ADVERTISEMENT

ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಬಿಟ್ಟು ಸಭೆ: ಸಚಿವ ಉಮೇಶ್ ಕತ್ತಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 10:31 IST
Last Updated 24 ಜನವರಿ 2022, 10:31 IST
ಉಮೇಶ್ ಕತ್ತಿ
ಉಮೇಶ್ ಕತ್ತಿ   

ಬೆಳಗಾವಿ: ‘ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಚರ್ಚಿಸುವುದಕ್ಕಾಗಿ ಮುಖಂಡರೆಲ್ಲವೂ ಸೇರಿದ್ದೆವು’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.

ಹುಕ್ಕೇರಿ ತಾಲ್ಲೂಕಿನ ಅಂಕಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ‘ನಮ್ಮ ಮನೆಯಲ್ಲಿ ನಡೆದಿದ್ದು ಗುಪ್ತ ಸಭೆ ಅಲ್ಲ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತ ಕುರಿತು ಸವಿಸ್ತಾರವಾಗಿ ಚರ್ಚಿಸಿದ್ದೇವೆ. ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಕಾರ್ಯತಂತ್ರ ಹೇಗಿರಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ಕೆಲ ನಾಯಕರು ಬಂದಿದ್ದರು. ಕೆಲವರು ಬಂದಿಲ್ಲ. ಬಂದಿದ್ದೇಕೆ, ಬಾರಲಿಲ್ಲವೇಕೆ ಎಂದು ನಾನು ಯಾರನ್ನೂ ಕೇಳಿಲ್ಲ’ ಎಂದರು.

ADVERTISEMENT

ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾರನ್ನು ಯಾರೂ ಹೊರಗಿಟ್ಟಿಲ್ಲ. ಯಾರನ್ನು ಯಾರೂ ಕರೆದಿಲ್ಲ. ತಮ್ಮಷ್ಟಕ್ಕೆ ತಾವೆ ಸೇರಿದ್ದಾರೆ. ನಾನು ಕರೆದವರು ಯಾರು ದೊಡ್ಡವರೂ ಅಲ್ಲ; ಚಿಕ್ಕವರೂ ಅಲ್ಲ. ಎಲ್ಲರೂ ಸೇರಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ಕೂಡಿದ್ದೆವಷ್ಟೆ’ ಎಂದು ತಿಳಿಸಿದರು.

‘ವಿಧಾನಪರಿಷತ್‌ ಚುನಾವಣೆಯಲ್ಲಿ ಸೋತ ಮಹಾಂತೇಶ ಕವಟಗಿಮಠ ಅವರು ಎಲ್ಲರನ್ನೂ ಕೂಡಿಸಿದ್ದರು. ಯಾವ ಶಾಸಕರನ್ನು ಕರೆದಿದ್ದಾರೆ, ಯಾರನ್ನು ಕರೆದಿರಲಿಲ್ಲ ಎನ್ನುವುದು ನನಗೆ ಗೊತ್ತಿಲ್ಲ’ ಎಂದರು.

‘ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ನಿರ್ಧಾರ ತಗೆದುಕೊಳ್ಳುತ್ತಾರೆ. ಆ ಬಗ್ಗೆ ನಾನು ಮಾತನಾಡುವುದಿಲ್ಲ. ಸಭೆಯಲ್ಲಿ ಆ ಕುರಿತು ಚರ್ಚಿಸಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.