ADVERTISEMENT

ಜನ ಜಾಗರಣ ಅಭಿಯಾನಕ್ಕೆ ಸಚಿವರು: ವ್ಯಾಪಕ ವಿರೋಧ

370 ವಿಧಿ ರದ್ದು ಕುರಿತು ರಾಜ್ಯವ್ಯಾಪಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:40 IST
Last Updated 20 ಸೆಪ್ಟೆಂಬರ್ 2019, 19:40 IST

ಬೆಂಗಳೂರು: ರಾಜ್ಯದಲ್ಲಿ ನೆರೆ ಮತ್ತು ಬರದಿಂದ ಜನತೆ ಹೈರಾಣವಾಗಿರುವಾಗ ಸಚಿವರು ಮತ್ತು ಬಿಜೆಪಿ ಶಾಸಕರುಜಮ್ಮು–ಕಾಶ್ಮೀರದ ವಿಶೇಷಾಧಿಕಾರ ನೀಡುವ 370ನೇ ವಿಧಿ ರದ್ದು ಮಾಡಿರುವುದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ನೆರೆ ಪೀಡಿತ ಪ್ರದೇಶದಲ್ಲಿ ಜನ ಸಂಕಷ್ಟದಿಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ ಸಚಿವರು ಸರಿಯಾಗಿ ಸ್ಪಂದಿಸದೇ ಕಾಶ್ಮೀರದ ಬಗ್ಗೆ ಅರಿವು ಮೂಡಿಸುವ ಅಗತ್ಯವೇನಿದೆ. ಒಂದು ಕಡೆ ನೆರೆ, ಮತ್ತೊಂದು ಕಡೆ ಬರ ಇರುವಾಗ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರು ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಿತ್ತು ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

‘ಸದ್ಯಕ್ಕೆ ಚುನಾವಣೆ ಹತ್ತಿರವಿಲ್ಲ. ಆದರೂ ಆ ಪ್ರಮಾಣದ ಅಭಿಯಾನದ ಅಗತ್ಯವೇನಿದೆ. ಕೇಂದ್ರ ಸರ್ಕಾರದಿಂದ ನೆರೆ ಪರಿಹಾರಕ್ಕೆ ಇನ್ನೂ ಹಣವನ್ನು ಬಿಡುಗಡೆ ಮಾಡಿಲ್ಲ. ಪರಿಹಾರದ ಹಣವನ್ನು ತರುವುದಕ್ಕೆ ಹೆಚ್ಚಿನ ಗಮನಹರಿಸಬೇಕಲ್ಲವೇ’ ಎಂಬ ಪ್ರಶ್ನೆಯೂ ಕೇಳಿಬಂದಿದೆ.

ADVERTISEMENT

ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವರು ಇನ್ನೂ ತಮ್ಮ ಇಲಾಖೆಗಳ ಕಾರ್ಯಚಟುವಟಿಕೆಗಳ ಮಾಹಿತಿ ಪಡೆಯುವುದರಲ್ಲೇ ನಿರತರಾಗಿದ್ದಾರೆ. ರಾಜ್ಯವೂ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆರ್ಥಿಕ ಸ್ಥಿತಿಯನ್ನು ಸರಿಪಡಿಸುವ ಕಡೆಗೂ ಗಮನಹರಿಸುತ್ತಿಲ್ಲ ಎಂದು ವಿರೋಧಪಕ್ಷಗಳೂ ಹರಿಹಾಯ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.