ದುಪಡಿಸಲಾಗಿದೆ. ಅರ್ಹತೆ ಇಲ್ಲದೆ ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದ ವ್ಯಕ್ತಿಗಳಿಂದ ₹ 3.07 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ತಿಳಿಸಿದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 10.90 ಲಕ್ಷ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳು ಮತ್ತು 1.16 ಕೋಟಿ ಬಿಪಿಎಲ್‌ ಪಡಿತರ ಚೀಟಿಗಳಿವೆ. ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅದರ ಪ್ರಕಾರ ಪತ್ತೆಕಾರ್ಯ ನಡೆಯುತ್ತಿದೆ’ ಎಂದರು.

ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಪ್ರಶ್ನೆಗೆ ಉತ್ತರಿಸಿದ ಆಹಾರ ಸಚಿವರು, ‘2018–19ರಿಂದ 2020–21ರ ಅವಧಿಯಲ್ಲಿ ಪಡಿತರ ಸಾಮಗ್ರಿಯ ಅಕ್ರಮ ಸಾಗಣೆ ಮತ್ತು ದಾಸ್ತಾನು ಮಾಡಿ ಆರೋಪದಲ್ಲಿ 786 ಪ್ರಕರಣ ದಾಖಲಿಸಲಾಗಿದೆ. 63,637 ಕ್ವಿಂಟಲ್‌ ಅಕ್ಕಿ, 783 ಕ್ವಿಂಟಲ್‌ ಗೋಧಿ ಮತ್ತು 630 ಕ್ವಿಂಟಲ್‌ ರಾಗಿ ವಶಪಡಿಸಿಕೊಳ್ಳಲಾಗಿದೆ’ ಎಂದರು.

ADVERTISEMENT

ಪಡಿತರ ಚೀಟಿ ವಿತರಣೆ ಹಾಗೂ ಪಡಿತರ ಸಾಮಗ್ರಿಯ ಅಕ್ರಮ ಸಾಗಣೆ, ದಾಸ್ತಾನಿಗೆ ಸಂಬಂಧಿಸಿದಂತೆ ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ನೀಡಬೇಕೆಂಬ ಹರಿಪ್ರಸಾದ್‌ ಮನವಿಯನ್ನು ಸಭಾಪತಿ ಪುರಸ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.