ADVERTISEMENT

ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಆರೋಪಿಯ ಬಂಧನ

ಗಂಡುಮಗುವಿಗೆ ಜನ್ಮ ನೀಡಿದ 16 ವರ್ಷದ ಬಾಲಕಿ, ಹಸುಳೆಯನ್ನು ಮರಕ್ಕೆ ನೇತುಹಾಕಿ ಹೋದ ಆರೋಪಿಗಳು, ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 7:37 IST
Last Updated 2 ಸೆಪ್ಟೆಂಬರ್ 2022, 7:37 IST
   

ಬೆಳಗಾವಿ: ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು, ಮಗು ಹೆರಲು ಕಾರಣವಾದ ಯುವಕನನ್ನು ಖಾನಾಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಖಾನಾಪುರ ತಾಲ್ಲೂಕಿನ ಗೌಳಿವಾಡ ಗ್ರಾಮದ ಮಲ್ಲು ಅಪ್ಪು ಪಿಂಗಳೆ (19) ಬಂಧಿತ. ಇದೇ ತಾಲ್ಲೂಕಿನ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ, ಕೆಲ ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಪರಿಣಾಮ ಬಾಲಕಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಆರೋಪಿ ಮೇಲೆ ‘ಪೋಕ್ಸೊ’ ಅಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?:

ADVERTISEMENT

ಗೌಳಿವಾಡದ ಮಲ್ಲು ಹಾಗೂ ಖಾನಾಪುರ ತಾಲ್ಲೂಕಿನ ಹಳ್ಳಿಯೊಂದರ ಶಾಲಾ ಬಾಲಕಿ ಮಧ್ಯೆ ಪ್ರೇಮ ಉಂಟಾಗಿತ್ತು. ಹಲವು ತಿಂಗಳಿಂದ ಇಬ್ಬರ ಮಧ್ಯೆ ದೈಹಿಕ ಸಂಪರ್ಕ ಏರ್ಪಟ್ಟು, ಬಾಲಕಿ ಗರ್ಭ ಧರಿಸಿದ್ದಳು. ಆಗಸ್ಟ್‌ನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಳು.

ಆಗಸ್ಟ್‌ 25ರಂದು ಗೌಳಿವಾಡ ಗ್ರಾಮ ಹೊರವಲಯದ ಮರಕ್ಕೆ ನೇತು ಹಾಕಿದ ಪ್ಲಾಸ್ಟಿಕ್‌ ಚೀಲದಲ್ಲಿ ಹಸುಳೆಯೊಂದು ಪತ್ತೆಯಾಗಿತ್ತು. ಗ್ರಾಮದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ಎನ್ನುವವರು, ಮಗು ಅಳುವ ಶಬ್ದ ಕೇಳಿ ಅದನ್ನು ರಕ್ಷಿಸಿದ್ದರು. ಆಂಬುಲೆನ್ಸ್‌ ಮೂಲಕ ಹಸುಳೆಯನ್ನು ಖಾನಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಅದಾಗಲೇ ಕೂಸು ತೀವ್ರ ನಿತ್ರಾಣಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಹಸುಳೆಗೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ವಾರದ ಬಳಿಕ ಈ ಪ್ರಕರಣ ಭೇದಿಸಿದ ಖಾನಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದರು. ಆಗ 16 ವರ್ಷದ ಬಾಲಕಿಯ ಜೊತೆಗೆ ಬೆಳೆಸಿದ ಸಂಬಂಧದ ಕಾರಣ ಮಗು ಜನಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.